ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಮುಂಗಾರು ಮಳೆಯಬ್ಬರ ಮುಂದುವರಿದಿದ್ದು, ದಕ್ಷಿಣ ಕನ್ನಡ, ಕೊಡಗು, ಮಂಗಳೂರು, ಚಿಕ್ಕಮಗಳೂರು, ಕಲಬುರಗಿ, ಬಾಗಲಕೋಟೆ, ಬೆಳಗಾವಿ, ಹಾವೇರಿ, ಧಾರವಾಡ, ಗದಗ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆ ಶನಿವಾರ ಧಾರಕಾರ ಮಳೆಯಾಗಿದೆ.

ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಮಳೆಯ ಅಬ್ಬರದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಗ್ರಾಮೀಣ ಪೊಲೀಸ್ ಠಾಣೆಗೆ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅಗಡಿ ಗ್ರಾಮದ ಜಮೀನಿನಲ್ಲಿ ನಿರ್ಮಿಸಿರುವ ಮನೆ ಜಲಾವೃತವಾಗಿದೆ. ಇನ್ನು ಗದಗ ಜಿಲ್ಲೆಯಲ್ಲಿ 1 ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಉತ್ತರ ಕನ್ನಡ, ಹುಬ್ಬಳ್ಳಿ- ಧಾರವಾಡದಲ್ಲಿ ಮುಕ್ಕಾಲು ತಾಸು ಉತ್ತಮ ಮಳೆ ಸುರಿದಿದೆ. ಮಳೆಯಿಂದಾಗಿ ಹಲವೆಡೆ ಮರಗಳು ಧರೆಗುರುಳಿವೆ.

ಮಂಗಳೂರು, ಬಂಟ್ವಾಳ, ಮೂಲ್ಕಿ, ಮೂಡುಬಿದಿರೆ, ಉಳ್ಳಾಲ, ಬೆಳ್ತಂಗಡಿ, ಪುತ್ತೂರು, ಕಡಬ, ಸುಳ್ಯ ತಾಲೂಕಿನ ವಿವಿಧೆಡೆ ಉತ್ತಮ ಮಳೆ ಸುರಿದಿದೆ. ನಗರದ ಕದ್ರಿ ಪಾರ್ಕ್‌ ಬಳಿಕ ತಡೆಗೋಡೆ ಕುಸಿದು ಪಾರ್ಕ್‌ ಮಾಡಿದ್ದ ಕಾರಿಗೆ ಹಾನಿಯಾಗಿದೆ. ನಿರಂತರ ಮಳೆಯಿಂದ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರ, ಪಯಸ್ವಿನಿ, ಗುಂಡ್ಯ, ಫಲ್ಗುಣಿ ಸೇರಿದಂತೆ ನದಿ, ಹೊಳೆಗಳಲ್ಲಿ ನೀರಿನ ಹರಿವು ಹೆಚ್ಚಳವಾಗುತ್ತಿವೆ.

ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ ನದಿ ಪಾತ್ರಗಳಲ್ಲಿ ನೀರಿನ ಹರಿವು ಹೆಚ್ಚಾಗಲಿದ್ದು, ಜಿಲ್ಲೆಯಾದ್ಯಂತ ಮಳೆಗಾಲ ಮುಕ್ತಾಯ ಆಗುವವರೆಗೆ ಮರಳುಗಾರಿಕೆ, ಮರದ ದಿಮ್ಮಿಗಳ ಸಾಗಣೆ ಮತ್ತು ಇತರೆ ಸರಕು ಸಾಗಾಣಿಕೆ ಸೇರೆ ಜು.9ರ ತನಕ ಭಾರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಳೆಗೆ 2 ಅಂತಸ್ತಿನ ಕಟ್ಟಡ ನೆಲಸಮ ಆಗಿದೆ.


ಕಲಬುರಗಿಯ ಚಿಂಚೋಳಿಯಲ್ಲಿ ಬಿರುಸಿನ ಮಳೆಯಾಗಿದ್ದು, ಚಿಮ್ಮನ್‌ ಚೋಡ್‌ ನರನಾಳ ರಾಜ್ಯ ಹೆದ್ದಾರಿಯ ಮುಖ್ಯರಸ್ತೆ, ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಮುಖ್ಯ ಕಾಲುವೆಗೆ ನಿರ್ಮಿಸಿದ ಸೇತುವೆ ಕುಸಿತವಾಗಿದೆ. ಇದೇ ವೇಳೆ ಬೀದರ್‌ನ ಹುಮ್ನಾಬಾದ್ ಮೂಲಕ ಚಿಂಚೋಳಿಗೆ ಹೊರಟಿದ್ದ ಬಸ್ ಕೆಲವೇ ಕ್ಷಣದಲ್ಲಿ ರಸ್ತೆ ದಾಟಬೇಕಾಗಿತ್ತು. ಆದರೆ, ದಿಢೀರ್‌ ರಸ್ತೆ ಕುಸಿದ ಪರಿಣಾಮ ಚಾಲಕ ಬ್ರೇಕ್ ಹಾಕಿ ಅನಾಹುತ ತಪ್ಪಿಸಿದ್ದಾನೆ.

ಕಾಫಿನಾಡು ಚಿಕ್ಕಮಗಳೂರಿನ ಕಡೂರು, ಬೀರೂರು ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆಯಿಂದ ಜಿಲ್ಲೆಗೆ ಭಾನುವಾರ ಆರೆಂಜ್‌ ಅಲರ್ಟ್‌, ಜೂನ್‌ 13ರ ವರೆಗೆ ಯೆಲ್ಲೋ ಅಲರ್ಟ್‌ ಮುನ್ಸೂಚನೆ ನೀಡಿದೆ.