ಸಾರಾಂಶ
ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಶೂನ್ಯ ನೆರಳಿನ ಪ್ರಾತ್ಯಕ್ಷಿಕೆ ನಡೆಯಿತು. ಕಾಲೇಜಿನ ಹವ್ಯಾಸಿ ಖಗೋಳಾಭ್ಯಾಸಿಗಳ ಸಂಘದ ಸಂಚಾಲಕ ಪ್ರೊ. ಎಂ. ರಮೇಶ್ ಭಟ್ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸೂರ್ಯನು ಮಧ್ಯಾಹ್ನ ಸರಿಯಾಗಿ ನಮ್ಮ ನೆತ್ತಿಯ ಮೇಲೆ ಬಂದರೆ ಶೂನ್ಯ ನೆರಳು ಉಂಟಗುತ್ತದೆ. ಆಗ ನೇರವಾಗಿರುವ ಯಾವುದೇ ವಸ್ತುವಿನ ನೆರಳು ಶೂನ್ಯವಾಗುತ್ತದೆ. ನಮ್ಮ ಭೂಮಿ ೨೩.೫ ಡಿಗ್ರಿ ವಾಲಿಕೊಂಡಿರುವ ಕಾರಣ ಸೂರ್ಯನಿಗೆ ಉತ್ತರಾಯಣ ಮತ್ತು ದಕ್ಷಿಣಾಯನ ಇರುವುದರಿಂದ ಸೂರ್ಯನು ಮಧ್ಯಾಹ್ನ ಸರಿಯಾಗಿ ನಮ್ಮ ತಲೆಯ ಮೇಲೆ ಬರುವುದು ವರ್ಷದಲ್ಲಿ ಎರಡು ದಿನ ಮಾತ್ರ ಎಂದು ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ಹವ್ಯಾಸಿ ಖಗೋಳಾಭ್ಯಾಸಿಗಳ ಸಂಘದ ಸಂಚಾಲಕ ಪ್ರೊ. ಎಂ. ರಮೇಶ್ ಭಟ್ ಹೇಳಿದರು.ಅವರು ಏ.೨೪ರಂದು ಕಾಲೇಜಿನಲ್ಲಿ ನಡೆಸಿದ ಶೂನ್ಯ ನೆರಳಿನ ಪ್ರಾತ್ಯಕ್ಷಿಕೆಗಳನ್ನು ತೋರಿಸಿ ವಿವರಿಸಿದರು.
ಇದು ಯಾವ ದಿನವೆಂದು ಆಯಾ ಪ್ರದೇಶದ ಅಕ್ಷಾಂಶವನ್ನು ಹೊಂದಿಕೊಂಡಿರುತ್ತದೆ. ಮೂಡುಬಿದಿರೆ, ಮಂಗಳೂರು, ಬಂಟ್ವಾಳ, ಬೆಂಗಳೂರು ಇತ್ಯಾದಿ ಊರುಗಳಲ್ಲಿ ಇದು ಏ.೨೪ ಮತ್ತು ಆ.೧೮ರಂದು ನಡೆಯುತ್ತದೆ. ಕಾರ್ಕಳ, ಉಡುಪಿ, ಬ್ರಹ್ಮಾವರ ಇತ್ಯಾದಿ ಊರುಗಳಲ್ಲಿ ಏ.೨೫ ಮತ್ತು ಆ.೧೭ರಂದು ನಡೆಯುತ್ತದೆ ಎಂದರು.ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್, ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ದಿಲೀಪ್, ಅಂತಿಮ ಬಿಸಿಎ ಮತ್ತು ಅವರ ಸಹಪಾಠಿಗಳು ಇದಕ್ಕೆ ಬೇಕಾದ ಪ್ರಾತ್ಯಕ್ಷಿಕೆಗಳನ್ನು ಸಿದ್ಧಗೊಳಿಸಿದ್ದರು.