ಕೇಂದ್ರ ಬಜೆಟ್‌ನತ್ತ ರೈಲ್ವೆ ಪ್ರಯಾಣಿಕರ ಚಿತ್ತ

| Published : Jan 31 2025, 12:45 AM IST

ಸಾರಾಂಶ

ಹುಬ್ಬಳ್ಳಿಯಲ್ಲಿನ ನೈಋತ್ಯ ರೈಲ್ವೆಯ ವರ್ಕ್‌ಶಾಪ್‍ ಶತಮಾನ ಕಂಡಿದೆ. ಆದರೂ ಕೆಲಸಗಳು ಮಾತ್ರ ಹೆಚ್ಚಿಗೆ ನಡೆಯುತ್ತಿದೆ. ವರ್ಕ್‌ಶಾಪ್‌ಗೆ ಶಕ್ತಿ ತುಂಬುವ ಕೆಲಸವಾಗಬೇಕಿದೆ. ವಂದೇ ಭಾರತ್‌ ಸೇರಿದಂತೆ ಹೈಟೆಕ್‌ ಟ್ರೈನ್‌ಗಳ ನಿರ್ವಹಣೆಗೆ ಇಲ್ಲಿನ ವರ್ಕ್‌ಶಾಪ್‌ ಬಳಕೆಯಾಗಬೇಕು. ಅದಕ್ಕೆ ತಕ್ಕಂತ ಸೌಲಭ್ಯಗಳು ವರ್ಕ್‌ಶಾಪ್‌ನಲ್ಲಿ ಸಿಗುವಂತಾಗಬೇಕು.

ಶಿವಾನಂದ ಗೊಂಬಿ

ಹುಬ್ಬಳ್ಳಿ

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಫೆ. 1ರಂದು ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ. ಮೊದಲು ಪ್ರತ್ಯೇಕವಾಗಿದ್ದ ರೈಲ್ವೆ ಬಜೆಟ್‌ ಕಳೆದ ಹತ್ತು ವರ್ಷದಿಂದ ಕೇಂದ್ರ ಬಜೆಟ್‌ನಲ್ಲೇ ಸೇರ್ಪಡೆಯಾಗಿದೆ. ರೈಲ್ವೆ ಪ್ರಯಾಣಿಕರ ಚಿತ್ತವೆಲ್ಲವೂ ಇದೀಗ ಕೇಂದ್ರ ಬಜೆಟ್‌ನತ್ತ ಹರಿದಿದೆ. ಉತ್ತರ ಕರ್ನಾಟಕ ಭಾಗದ ಹತ್ತು-ಹಲವು ನಿರೀಕ್ಷೆಗಳು ಗರಿಗೆದರಿವೆ. ಶತಮಾನ ಕಂಡಿರುವ ವರ್ಕ್‌ಶಾಪ್‌ಗೆ ಶಕ್ತಿ ತುಂಬುವ, ನನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿ, ಕಲಬುರಗಿ ವಿಭಾಗವಾಗಿ ನೈಋತ್ಯಕ್ಕೆ ಸೇರಿಸಬೇಕು ಸೇರಿದಂತೆ ಹತ್ತು ಹಲವು ಬೇಡಿಕೆಗಳು ಉತ್ತರ ಕರ್ನಾಟಕದ ಜನತೆಯದ್ದು.

ಹತ್ತು ವರ್ಷದ ಹಿಂದಿನ ಪರಿಸ್ಥಿತಿ ನೋಡಿದರೆ ರೈಲ್ವೆ ಕಾಮಗಾರಿಗಳೆಲ್ಲ ಭಾರೀ ವೇಗ ಪಡೆದಿವೆ. ದಿನದಿಂದ ದಿನಕ್ಕೆ ರೈಲ್ವೆ ಕಾಮಗಾರಿಗಳ ವೇಗ ಜಾಸ್ತಿ ಇದೆ.

