ಚೇತನ ಯುವಕ ಮಂಡಲ ತಂಡ್ರಕೆರೆ ಇದರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ 31ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟ ಗರಡಿಯ ಆಡಳಿತ ಮೊಕ್ತೇಸರರು ಮತ್ತು ಧರ್ಮದರ್ಶಿ ರಾಜೇಶ್ ಬಳ್ಳಾಲ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮೂಡುಬಿದಿರೆ: ಚೇತನ ಯುವಕ ಮಂಡಲ ತಂಡ್ರಕೆರೆ ಇದರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ 31ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟ ಗರಡಿಯ ಆಡಳಿತ ಮೊಕ್ತೇಸರರು ಮತ್ತು ಧರ್ಮದರ್ಶಿ ರಾಜೇಶ್ ಬಳ್ಳಾಲ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ದೇಶದಲ್ಲಿರುವ ಬಡವ ಶ್ರೀಮಂತ, ಶಿಕ್ಷಣವಂತರು ಮತ್ತು ಅನಕ್ಷರಸ್ತರ ನಡುವೆ ಇರುವ ಕಂದಕವನ್ನು ದೂರ ಮಾಡಲು ಉಳ್ಳವರು ಬಲಹೀನರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ದೇಶದಲ್ಲಿರುವ ಸುಮಾರು 52 ಕೋಟಿ ಯುವ ಸಮುದಾಯ ಸಮಾಜದ ಏಳಿಗೆಗಾಗಿ ಶ್ರಮ ವಹಿಸಬೇಕು ಎಂದರು.

ಸಂಘರ್ಷದಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ. ಆರೋಗ್ಯ, ವಿದ್ಯೆಯನ್ನು ಸದೃಢಗೊಳಿಸಿಕೊಂಡಾಗ ದೇಶದ ಪ್ರಗತಿಗೆ ಅಡಿಪಾಯ ಕೊಟ್ಟಂತಾಗುತ್ತದೆ ಎಂದು ಹೇಳಿದರು.ಮಾರ್ನಾಡು ಶ್ರೀ ಕ್ಷೇತ್ರ ಹೊಯ್ಪಾಲಬೆಟ್ಟ ಗರಡಿಯ ಅಸ್ರಣ್ಣರಾದ ಅನಂತಪದ್ಮನಾಭ ಅಸ್ರಣ್ಣರು ಆಶೀರ್ವಚನ ನೀಡಿ, ದೇವರಿಗೆ, ಸಮಾಜಕ್ಕೆ ನೀಡಿದ ಕಾಣಿಕೆ ಉತ್ತಮ ಫಲವಾಗಿ ನಮಗೆ ದೊರಕುತ್ತದೆ ಎಂದರು.‘ಮಾರ್ನಾಡಿನ ಸೇವಾ ಮಾಣಿಕ್ಯ’ ಕುವೈಟ್ ಉದ್ಯಮಿ ರಾಘು ಸಿ. ಪೂಜಾರಿ ಮಾರ್ನಾಡು ಅವರಿಗೆ ಆಯೋಜಿಸಲಾದ ಹುಟ್ಟೂರಿನ ಸನ್ಮಾನವನ್ನು ಅವರ ಪುತ್ರ ರಕ್ಷಿತ್ ಅವರಿಗೆ ಸಮರ್ಪಿಸಿ ಗೌರವಿಸಲಾಯಿತು.

ಕುವೈಟ್ ನಿಂದ ನೇರ ಪ್ರಸಾರದಲ್ಲಿ ಮಾತನಾಡಿದ ರಾಘು ಸಿ. ಪೂಜಾರಿ ಅವರು ಯುದ್ಧ ಸಂಘರ್ಷದಿಂದಾಗಿ ವಿಮಾನ ಹಾರಾಟ ನಿಲುಗಡೆ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಆಗಮಿಸಲು ಕಷ್ಟ ಸಾಧ್ಯವಾಯಿತು. ಪುತ್ರನನ್ನು ಗೌರವಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು. ಶ್ರೀ ಮಹಾ ಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್, ಕೆಲ್ಲಪುತ್ತಿಗೆ ಶ್ರೀ ಕ್ಷೇತ್ರ ಭೂತರಾಜಗುಡ್ಡೆ ಆಡಳಿತ ಮೊಕ್ತೇಸರ ಜಗದೀಶ್ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹಿರಿಯ ಅಧಿಕಾರಿ ಯತೀಂದ್ರ ರಾವ್ ಪಾಡಿಮನೆ, ಪಡು ಮಾರ್ನಾಡು ಗ್ರಾ ಪಂ ನಿಕಟಪೂರ್ವ ಅಧ್ಯಕ್ಷ ವಾಸುದೇವ ಭಟ್, ಮಾಜಿ ಅಧ್ಯಕ್ಷೆ ಕಲ್ಯಾಣಿ, ಬೆಂಗಳೂರು ಉದ್ಯಮಿ ಹೇಮರಾಜ್ ಯು. ರಾವ್, ಚೇತನ ಯುವಕ ಮಂಡಲ ಅಧ್ಯಕ್ಷ ಸುನಿಲ್ ಬಿ. ಪೂಜಾರಿ ಉಪಸ್ಥಿತರಿದ್ದರು.ತಂಡ್ರಕೆರೆ ಪ್ರಾಥಮಿಕ ಶಾಲೆ ಅಭಿವೃದ್ಧಿಗೆ ಸಮಾರಂಭದಲ್ಲಿ 25,000 ರು. ಮೊತ್ತದ ಚೆಕ್ ನ್ನು ಶಾಲಾ ಅಧ್ಯಾಪಕ ವೃಂದದ ಮೂಲಕ ನೀಡಲಾಯಿತು.

ಕುಂಭಕಂಠಿಣಿ ಮಹಿಳಾ ಬಳಗದವರು ಪ್ರಾರ್ಥನೆಗೈದರು. ಯುವಕ ಮಂಡಲ ಪ್ರಮುಖರಾದ ರಾಜೇಶ್ ಗೋಲಾರ ಸ್ವಾಗತಿಸಿ, ಕೋಶಾಧಿಕಾರಿ ನವೀನ್ ಗರಡಿ ಬಳಿ ವರದಿ ಮಂಡಿಸಿದರು. ಅಧ್ಯಾಪಕ ನವೀನ್ ಬಂಗೇರ ಧನ್ಯವಾದವಿತ್ತರು. ನಿತೇಶ್ ಕುಮಾರ್ ಮಾರ್ನಾಡ್ ನಿರೂಪಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ದೇವರಾಜ್ ಸುವರ್ಣ ಪೊಸಲಾಯಿ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಭಾ ಕಾರ್ಯಕ್ರಮದ ಮುಂಚಿತವಾಗಿ ಮತ್ತು ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.