ಸಾರಾಂಶ
ಸಿದ್ಧ ಕಲಾವಿದರಿಂದ ಸೀತಾಪಹಾರ-ಸುಭದ್ರಾ ಕಲ್ಯಾಣ ಎಂಬ ತಾಳಮದ್ದಳೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ರಜತ ಸಂಭ್ರಮದಲ್ಲಿರುವ ಮೂಡುಬಿದಿರೆಯ ಯಕ್ಷಸಂಗಮದ ವತಿಯಿಂದ 25 ನೇ ವರ್ಷದ ಯಕ್ಷಗಾನ ಮತ್ತು ತಾಳಮದ್ದಳೆ ಕೂಟ ಹಾಗೂ ಸನ್ಮಾನ ಸಮಾರಂಭವು ಆ.10ರಂದು ಮೂಡುಬಿದಿರೆಯ ಸಮಾಜಮಂದಿರದಲ್ಲಿ ನಡೆಯಲಿದೆ ಎಂದು ಯಕ್ಷಸಂಗಮದ ಸಂಚಾಲಕ, ಯಕ್ಷರಂಗದ ವಿಮರ್ಶಕ ಎಂ. ಶಾಂತಾರಾಮ ಕುಡ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕಳೆದ 24 ವರ್ಷಗಳಿಂದ ಇಡೀ ರಾತ್ರಿ ತಾಳಮದ್ದಳೆ ಕೂಟ ಹಾಗೂ ಕಲಾವಿದರಿಗೆ ಸನ್ಮಾನ ನೆರವೇರಿಸುತ್ತಾ ಬಂದಿರುವ ಯಕ್ಷಸಂಗಮವು ಈ ಬಾರಿ ರಜತ ಸಂಭ್ರಮವನ್ನು ಆಚರಿಸುತ್ತಿದೆ. ಪ್ರಸ್ತುತ ದಿನಗಳಲ್ಲಿ ಇಡೀ ರಾತ್ರಿ ತಾಳಮದ್ದಳೆ ಕೂಟವನ್ನು ಆಯೋಜಿಸುತ್ತಿರುವುದು ಯಕ್ಷ ಸಂಗಮ ಮಾತ್ರ ಎಂದವರು ಮಾಹಿತಿ ನೀಡಿದರು.
ಆ.10 ರಂದು ಸಂಜೆ 4 ಗಂಟೆಗೆ ಶ್ರೀ ಜೈನ ಮಠದ ಭಟ್ಟಾರಕ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಒಡಿಶಾದ ಟಾಟಾ ಫ್ರಾಕ್ಟರೀಸ್ ಲಿಮಿಟೆಡ್ ನಿವೃತ್ತ ಮ್ಯಾನೇಜಿಂಗ್ ಡೈರೆಕ್ಟರ್ ಸಿ. ದೇವದಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಯಕ್ಷನಿಧಿ ಮೂಡುಬಿದಿರೆ ಸಂಸ್ಥೆಯ ಮಕ್ಕಳ ಮೇಳದಿಂದ ದಕ್ಷಾದ್ವರ ಹಾಗೂ ಗಿರಿಜಾ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.ಸಂಜೆ 6.45 ರಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ತೆಂಕು- ಬಡಗು ತಿಟ್ಟಿನ ‘ಚಾರ್ಲಿ ಚಾಪ್ಲಿನ್’ ಖ್ಯಾತಿಯ ಸುಪ್ರಸಿದ್ಧ ಹಾಸ್ಯಗಾರ ಸೀತಾರಾಮ ಕುಮಾರ್ ಕಟೀಲು ಅವರಿಗೆ ಸನ್ಮಾನ ನಡೆಯಲಿದೆ.
ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ, ಡಾ. ಶ್ಯಾಮ ಭಟ್, ಡಾ. ಮೋಹನ ಆಳ್ವ, ಡಾ. ಪದ್ಮನಾಭ ಕಾಮತ್, ಕೆ. ಶ್ರೀಪತಿ ಭಟ್, ಎಂ. ವಿಜಯ ಶೆಣೈ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.ರಾತ್ರಿ 9.30ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಪ್ರಸಿದ್ಧ ಕಲಾವಿದರಿಂದ ಸೀತಾಪಹಾರ-ಸುಭದ್ರಾ ಕಲ್ಯಾಣ ಎಂಬ ತಾಳಮದ್ದಳೆ ನಡೆಯಲಿದೆ. ಪ್ರೇಕ್ಷಕರಿಗೆ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಕುಡ್ವ ತಿಳಿಸಿದರು.
ಯಕ್ಷಸಂಗಮದ ಅಧ್ಯಕ್ಷ ಸುದರ್ಶನ ಎಂ, ಸದಸ್ಯರಾದ ದಿವಾಕರ ಶೆಟ್ಟಿ ಹಾಗೂ ರಾಘವೇಂದ್ರ ಭಂಡಾರ್ಕರ್ ಸುದ್ದಿಗೋಷ್ಠಿಯಲ್ಲಿ ಇದ್ದರು.