ತಾಳಗುಪ್ಪ-ಶಿರಸಿ-ಹುಬ್ಬಳ್ಳಿ, ಧಾರವಾಡ-ಕಿತ್ತೂರ-ಬೆಳಗಾವಿ, ತುಮಕೂರ-ದಾವಣಗೆರೆ ಮಾರ್ಗಗಳಿಗೆ ಮಂಜೂರಾತಿ ದೊರೆತಿವೆ. ಆದರೆ, ಬರೀ ಸಮೀಕ್ಷೆಗಳಲ್ಲೇ ಗಿರಕಿ ಹೊಡೆಯುತ್ತಿವೆ. ಕೆಲಸ ಮಾತ್ರ ಈ ವರೆಗೂ ಪ್ರಾರಂಭವಾಗುತ್ತಿಲ್ಲ. ಇನ್ನು ಹಳೇ ಕಾಮಗಾರಿಗಳಾದ ಬಾಗಲಕೋಟೆ-ಕುಡಚಿ ಮಾರ್ಗ, ಗಿಣಗೇರ-ರಾಯಚೂರು, ಕಡೂರು-ಸಂಕಲೇಶಪುರ, ಗದಗ-ವಾಡಿ ಕೆಲಸಗಳು ವರ್ಷಗಳಿಂದಲೇ ಕುಂಟುತ್ತಲೇ ಸಾಗಿವೆ. ಪೂರ್ಣವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಹೊಸ ಮಾರ್ಗಗಳ ಕೆಲಸಗಳು ಬೇಗನೇ ಶುರುವಾಗಬೇಕು. ಹಳೆ ಕೆಲಸ ಬೇಗನೆ ಮುಕ್ತಾಯವಾಗಬೇಕು. ಇದಕ್ಕೆ ಹೆಚ್ಚಿನ ಅನುದಾನ ನೀಡಬೇಕು.

ವಂದೇ ಭಾರತ ರೈಲು:

ಧಾರವಾಡ-ಬೆಂಗಳೂರು ವಂದೇ ಭಾರತ ರೈಲು ಸಂಚರಿಸುತ್ತಿದೆ. ಬೆಂಗಳೂರಿನಿಂದ ಬೆಳಗ್ಗೆ ಬರುವ ಈ ರೈಲು ಮಧ್ಯಾಹ್ನ ಧಾರವಾಡದಿಂದ ಹೊರಡುತ್ತದೆ. ಇದರೊಂದಿಗೆ ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ ಹೊಸ ರೈಲು ಸಂಚರಿಸುವಂತಾಗಬೇಕು. ಬೆಳಗ್ಗೆ ಬೆಳಗಾವಿಯಿಂದ ಮಧ್ಯಾಹ್ನ ಬೆಂಗಳೂರಿನಿಂದ ಬಿಡುವಂತಾಗಬೇಕು. ಈಗ ಧಾರವಾಡದಿಂದ ಸಂಚರಿಸುತ್ತಿರುವ ವಂದೇ ಭಾರತ ರೈಲನ್ನು ಬೆಳಗಾವಿ ವರೆಗೂ ವಿಸ್ತರಿಸಬೇಕು. ಇದರಿಂದ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಸಮಯದಲ್ಲೂ ಈ ಭಾಗದ ಜನರಿಗೆ ವಂದೇ ಭಾರತ್‌ ಲಭ್ಯವಾದಂತಾಗುತ್ತದೆ ಎಂಬ ಬೇಡಿಕೆ ಜನತೆಯದ್ದು.

ಹುಬ್ಬಳ್ಳಿ ವರ್ಕಶಾಪ್‌:

ಹುಬ್ಬಳ್ಳಿಯಲ್ಲಿನ ವರ್ಕ್‌ಶಾಪ್‍ ಶತಮಾನ ಕಂಡಿದೆ. ಆದರೂ ಕೆಲಸಗಳು ಮಾತ್ರ ಹೆಚ್ಚಿಗೆ ನಡೆಯುತ್ತಿದೆ. ವರ್ಕ್‌ಶಾಪ್‌ಗೆ ಶಕ್ತಿ ತುಂಬುವ ಕೆಲಸವಾಗಬೇಕಿದೆ. ವಂದೇ ಭಾರತ್‌ ಸೇರಿದಂತೆ ಹೈಟೆಕ್‌ ಟ್ರೈನ್‌ಗಳ ನಿರ್ವಹಣೆಗೆ ಇಲ್ಲಿನ ವರ್ಕ್‌ಶಾಪ್‌ ಬಳಕೆಯಾಗಬೇಕು. ಅದಕ್ಕೆ ತಕ್ಕಂತ ಸೌಲಭ್ಯಗಳು ವರ್ಕ್‌ಶಾಪ್‌ನಲ್ಲಿ ಸಿಗುವಂತಾಗಬೇಕು ಎಂಬ ಬೇಡಿಕೆ ಜನತೆಯದ್ದು.

