ಸಾರಾಂಶ
ಚಿಗುರು ಆಲ್ ಇಂಡಿಯಾ ವಧು-ವರರ ವೇದಿಕೆಯ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಸಂಪರ್ಕ-ಪರಿಚಯ ರಾಜ್ಯಮಟ್ಟದ ಜೈನ ವಧು ವರರ ಸಮಾವೇಶ ಸಮಾವೇಶದಲ್ಲಿ ವೆಬ್‌ಸೈಟ್ ಅನಾವರಣಗೊಳಿಸಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜೈನ ಸಮುದಾಯದಲ್ಲಿ ಬದುಕಿನ ಸಾರ್ಥಕ ಸಂದೇಶವಿದೆ. ಜೈನರ ಜೀವನ ಶೈಲಿ, ಆಹಾರ ಪದ್ಧತಿ, ಆಚರಣೆಗಳು ಅನುಕರಣೀಯ. ಜೀವನದ ಮುಖ್ಯ ವಿಚಾರವಾದ ಮದುವೆಗೆ ಕೊಂಡಿಯಾಗಿ ಸಮಾವೇಶ ನಡೆಸಿರುವುದು ಸಕಾಲಿಕವಾದದ್ದು. ಸಮರ್ಥ ಜೋಡಿ ಅರ್ಥಪೂರ್ಣ, ಸುಂದರವಾದ ಜೀವನ ನಡೆಸುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದ್ದಾರೆ.ಚಿಗುರು ಆಲ್ ಇಂಡಿಯಾ ವಧು-ವರರ ವೇದಿಕೆಯ ಆಶ್ರಯದಲ್ಲಿ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ಭಾನುವಾರ ನಡೆದ ಸಂಪರ್ಕ-ಪರಿಚಯ ರಾಜ್ಯಮಟ್ಟದ ಜೈನ ವಧು ವರರ ಸಮಾವೇಶದಲ್ಲಿ ವೆಬ್‌ಸೈಟ್ ಅನಾವರಣಗೊಳಿಸಿ ಅವರು ಮಾತನಾಡಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಮಾವೇಶ ಉದ್ಘಾಟಿಸಿ, ಜೀವನದ ಶ್ರೇಷ್ಠ ಸಂಬಂಧವಾದ ಮದುವೆಗೆ ವದು-ವರರ ಸಂಪರ್ಕ, ಪರಿಚಯದ ಕೊಂಡಿಯಾಗಿ ಜೈನ ವಧು-ವರರ ಸಮಾವೇಶ ನಡೆಸಿರುವುದು ಶ್ಲಾಘನೀಯ ಎಂದರು. ವೇದಿಕೆಯ ಅಧ್ಯಕ್ಷ ಸುಭಾಶ್ಚಂದ್ರ ಚೌಟ ಅಧ್ಯಕ್ಷತೆವಹಿಸಿದರು. ಸಂಚಾಲಕ ಸಂಪತ್ ಜೈನ್ ಹೊಸ್ಮಾರ್ ಪ್ರಾಸ್ತಾವಿಕ ಮಾತನಾಡಿದರು. ಜೈನ ಸಮುದಾಯದ ಪ್ರಮುಖರಾದ ಸಂಪತ್ ಸಾಮ್ರಾಜ್ಯ ಶಿಮುಂಜೆಗುತ್ತು, ಭುಜಬಲಿ ಧರ್ಮಸ್ಥಳ, ಪೂರ್ಣಚಂದ್ರ ಜೈನ್, ವಿಜಯ ಕುಮಾರ್ ಜೈನ್ ನೂರಾಳ್‌ಬೆಟ್ಟು, ರಕ್ಷಿತ್ ಜೈನ್ ಬಡೆಕಾವುಗುತ್ತು, ಪ್ರಭಾತ್ ಬಲ್ನಾಡ್, ನೇಮಿರಾಜ್ ಆರಿಗ, ಜಿನೇಂದ್ರ ಜೈನ್ ಈದು, ಮಹೇಂದ್ರ ಜೈನ್, ಕೆ.ಸಿ ಧರಣೇಂದ್ರಯ್ಯ, ಜ್ವಾಲ ಪ್ರಸಾದ್, ಆಮಂತ್ರಣ ವೇದಿಕೆ ಜಿಲ್ಲಾ ಉಪಾಧ್ಯಕ್ಷೆ ಮೂಡುಬಿದಿರೆ ಅನಿತಾ ಶೆಟ್ಟಿ ಮತ್ತಿತರರಿದ್ದರು.