ನೀರು ಹರಿಯುವ ಮಾರ್ಗಗಳ ಹೂಳು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಲು ಸ್ಥಳೀಯ ಸಂಸ್ಥೆಗಳು ಹಾಗೂ ನೀರಾವರಿ ಇಲಾಖೆ ಮುಂದಾಗಬೇಕು.
ಬಳ್ಳಾರಿ: ಮುಂಗಾರು ಅವಧಿಯಲ್ಲಿ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿ ಮತ್ತು ಭಾರೀ ಮಳೆಯಿಂದ ಉಂಟಾಗುವ ಹಾನಿಗಳನ್ನು ತಡೆಗಟ್ಟಲು ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಕಟ್ಟುನಿಟ್ಟಿನ ಆದೇಶ ನೀಡಿದರು.
ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಪೂರ್ವಸಿದ್ಧತೆ ಹಾಗೂ ಕುಡಿಯುವ ನೀರು ಪೂರೈಕೆ ಕುರಿತು ಬುಧವಾರ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮುಂಬರುವ ಮುಂಗಾರು ಮಳೆ ಎದುರಿಸಲು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ಅನ್ವಯ ಮುಂದಿನ ವಾರ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ಇದೆ. ಭಾರೀ ಮಳೆ ಅಥವಾ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತವು ಸಂಪೂರ್ಣ ಸನ್ನದ್ಧವಾಗಿದೆ ಎಂದರು.ಮುಂಗಾರು ಪ್ರವೇಶವಾಗಿದ್ದು, ಜಿಲ್ಲೆಯ ಎಲ್ಲ ಪ್ರಮುಖ ಚರಂಡಿಗಳು, ನಾಲಾಗಳು ಮತ್ತು ನೀರು ಹರಿಯುವ ಮಾರ್ಗಗಳ ಹೂಳು ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಲು ಸ್ಥಳೀಯ ಸಂಸ್ಥೆಗಳು ಹಾಗೂ ನೀರಾವರಿ ಇಲಾಖೆ ಮುಂದಾಗಬೇಕು. ಬ್ಲಾಕೇಜ್‌ಗಳನ್ನು ತೆರವುಗೊಳಿಸಲು ಮತ್ತು ಹಾನಿಗೊಳಗಾದ ಚರಂಡಿ ಸ್ಲ್ಯಾಬ್‌ಗಳನ್ನು ತಕ್ಷಣ ಬದಲಾಯಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಮಟ್ಟದಲ್ಲಿ 24*7 ಕಾರ್ಯನಿರ್ವಹಿಸುವ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ ಹಾಗೂ ನಿಯಂತ್ರಣ ಕೊಠಡಿಗಳನ್ನು ಸಕ್ರಿಯವಾಗಿದೆ. ಮಳೆಯ ತೀವ್ರತೆಯ ಆಧಾರದ ಮೇಲೆ ಹೈ, ಮೀಡಿಯಂ ಮತ್ತು ಲೋ ರಿಸ್ಕ್ ಪ್ರದೇಶಗಳನ್ನು ಗುರುತಿಸಿ ತಕ್ಷಣವೇ ಮುನ್ಸೂಚನೆ ರವಾನಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಪ್ರವಾಹ ಪೀಡಿತ ಸೂಕ್ಷ್ಮ ಪ್ರದೇಶಗಳಲ್ಲಿ ಲೈಫ್ ಗಾರ್ಡ್ಸ್, ಬೋಟ್‌ಗಳು, ಲೈಫ್ ಜಾಕೆಟ್‌ಗಳು ಮತ್ತು ಸುರಕ್ಷತಾ ರೋಪ್‌ಗಳನ್ನೊಳಗೊಂಡ ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲು ಅಗ್ನಿಶಾಮಕ, ಪೊಲೀಸ್ ಮತ್ತು ಹೋಂಗಾರ್ಡ್ ಇಲಾಖೆಗಳಿಗೆ ಜವಾಬ್ದಾರಿ ವಹಿಸಿದರು.
ಮಳೆಗೆ ಕುಸಿಯಬಹುದಾದ ಹಳೆಯ ಹಾಗೂ ಅಪಾಯಕಾರಿ ಮನೆಗಳನ್ನು ತಾಲೂಕುವಾರು ಗುರುತಿಸಿ, ಅಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಬೇಕು. ನದಿ ಪಾತ್ರದ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಬೇಕು. ಅದರಂತೆ ಶಿಥಿಲಗೊಂಡ ಹಳೆಯ ಕಟ್ಟಡಗಳ ಶಾಲೆಗಳ ಗೋಡೆ, ಅಂಗನವಾಡಿ ಕೇಂದ್ರಗಳಿದ್ದಲ್ಲಿ ಅಂತಹವುಗಳನ್ನು ಗುರುತಿಸಿ ಕೂಡಲೇ ಸ್ಥಳಾಂತರಿಸಲು ಮುಂದಾಗಬೇಕು ಎಂದರು.ಪ್ರವಾಹ ಅಥವಾ ತುರ್ತು ಸಂದರ್ಭಗಳಲ್ಲಿ ತಕ್ಷಣವೇ ಕುಡಿಯುವ ನೀರು ಒದಗಿಸಲು ಟ್ಯಾಂಕರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಹಾಗೂ ಜಿಲ್ಲೆಯ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿ ನಿರ್ವಹಿಸಲು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಏಪ್ರಿಲ್ 1 ರಿಂದ ಮೇ 31 ರವರೆಗಿನ ಮುಂಗಾರು ಪೂರ್ವ ಅವಧಿಯಲ್ಲಿ ಸಂಭವಿಸಿದ ಮಳೆ, ಬಿರುಗಾಳಿ ಹಾಗೂ ಸಿಡಿಲಿನಿಂದ ಉಂಟಾದ ಹಾನಿಗಳ ವಿವರಗಳನ್ನು ಸಭೆಯಲ್ಲಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು, ಮನೆ ಹಾನಿ, ಜೀವಹಾನಿ ಹಾಗೂ ಜಾನುವಾರು ಹಾನಿಗೆ ಸಂಬಂಧಿಸಿದಂತೆ ಕೂಡಲೇ ಪರಿಹಾರ ತಲುಪಿಸಬೇಕು ಎಂದರು.ಸಭೆಯಲ್ಲಿ ವಿಡಿಯೋ ಸಂವಾದದ ಮೂಲಕ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್. ಮಂಜುನಾಥ, ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.