ಕಲಬುರಗಿ ವಿಭಾಗವಾಗಲಿ:

ಕರ್ನಾಟಕದ ಶೇ. 84ರಷ್ಟು ಭಾಗ ನೈಋತ್ಯ ರೈಲ್ವೆ ವಿಭಾಗದಲ್ಲೇ ಬರುತ್ತದೆ. ಆದರೆ, ಕಲ್ಯಾಣ ಕರ್ನಾಟಕದ ಕಲಬುರಗಿ ಸೊಲ್ಲಾಪುರ ವಿಭಾಗಕ್ಕೆ, ಬೀದರ ಸಿಕಂದರ್‌ಬಾದ್‌ ವಿಭಾಗಕ್ಕೆ, ರಾಯಚೂರ, ಯಾದಗಿರಿ ನಿಲ್ದಾಣಗಳು ಗುಂತಕಲ್‌ ವಿಭಾಗಕ್ಕೆ ಸೇರುತ್ತವೆ. ಈ ನಿಲ್ದಾಣಗಳನ್ನೆಲ್ಲ ಸೇರಿಸಿ ಕಲಬುರಗಿ ವಿಭಾಗವನ್ನು ಪ್ರತ್ಯೇಕಿವಾಗಿಸಬೇಕು. ಈ ವಿಭಾಗವನ್ನು ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಗೆ ಸೇರಿಸಬೇಕು ಎಂಬ ಬೇಡಿಕೆ ಜನರದ್ದು. ಅಂದರೆ ಕರ್ನಾಟಕ ಶೇ.90ಕ್ಕೂ ಹೆಚ್ಚು ಭಾಗ ನೈಋತ್ಯ ವಲಯಕ್ಕೆ ಸೇರಿದಂತಾಗುತ್ತದೆ.

ರೈಲುಗಳ ಸಂಖ್ಯೆ ಹೆಚ್ಚಾಗಲಿ:

ಹುಬ್ಬಳ್ಳಿ-ದೆಹಲಿ ಮಧ್ಯೆ ಹೊಸ ರಾಜಧಾನಿ ಎಕ್ಸ್‌ಪ್ರೆಸ್‌, ಹುಬ್ಬಳ್ಳಿ-ಮುಂಬೈ ಮಧ್ಯೆ ಎರಡು ರೈಲುಗಳೇನೋ ಓಡುತ್ತಿವೆ. ಆದರೆ, ಪ್ರಯಾಣಿಕರ ಸಂಖ್ಯೆಗೆ ಇದು ಸಾಕಾಗುತ್ತಿಲ್ಲ. ಆದಕಾರಣ ಇನ್ನೊಂದು ರೈಲು ಓಡಿಸುವಂತಾಗಬೇಕು. ಹುಬ್ಬಳ್ಳಿ-ಅಹಮದಾಬಾದ್‌ ಮಧ್ಯೆ ಡೈಲಿ, ಸೂಪರ್‌ ಫಾಸ್ಟ್‌ ರೈಲು ಸಂಚರಿಸಬೇಕು ಎಂಬುದು ಸೇರಿದಂತೆ ವಿವಿಧ ರೈಲುಗಳನ್ನು ಓಡಿಸಬೇಕು.

