3.21 ಲಕ್ಷ ಹೆಕ್ಟೇರುವಿನಲ್ಲಿ ಮುಂಗಾರು ಬಿತ್ತನೆ ಗುರಿ

| Published : May 21 2024, 12:37 AM IST

3.21 ಲಕ್ಷ ಹೆಕ್ಟೇರುವಿನಲ್ಲಿ ಮುಂಗಾರು ಬಿತ್ತನೆ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರ ಮನದಲ್ಲಿ ಮುಂಗಾರು ಬಿತ್ತನೆ ಗರಿಗೆದರಿದೆ. ಜಮೀನು ಹದ ಮಾಡಿಕೊಳ್ಳುವ ನಿಟ್ಟಿನಲ್ಲಿ ರೈತರು ತಯಾರಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಿತ್ರದುರ್ಗ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರ ಮನದಲ್ಲಿ ಮುಂಗಾರು ಬಿತ್ತನೆ ಚಿಗುರೊಡೆದಿದೆ. ಕಳೆದ ವರ್ಷ ಮುಂಗಾರ ಕೈಕೊಟ್ಟ ಕಹಿ ನೆನಪುಗಳ ಗುಂಗಿನಲ್ಲಿರು ರೈತಾಪಿ ಸಮುದಾಯ ಈ ಬಾರಿ ಹಾಗಾಗದಿರಲೆಂದು ವರುಣನ ಪ್ರಾರ್ಥಿಸುತ್ತಿದ್ದಾರೆ. ಬಿತ್ತನೆಗೆ ಜಮೀನು ಹದ ಮಾಡಿಕೊಳ್ಳುವ ದೃಶ್ಯಗಳು ಅಲ್ಲಲ್ಲಿ ಕಾಣುತ್ತಿವೆ.

ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸನ್ನದ್ಧವಾಗಿದ್ದು, ಈ ಬಾರಿ ಒಟ್ಟಾರೆ 3.21 ಲಕ್ಷ ಹೆಕ್ಟೇರು ಬಿತ್ತನೆ ಗುರಿ ಹೊಂದಲಾಗಿದೆ.1.54 ಲಕ್ಷ ಹೆಕ್ಟೇರ್‌ನಲ್ಲಿ ಏಕದಳ ಧಾನ್ಯ, 27 ಸಾವಿರ ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ, 90 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ,46 ಸಾವಿರ ಹೆಕ್ಚೇರ್‌ನಲ್ಲಿ ರಾಗಿ ಹಾಗೂ 12,800 ಹೆಕ್ಟೇರ್ ಪ್ರದೇಶ ದಲ್ಲಿ ಸಿರಿಧಾನ್ಯ, 1.14 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆಕಾಳು, 13 ಸಾವಿರ ಹೆಕ್ಟೇರು ಹತ್ತಿ ಬಿತ್ತನೆ ಗುರಿಯಲ್ಲಿ ಸೇರಿದೆ.

ಇನ್ನೊಂದೆರೆಡು ದಿನ ಮಳೆ ಸುರಿದಲ್ಲಿ ರೈತರು ಮೆಕ್ಕೆಜೋಳ, ಸೂರ್ಯಕಾಂತಿ ಬಿತ್ತನೆಗೆ ಮುಂದಾಗುತ್ತಾರೆ. ಶೇಂಗಾ ಬಿತ್ತನೆಗೆ ಮತ್ತಷ್ಟು ಕಾಲಾವಕಾಶವಿದೆ. ಜುಲೈ ಮಧ್ಯಭಾಗದಲ್ಲಿ ರೈತರು ಬಿತ್ತನೆ ಶುರು ಮಾಡುತ್ತಾರೆ. ಚಳ್ಳಕೆರೆ ತಾಲೂಕಿನಲ್ಲಿ ಅತಿ ಹೆಚ್ಚಿನ ಸೇಂಗಾ ಬಿತ್ತನೆ ಪ್ರದೇಶವಿದೆ.

