ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
೩೦ನೇ ಆಳ್ವಾಸ್ ವಿರಾಸತ್ ೫ ದಿನಗಳ ಸಾಂಸ್ಕೃತಿಕ ಉತ್ಸವ ಹಾಗೂ ೬ ದಿನವೂ ನಡೆದ ಮಹಾಮೇಳ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯ ಮೂಲಕ ಭಾನುವಾರ ಮುಕ್ತಾಯಗೊಂಡಿತು.ವಿರಾಸತ್‌ನ ಮುಖ್ಯ ರೂವಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ, ಪ್ರತಿ ವರ್ಷದಂತೆ ಈ ವರ್ಷದ ವಿರಾಸತ್ ಕೂಡ ಸರ್ವ ಶ್ರೇಷ್ಠ ಸಾಂಸ್ಕೃತಿಕ ಉತ್ಸವವಾಗಿ ಮೂಡಿಬಂದಿದ್ದು, ದೇವರ ಹಾಗೂ ಪ್ರಕೃತಿಯ ಸಂಪೂರ್ಣ ಅನುಗ್ರಹ ಕಾರ್ಯಕ್ರಮ ಯಶಸ್ಸಿಗೆ ಕಾರಣ. ಈ ಉತ್ಸವ ಎಲ್ಲಾ ವರ್ಗದ ಜನರು - ಮಕ್ಕಳು, ಯುವಕ ಯುವತಿಯರು, ಪ್ರಬುದ್ಧರು, ವಯೋವೃದ್ಧರಾಧಿಯಾಗಿ ಸರ್ವರನ್ನು ಆಕರ್ಷಿಸಿ, ಪಾಲ್ಗೊಳ್ಳುವಂತೆ ಮಾಡಿದೆ ಎಂದಿದ್ದಾರೆ. ಆರು ದಿನದ ಕಾರ್ಯಕ್ರಮದಲ್ಲಿ ಪ್ರತಿ ದಿನ ಸುಮಾರು ಒಂದು ಲಕ್ಷದಂತೆ ಜನ ಭಾಗವಹಿಸಿದರೆ, ಶನಿವಾರ ಹಾಗೂ ಭಾನುವಾರ ಜನಸ್ತೋಮ ಲಕ್ಷಕ್ಕೂ ಮೀರಿತ್ತು. ಒಟ್ಟು ಕಾರ್ಯಕ್ರಮ ೪೦೦೦ಕ್ಕೂ ಅಧಿಕ ಕಲಾವಿದರಿಗೆ ವೇದಿಕೆಯಾಗಿ, ಪ್ರತೀ ದಿನ ಸರಾಸರಿ ೧೫೦೦ ದಷ್ಟು ಕಲಾವಿದರು ತಮ್ಮ ಪ್ರತಿಭೆ ವ್ಯಕ್ತ ಪಡಿಸಲು ವೇದಿಕೆಯಾಗಿ ಮೂಡಿ ಬಂತು.ಸಕ್ರಿಯ ಸ್ವಚ್ಛತಾ ಸೇನಾನಿಗಳು:
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪ್ರತಿ ಕಾರ್ಯಕ್ರಮಗಳಲ್ಲೂ ಸ್ವಚ್ಛತೆಗೆ ಅತೀ ಹೆಚ್ಚಿನ ಒತ್ತು ನೀಡಲಾಗುತ್ತದೆ. ಅಂತೆಯೇ ಈ ಬಾರಿಯ ವಿರಾಸತ್‌ನಲ್ಲೂ ಸ್ಚಚ್ಛತಾ ಸೇನಾನಿಗಳು ರಾತ್ರಿ ಹಗಲು ಪಾಳಿಯಲ್ಲಿ ಕೆಲಸ ನಿರ್ವಹಿಸಿದ್ದು, ಕಾರ್ಯಕ್ರಮ ಮುಗಿದ ಭಾನುವಾರವೇ ಇಡೀ ಆಳ್ವಾಸ್ ಆವರಣವನ್ನು ಸ್ವಚ್ಚಗೊಳಿಸಲಾಗಿದೆ.ಕಾರ್ಯಕ್ರಮ ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ ಸರ್ವರಲ್ಲೂ ಮೆಚ್ಚುಗೆಯ ಉದ್ಘಾರ ಮೂಡಿಸಿದೆ.
ಈ ಬಾರಿ ವಿರಾಸತ್‌ಗಾಗಿ ವಿದ್ಯಾಗಿರಿ ಹಾಗೂ ಪುತ್ತಿಗೆ ಪ್ರವೇಶಿಸಲಿರುವ ೮ ಮಾರ್ಗಗಳನ್ನು ಡಾಂಬರೀಕರಣ ಹಾಗೂ ಅಗಲೀಕರಣಗೊಳಿಸಿ, ಬರುವ ಪ್ರತಿಯೊಬ್ಬರಿಗೂ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಸರಿಸುಮಾರು ೨೦೦೦ಕ್ಕೂ ಅಧಿಕ ಜನರು ವಿರಾಸತ್‌ಗಾಗಿ ದುಡಿದಿದ್ದು, ಎಲ್ಲವೂ ಸೂಸುತ್ರವಾಗಿ ನೆರೆವೇರಲು ಸಹಕರಿಸಿದ್ದಾರೆ. ಇದರ ಜೊತೆಗೆ ನಡೆದ ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ಸ್ ಮತ್ತು ರೇಜಂರ್ಸ್ ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದಲ್ಲಿ ೧೫೦೦ ವಿದ್ಯಾರ್ಥಿಗಳು ಪಾಲ್ಗೊಂಡರು.