ಲೋಕಲ್‌ ಟ್ರೈನ್‌:

ಹುಬ್ಬಳ್ಳಿ-ಧಾರವಾಡ, ಗದಗ-ಹುಬ್ಬಳ್ಳಿ, ಸಂಶಿ-ಹುಬ್ಬಳ್ಳಿ ಈ ಮೂರು ಕಡೆಗಳಿಂದ ಲೋಕಲ್‌ ಪ್ಯಾಸೆಂಜರ್‌ (ಕಾಯ್ದಿರಿಸದ) ಟ್ರೈನ್‌ಗಳನ್ನು ಓಡಿಸಬೇಕು. ಗದಗ, ಅಣ್ಣಿಗೇರಿ, ಕುಂದಗೋಳ, ಸಂಶಿ ಭಾಗಗಳಿಂದ ಪ್ರತಿನಿತ್ಯ ಸಾವಿರಾರು ಜನ ಕೆಲಸಕ್ಕೆಂದು ಹುಬ್ಬಳ್ಳಿಗೆ ಬಂದು ಹೋಗುತ್ತಾರೆ. ಜತೆಗೆ ಹುಬ್ಬಳ್ಳಿ-ಧಾರವಾಡ ಮಧ್ಯೆ ನಿತ್ಯ ಲಕ್ಷಗಟ್ಟಲೇ ಜನ ಓಡಾಡುತ್ತಾರೆ. ಮೂರು ನಿಲ್ದಾಣಗಳಿಂದ ಲೋಕಲ್‌ ಪ್ಯಾಸೆಂಜರ್‌ ರೈಲು ಓಡಿಸಿದರೆ ಸಾರಿಗೆ ವ್ಯವಸ್ಥೆ ಇನ್ನಷ್ಟು ಸುಧಾರಿಸುತ್ತದೆ. ರಸ್ತೆ ಮಾರ್ಗದ ಮೇಲಿನ ಟ್ರಾಫಿಕ್‌ ಕಿರಿಕಿರಿ ಕೂಡ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

ಇನ್ನು ನೈಋತ್ಯ ರೈಲ್ವೆ ಕೇಂದ್ರ ಸ್ಥಾನವಿರುವ ಹುಬ್ಬಳ್ಳಿಯಲ್ಲಿ ರೈಲ್ವೆ ಆಸ್ಪತ್ರೆಯೇನೋ ಇದೆ. ಆದರೆ, ಅಷ್ಟೊಂದು ಸೌಲಭ್ಯಗಳಿಲ್ಲ. ರೈಲ್ವೆ ವರ್ಕರ್ಸ್‌ ಖಾಸಗಿ ಆಸ್ಪತ್ರೆ ಅಥವಾ ಕೆಎಂಸಿ ಮೊರೆ ಹೋಗುವುದು ಅನಿವಾರ್ಯವಾಗುತ್ತಿದೆ. ಆದಕಾರಣ ಏಮ್ಸ್‌ ಮಾದರಿಯಲ್ಲಿ ಇಲ್ಲಿನ ಅರವಿಂದನಗರದಲ್ಲಿರುವ ಇಲಾಖೆಯ ಖಾಲಿ ಜಾಗೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಬೇಕು ಎಂಬುದು ರೈಲ್ವೆ ನೌಕರರ ಬೇಡಿಕೆ.

ಇಷ್ಟೆಲ್ಲದರ ಮಧ್ಯೆ ಎಷ್ಟು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಅಸ್ತು ಎನ್ನುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.ಏಮ್ಸ್‌ ಮಾದರಿಯಲ್ಲಿ ಆಸ್ಪತ್ರೆ ನಿರ್ಮಿಸಬೇಕು. ವರ್ಕಶಾಪ್‌ಗೆ ಶಕ್ತಿ ತುಂಬುವ ಕೆಲಸವಾಗಬೇಕು. ದೆಹಲಿ ಸೇರಿದಂತೆ ವಿವಿಧ ಭಾಗಗಳಿಗೆ ಹೆಚ್ಚಿನ ರೈಲು ಓಡಿಸಬೇಕು. ಸುತ್ತಮುತ್ತಲಿನ ಊರುಗಳಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನತೆ ಬರುತ್ತಿರುತ್ತದೆ. ಹೀಗಾಗಿ ಲೋಕಲ್‌ ಪ್ಯಾಸೆಂಜರ್‌ ರೈಲು ಓಡಿಸಬೇಕು ಎಂದು ನೈಋತ್ಯ ರೈಲ್ವೆ ವಲಯದ ಬಳಕೆದಾರರ ಸಂಘದ ಸದಸ್ಯ ಮಹೇಂದ್ರ ಸಿಂಘಿ ಹೇಳಿದರು.