ಸೂಗೂರುನಲ್ಲಿ 52.4 ಮಿ.ಮೀ.ಮಳೆ: ಭಾನುವಾರ ಸುರಿದ ಮಳೆ ವಿವರದನ್ವಯ ಹಿರಿಯೂರು ತಾವೂಕಿನ ಸೂಗೂರುನಲ್ಲಿ 52.4ಮಿ.ಮೀ ಮಳೆಯಾಗಿದೆ. ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಮಳೆಯಾಗಿದೆ. ಹಿರಿಯೂರು 11.4 ಮಿಮೀ, ಇಕ್ಕನೂರು 26,ಈಶ್ವರಗೆರೆ 21.8, ಬಬ್ಬೂರು 14.4 ಮಿಮೀ ಮಳೆಯಾಗಿದೆ.

ಚಿತ್ರದುರ್ಗ 10.9 ಮಿಮೀ, ತುರುವನೂರು 12.6, ಐನಹಳ್ಳಿ 9.2, ಹಿರೇಗುಂಟನೂರು 8.7, ಸಿರಿಗೆರೆ 26.2, ಭರಮಸಾಗರದಲ್ಲಿ 35, ಹೊಸದುರ್ಗದಲ್ಲಿ 46.8, ಮಾಡದಕೆರೆಯಲ್ಲಿ 40, ಮತ್ತೋಡಿನಲ್ಲಿ 10.4 ಹಾಗೂ ಶ್ರೀರಾಂಪುರದಲ್ಲಿ 30.2 ಮಿಮೀ ಮಳೆಯಾಗಿದೆ. ಚಳ್ಳಕೆರೆಯಲ್ಲಿ 28.9 ಮಿಮೀ, ಪರಶುರಾಂಪುರ 32.8, ನಾಯಕನಹಟ್ಟಿ 29.2, ತಳಕು 21.4, ಡಿ.ಮರಿಕುಂಟೆಯಲ್ಲಿ 20.2, ಮೊಳಕಾಲ್ಮುರಿನಲ್ಲಿ 23 ಮಿಮೀ, ಬಿ.ಜಿ.ಕೆರೆ 37 ಮಿ.ಮೀ ಮಳೆಯಾಗಿದೆ. ಭಾನುವಾರ ಸುರಿದ ಮಳೆಗೆ ಜಿಲ್ಲೆಯಾದ್ಯಂತ ಭಾಗಶಃ 12 ಮನೆಗಳು ಹಾಗೂ 5.53 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಮೊಳಕಾಲ್ಮುರಲ್ಲಿ ತಂಪೆರೆದ ಮಳೆ:

