ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿಯಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ದ ಸಮಾರೋಪ ಸಮಾರಂಭ
ಮೂಡುಬಿದಿರೆ: ಸಿದ್ಧಕಟ್ಟೆಯಂತಹ ಗ್ರಾಮೀಣ ಪರಿಸರದಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದಲೂ ಮಾನವೀಯತೆ, ಪ್ರೀತಿ, ಕರುಣೆ, ತಾಳ್ಮೆ, ಬದ್ಧತೆ, ವೃತ್ತಿಪರತೆಯೊಂದಿಗೆ ಬೆಲೆ ಕಟ್ಟಲಾಗದ ನೈತಿಕತೆಯ ಸೇವೆ ನೀಡುತ್ತಿರುವ ಡಾ. ಎನ್. ಪ್ರಭಾಚಂದ್ರ ಅವರ ಸೇವೆ ಅನನ್ಯ ಮತ್ತು ಆದರ್ಶ ವೈದ್ಯಕೀಯ ಸಮುದಾಯಕ್ಕೆ ಸಂದ ಗೌರವ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ.ಮೋಹನ್ ಆಳ್ವ ಹೇಳಿದರು.
ಅವರು ಶುಕ್ರವಾರ ಸಂಜೆ ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿಯಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವೈದ್ಯಕೀಯ ಶಿಕ್ಷಣದ ಬಳಿಕ ನಗರದ ಸೂಪರ್ ಸ್ಪೆಶಾಲಿಟಿ ಹಾಸ್ಪಿಟಲ್ ಗಳಲ್ಲಿ ತಜ್ಞರಾಗುವ ಆಕಾಂಕ್ಷೆಯೊಂದಿಗೆ ಗ್ರಾಮಾಂತರ ಪರಿಸರವನ್ನು ಮರೆಯುವವರೇ ಹೆಚ್ಚಾಗುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಡಾ. ಪ್ರಭಾಚಂದ್ರ ಅವರ ಎಲ್ಲರಿಗೂ ಮಾದರಿ ಎಂದರು.
ಕೋವಿಡ್ ಸಂಕಷ್ಟದ ದಿನಗಳಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳೂ ದೊರೆತ ರಜೆಯಲ್ಲಿ ಸೇವೆಯಿಂದ ದೂರ ಉಳಿದದ್ದು ದುರಂತ ಎಂದ ಡಾ. ಆಳ್ವ ಡಾ. ