ಸ್ಮಾರಕಗಳು ನಾಡಿನ ಸಾಂಸ್ಕೃತಿಕ ಪ್ರತಿಬಿಂಬಗಳು

| Published : Nov 04 2023, 12:32 AM IST

ಸಾರಾಂಶ

ಹಾನಗಲ್ ತಾಲೂಕಿನ ಕಲಕೇರಿ ಗ್ರಾಮದ ಕೆರೆ ಸೋಮೇಶ್ವರ ದೇವಾಲಯದ ಆವರಣದಲ್ಲಿ ಹಾವೇರಿ ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಇತಿಹಾಸ ವಿಭಾಗ ಮತ್ತು ಐತಿಹಾಸಿಕ ಪರಂಪರಾ ಕೂಟ ಸಹಯೋಗದಲ್ಲಿ ಕಲಕೇರಿ ಗ್ರಾಮದ ಸ್ಮಾರಕಗಳ ಪರಿಚಯ ಹಾಗೂ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಹಾವೇರಿ ನಮ್ಮ ಸುತ್ತಮುತ್ತಲಿರುವ ಪ್ರಾಚೀನ ಸ್ಮಾರಕಗಳ ರಕ್ಷಣೆ, ಅದರ ಕುರಿತಾದ ತಿಳಿವಳಿಕೆ ಹೆಚ್ಚಾಗಬೇಕಿದೆ ಎಂದು ನಗರದ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಸ್. ಆರ್. ಕೋರಿಶೆಟ್ಟರ್ ಅಭಿಪ್ರಾಯಪಟ್ಟರು. ಹಾನಗಲ್ ತಾಲೂಕಿನ ಕಲಕೇರಿ ಗ್ರಾಮದ ಕೆರೆ ಸೋಮೇಶ್ವರ ದೇವಾಲಯದ ಆವರಣದಲ್ಲಿ ಕಾಲೇಜಿನ ಇತಿಹಾಸ ವಿಭಾಗ ಮತ್ತು ಐತಿಹಾಸಿಕ ಪರಂಪರಾ ಕೂಟ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಕೇರಿ ಗ್ರಾಮದ ಸ್ಮಾರಕಗಳ ಪರಿಚಯ ಹಾಗೂ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ದೇಶ ತಂತ್ರಜ್ಞಾನ, ವಿಜ್ಞಾನ, ಅಧ್ಯಾತ್ಮ ಎಲ್ಲವುಗಳಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಅದೆಷ್ಟೋ ಸಾಧನೆಗಳನ್ನು ಮಾಡಿದೆ. ಇಂತಹ ರಾಷ್ಟ್ರದ ಪ್ರಜೆಗಳಾಗಿ ನಮ್ಮ ಪೂರ್ವಜರು ಕೊಡುಗೆಯಾಗಿ ನೀಡಿದ ಸ್ಮಾರಕಗಳ ಸಂರಕ್ಷಣೆ ನಮ್ಮ ಹೊಣೆ ಎಂದು ಹೇಳಿದರು. ಪರಂಪರೆ ಎಂದರೆ ಕೇವಲ ಸ್ಮಾರಕಗಳೊಂದೇ ಅಲ್ಲ, ಅದರ ವ್ಯಾಪ್ತಿ ತುಂಬಾ ವಿಸ್ತಾರವಾದದ್ದು, ಹಳೆಯ ಶ್ರೇಷ್ಠತೆಗಳೆಲ್ಲವನ್ನೂ ಅಳಿಯಲು ಬಿಡದೆ ಉಳಿಸಿಕೊಂಡು ಹೊಳೆಯುವಂತೆ ಮಾಡೋಣ. ಪರಂಪರೆಯನ್ನ ಪ್ರೀತಿಸೋಣ ಮತ್ತು ಸಂರಕ್ಷಿಸೋಣ. ಸ್ಮಾರಕಗಳು ನಮ್ಮ ನಾಡಿನ ಸಾಂಸ್ಕೃತಿಕ ಪ್ರತಿಬಿಂಬಗಳಾಗಿದ್ದು, ನಮ್ಮ ಪ್ರಾಚೀನ ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿಯನ್ನು ಅರಿಯಲು ಸಹಾಯಕವಾಗಿವೆ ಎಂದರು. ಸ್ಮಾರಕಗಳು ನಮ್ಮ ನಾಡಿನ ಐತಿಹಾಸಿಕ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಮಹತ್ವವನ್ನು ಸಾರುವ ದ್ಯೋತಕಗಳು. ಸ್ಮಾರಕಗಳು ನಮ್ಮ ನಾಡಿನ ಸ್ವತ್ತು ಮತ್ತು ಸಂಪತ್ತುಗಳಾಗಿವೆ. ಅವುಗಳನ್ನು ಸಂರಕ್ಷಿಸಿ ನಮ್ಮ ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಶರಣಪ್ಪ ಜಗ್ಗಲ ಮಾತನಾಡಿ, ಸ್ಮಾರಕಗಳು ನಮ್ಮೆಲ್ಲರ ಪರಂಪರೆ. ಐತಿಹಾಸಿಕ ದೇವಾಲಯಗಳು, ಶಾಸನಗಳು, ಸ್ಮಾರಕ ಶಿಲ್ಪಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಸ್ಮಾರಕಗಳ ಸ್ವಚ್ಛತೆ ಹಾಗೂ ರಕ್ಷಣಾ ಕಾರ್ಯಕ್ರಮದಲ್ಲಿ ಸ್ಮಾರಕಗಳ ಪರಿಚಯ ಮತ್ತು ಸ್ವಚ್ಛತೆಯ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸಲಾಗುವುದು. ಕಾರ್ಯಕ್ರಮದ ಯೋಜನೆಯಂತೆ ವಿಭಾಗದ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವುದು ಸಂತೋಷದ ವಿಷಯವಾಗಿದೆ ಎಂದರು. ಹೇರೂರು ಪಿಡಿಒ ಎಸ್.ಪಿ. ಮರಾಠಿ, ಅಧ್ಯಕ್ಷ ಗುಂಡನಗೌಡ ಪಾಟೀಲ್, ಸದಸ್ಯರಾದ ರಾಜು ಕಮ್ಮಾರ, ಗೂಳಪ್ಪ ಹುಳ್ಳಾಳ, ಮಂಜಮ್ಮ ಕಿರವಾಡಿ ಹಾಗೂ ಗ್ರಾಮಸ್ಥರು ಇದ್ದರು. ಸಿಂಧೂ ಬುಳ್ಳಣ್ಣನವರ ಕಾರ್ಯಕ್ರಮ ನಿರೂಪಿಸಿದರು. ಕಾರ್ತಿಕ ಪವಾರ ವಂದಿಸಿದರು.