ಮೊಳಕಾಲ್ಮುರು ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಮಳೆಯು ಇಳೆಯನ್ನು ತಂಪಾಗಿಸಿದ್ದು, ರೈತರಲ್ಲಿ ಹರ್ಷ ತರಿಸಿದೆ. ತಾಲೂಕಿನಲ್ಲಿ ಕಳೆದ ಬಾರಿಯ ಭೀಕರ ಬರದಿಂದ ರೈತರು ಸಂಕಷ್ಟಕ್ಕೀಡಾಗಿದ್ದರು. ಜನ ಜಾನುವಾರುಗಳು ಇನ್ನಿಲ್ಲದಂತೆ ಪರಿತಪಿಸುವಂತಾಗಿತ್ತು. ವರುಣನ ಆಗಮನಕ್ಕಾಗಿ ಕಾದು ಕುಳಿತಿದ್ದ ಜನತೆಗೆ ಕಳೆದ ರಾತ್ರಿ ಸುರಿದ ಉತ್ತಮ ಹದದ ಮಳೆಯು ಸುಡು ಬಿಸಿಲಿಗೆ ಕಾದಿದ್ದ ಭೂಮಿಯನ್ನು ತಂಪಾಗಿಸಿದೆ. ರಾಂಪುರ ಹಾಗು ದೇವಸಮುದ್ರ ಹೊರತು ಪಡಿಸಿದರೆ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಅಷ್ಟೇನೂ ಜೋರು ಮಳೆ ಅಲ್ಲದಿದ್ದರೂ ಹೊಲ ಹಸನುಗೊಳಿಸಲು ಅನುಕೂಲವಾಗುವಂಥ ಉತ್ತಮ ಹದ ಮಳೆಯಾಗಿದೆ. ಮೊಳಕಾಲ್ಮುರು 23.0,ರಾಯಾಪುರ 7.8,ಬಿಜಿಕೆರೆ 37.0,ರಾಂಪುರ 2.2,ದೇವಸಮುದ್ರ 4.0 ಮಿ.ಮೀ ಮಳೆಯಾಗಿದೆ.ವಾಣಿವಿಲಾಸದಲ್ಲಿ 112 ಅಡಿ ನೀರು: ಹಿರಿಯೂರುತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಪ್ರಸಕ್ತ ಸಾಲಿನಲ್ಲಿ ಮೊದಲ ಬಾರಿಗೆ ಒಳಹರಿವು ಆರಂಭವಾಗಿದ್ದು, ಜಲಾಶಯಕ್ಕೆ 3800 ಕ್ಯೂಸೆಕ್ಸ್ ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 112 ಅಡಿ ತಲುಪಿದೆ. ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಇದೇ ರೀತಿ ಮಳೆ ಸುರಿದರೆ ಇನ್ನು ಹೆಚ್ಚಿನ ಹೊಸ ನೀರು ವಿವಿ ಸಾಗರದ ಒಡಲು ಸೇರುವ ನಿರೀಕ್ಷೆಯಿದೆ.ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಮಳೆ ವಿವರದನ್ವಯ ಸೂಗೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸೂಗೂರಿನಲ್ಲಿ 52.4, ಇಕ್ಕನೂರು 26, ಈಶ್ವರಗೆರೆ 21.8, ಬಬ್ಬೂರು 14.4, ಹಾಗೂ ಹಿರಿಯೂರು 11.4 ಮಿಲಿ ಮೀಟರ್ ಮಳೆಯಾಗಿದೆ.

31 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನುಮುಂಗಾರು ಹಂಗಾಮು ಸಮರ್ಪಕ ನಿರ್ವಹಣೆಗೆ ಕೃಷಿ ಇಲಾಖೆ ಸನ್ನದ್ದವಾಗಿ್ದ್ದು 31 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ 31 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಿದೆ. ಮೆಕ್ಕೇಜೋಳ, ಸಿರಿಧಾನ್ಯ , ಸೇಂಗಾ ಬಿತ್ತನೆ ಬೀಜ ದಾಸ್ತಾನಿದೆ. ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 64 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಇದರಲ್ಲಿ 31 ಸಾವಿರ ಮೆಟ್ರಿಕ್ ಟನ್ ದಾಸ್ತಾನು ಇದ್ದು ಉಳಿದದ್ದು ಮೇ ತಿಂಗಳ ಅಂತ್ಯಕ್ಕೆ ಸರಬರಾಜು ಆಗಲಿದೆ ಎಂದು ಕೃಷಿ ಜಂಟಿ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.

