ಮುಂಗಾರು ಹಂಗಾಮು ಪ್ರಾರಂಭವಾಗಿದ್ದರಿಂದ ಪಟ್ಟಣದ ಕೃಷಿ ಇಲಾಖೆಯಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯ ನಡೆದಿದ್ದು, ಈ ವೇಳೆ ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ಉಂಟಾಗಿ ವಿತರಣೆ ಸ್ಥಗಿತಗೊಳಿಸಿ ಗೋದಾಮಿನ ಬಾಗಿಲು ಮುಚ್ಚಿದ ಘಟನೆ ನಡೆಯಿತು.
ಬಂಕಾಪುರ: ಮುಂಗಾರು ಹಂಗಾಮು ಪ್ರಾರಂಭವಾಗಿದ್ದರಿಂದ ಪಟ್ಟಣದ ಕೃಷಿ ಇಲಾಖೆಯಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯ ನಡೆದಿದ್ದು, ಈ ವೇಳೆ ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ಉಂಟಾಗಿ ವಿತರಣೆ ಸ್ಥಗಿತಗೊಳಿಸಿ ಗೋದಾಮಿನ ಬಾಗಿಲು ಮುಚ್ಚಿದ ಘಟನೆ ನಡೆಯಿತು.
ಬೆಳಗ್ಗೆ ರೈತರಿಗೆ ಬಿತ್ತನೆ ಬೀಜ ಕಾರ್ಯದ ಉದ್ಘಾಟನೆಯನ್ನು ಪಟ್ಟಣದ ಮುಖಂಡರು ಸೇರಿ ಮಾಡಿದ್ದರು. ಮುಂಜಾನೆಯಿಂದಲೇ ರೈತರಿಂದ ದಾಖಲೆಗಳನ್ನು ಪಡೆದುಕೊಂಡು ಸಮರ್ಪಕವಾಗಿ ಬಿತ್ತನೆ ಬೀಜದ ಪಾಕೆಟ್‌ಗಳನ್ನು ನೀಡುವ ಕಾರ್ಯ ನಡೆದಿತ್ತು. ಸಮರ್ಪಕ ಬೀಜ ದಾಸ್ತಾನಿದ್ದರೂ ಕೆಲವು ರೈತರು ನೂಕು ನುಗ್ಗಲಿನಿಂದ ಅಧಿಕಾರಿಗಳ ಕೆಲಸಕ್ಕೆ ಅಡೆತಡೆ ಆಗಿದ್ದರಿಂದ ಗೋದಾಮಿನ ಬಾಗಿಲು ಮುಚ್ಚಿ ವಿತರಣೆ ಕಾರ್ಯ ಸ್ಥಗಿತಗೊಳಿಸಿ ನಾಳೆ ನೀಡಲಾಗುವುದು ಎಂದು ಕೃಷಿ ಅಧಿಕಾರಿ ಶ್ರೀಧರ ದಾಸರ ಹೇಳಿದರು. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಬೆಳಗ್ಗೆಯಿಂದಲೇ ಕೃಷಿ ಇಲಾಖೆ ಮುಂದೆ ಬ್ಯಾರಿಕೇಡ್ ಹಾಕಿ ರೈತರಿಗೆ ಸಾಲಾಗಿ ಹೋಗಲು ತಿಳಿಸಿ ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೂಡಿದ್ದರಿಂದ ನೂಕು ನುಗ್ಗಲು ಜಾಸ್ತಿ ಆಗಿ ಪರಿಸ್ಥಿತಿ ಉದ್ವಿಗ್ನಗೊಂಡಿತು.ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ದೇವರಾಜ ಹಳವಳ್ಳಿ ಹಾಗೂ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಶಶಿಧರ ಹೊನ್ನಣ್ಣವರ, ಕೃಷಿ ಅಧಿಕಾರಿಗಳ ಮನವೊಲಿಸಲು ಯತ್ನಿಸಿದರೂ ಪ್ರಯತ್ನ ವಿಫಲವಾಯಿತು. ಸರಿಯಾದ ವ್ಯವಸ್ಥೆಯೊಂದಿಗೆ ನಾಳೆ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು ಎಂದು ಹೇಳಿ ಕೃಷಿ ಅಧಿಕಾರಿಗಳು ಹೊರಟು ಹೋದರು. ಈ ವೇಳೆ ಬಿಜೆಪಿ ತಾಲೂಕು ಮಂಡಳ ಅಧ್ಯಕ್ಷ ವಿಶ್ವನಾಥ ಹರವಿ, ಉಮೇಶ ಅಂಗಡಿ, ಮಂಜುನಾಥ ಕುಂದಗೋಳ, ವಿರೂಪಾಕ್ಷಪ್ಪ ರಾಣೋಜಿ, ಶಂಭು ಕುರಗೋಡಿ, ಮಂಜುನಾಥ ತಳವಾರ, ಮಾಲತೇಶ ಕೋರಿ, ಮಂಜು ಸವೂರ ಇದ್ದರು.