ಬಿತ್ತನೆಗೆ ಇನ್‌ಪುಟ್ ಸಬ್ಸಿಡಿ ನೆರವು

ಮುಂಗಾರು ಹಂಗಾಮು ಬಿತ್ತನೆಗೆ ಈ ಬಾರಿ ಕಿಂಚಿತ್ತಾದರೂ ಇನ್‌ಪುಟ್ ಸಬ್ಸಿಡಿ ನೆರವಾಗಿದೆ. ಮಳೆಗಾಲ ಮೇ ತಿಂಗಳ ಮೊದಲ ವಾರದಲ್ಲಿ ಜಿಲ್ಲೆಯ 1,31,776 ಮಂದಿ ರೈತರಿಗೆ 114 ಕೋಟಿಯಷ್ಟು ಇನ್ ಪುಟ್ ಸಬ್ಸಿಡಿ ನೇರವಾಗಿ ಡಿಬಿಟಿ ಮೂಲಕ ರೈತರ ಖಾತೆಗೆ ಜಮೆಯಾಗಿತ್ತು. ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯ 2,40,256 ಹೆಕ್ಟೇರು ಪ್ರದೇಶದಲ್ಲಿ ಖುಷ್ಕಿ, ತೋಟಗಾರಿಕೆ ಬೆಳೆ ಹಾನಿಯಾಗಿತ್ತು. ಇದರಲ್ಲಿ ಚಳ್ಳಕೆರೆ ತಾಲೂಕಿನಲ್ಲಿ 80130 ಹೆಕ್ಟೇರು, ಚಿತ್ರದುರ್ಗದಲ್ಲಿ 44066 ಹೆಕ್ಟೇರು, ಹಿರಿಯೂರಿನಲ್ಲಿ 32266 ಹೆಕ್ಟೇರು, ಹೊಳಲ್ಕೆರೆಯಲ್ಲಿ 24993 ಹೆಕ್ಟೇರು, ಹೊಸದುರ್ಗದಲ್ಲಿ 36003 ಹೆಕ್ಟೇರು ಹಾಗೂ ಮೊಳಕಾಲ್ಮುರು ತಾಲೂಕಿನಲ್ಲಿ 22837 ಹೆಕ್ಟೇರು ಬೆಳೆ ಹಾನಿಯಾಗಿತ್ತು. ಒಟ್ಟು 144769 ಕೋಟಿಯಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿತ್ತು. ಹಾನಿ ಪ್ರಮಾಣದಷ್ಟೇ ಇನ್ ಪುಟ್ ಸಬ್ಸಿಡಿ ವಿತರಣೆ ಮಾಡಲಾಗಿದ್ದು, ಇದರಿಂದ ಬಿತ್ತನೆ ವೇಳೆ ಕಿಂಚಿತ್ತಾದರೂ ನೆರವು ಸಾಧ್ಯವಾಗಿದೆ.ಚಳ್ಳಕೆರೆ: ನೆಲಹಸಿಯಾಗಿಸಿ ನೀರಿನ ಅಭಾವ ನೀಗಿದ ಕೃತಿಕಾ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಪ್ರಸ್ತುತ ವರ್ಷದ ಕೃತಿಕ ಮಳೆ ಚಳ್ಳಕೆರೆ ತಾಲ್ಲೂಕಿನಾದ್ಯಂತ ನಿರೀಕ್ಷೆಗೂ ಮೀರಿ ಉತ್ತಮವಾಗಿ ಎಲ್ಲೆಡೆ ಮಳೆಯಿಂದ ನೆಲಹಸಿಯಾಗಿ ನೀರಿನ ಅಭಾವವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದೆ. ಮಳೆಯಿಂದ ಕೆಲವೆಡೆ ಹಾನಿಯಾದರೂ ಸಹ ಮಳೆಯ ಆಗಮನ ಈ ಭಾಗದ ರೈತರಿಗೆ ನೆಮ್ಮದಿಯನ್ನು ಉಂಟು ಮಾಡಿದೆ.

ಮೇ ೨೦ರ ಸೋಮವಾರ ಬೆಳಗಿನ ಜಾವ ಮತ್ತೊಮ್ಮೆ ತಾಲ್ಲೂಕಿನಾದ್ಯಂತ ಎರಡನೇ ಬಾರಿಗೆ ಉತ್ತಮ ಮಳೆಯಾಗಿ ಚಳ್ಳಕೆರೆ ೨೮.೦೯, ಪರಶುರಾಮಪುರ - ೩೨.೦೮, ನಾಯಕನಹಟ್ಟಿ- ೨೯.೦೨, ತಳಕು- ೨೧.೦೪, ದೇವರಮರಿಕುಂಟೆ -೨೦.೦೨ ಒಟ್ಟು ೧೩೧.೦೫ ಎಂ.ಎಂ. ಮಳೆಯಾಗಿದ್ದು, ಕಳೆದ ಮೇ ೧೩ರ ಸೋಮವಾರವೂ ಸಹ ೧೪೭ ಎಂಎಂ ಮಳೆಯಾಗಿ ಒಟ್ಟು ೨೭೮.೦೫ ಎಂ.ಎಂ. ಮಳೆಯಾಗಿದೆ. ತಾಲ್ಲೂಕಿನ ಗಡಿಭಾಗದ ಗ್ರಾಮಗಳಲ್ಲದೆ ತಳಕು ಹೋಬಳಿಯ ಅನೇಕ ಗ್ರಾಮಗಳು ಮಳೆ ಹಾನಿಗೀಡಾಗಿವೆ. ಮೇ ೨೦ರ ಸೋಮವಾರ ಸುರಿದ ಮಳೆಗೆ ತಾಲ್ಲೂಕಿನ ಬೂಕ್ಲರಹಳ್ಳಿ ಗ್ರಾಮದ ಓಬಮ್ಮ ಎಂಬುವವರ ಜಮೀನಿನಲ್ಲಿ ಟಮೋಟೊ ಬೆಳೆ ಹಾಕಿದ್ದು ಮಳೆಗೆ ಬೆಳೆ ಸಂಪೂರ್ಣವಾಗಿ ಕೊಚ್ಚಿ ಹೋಗಿ ೮೦ ಸಾವಿರ ನಷ್ಟ ಸಂಭವಿಸಿದೆ.ತಾಲ್ಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದ ಬಸವರಾಜ ಎಂಬುವವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ. ತಾಲ್ಲೂಕಿನ ಎನ್.ದೇವರಹಳ್ಳಿ ಗ್ರಾಮದ ಭಾಗ್ಯಮ್ಮ ಎಂಬುವವರ ವಾಸದ ಮನೆ ಕುಸಿದುಬಿದ್ದು ನಷ್ಟ ಉಂಟಾಗಿದೆ. ಈವರೆಗೂ ಮಳೆಯಿಂದ ಕೋಟ್ಯಾಂತರ ಮೌಲ್ಯದ ಬೆಳೆ ನಷ್ಟವಾಗಿದೆ.

ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಮಳೆಯಾಗುವ ಸಂಭವವಿದ್ದು, ತಾಲ್ಲೂಕು ಆಡಳಿತ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಹೆಚ್ಚಿನ ಹಾನಿ ನಿಯಂತ್ರಿಸುವ ಕ್ರಮಕ್ಕೆ ಮುಂದಾಗಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.ಈಗಾಗಲೇ ತಾಲ್ಲೂಕಿನ ಕೆಲವು ಭಾಗಗಳಲ್ಲಿ ರೈತರು ತಮ್ಮ ಜಮೀನುಗಳನ್ನು ಹಸನುಗೊಳಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ತಿಂಗಳು ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಹಣ ರೈತರ ಖಾತೆಯಲ್ಲಿದ್ದು, ಇದು ರೈತರಿಗೆ ಹೆಚ್ಚು ಸಂತಸ ತಂದಿದೆ. ರೈತರೇ ಈ ಬಗ್ಗೆ ಈ ಬಾರಿಯ ಬಿತ್ತನೆ ಕಾರ್ಯಕ್ಕೆ ಹಣಕಾಸಿನ ತೊಂದರೆ ಎದುರಾಗದು ಎಂದಿದ್ದಾರೆ!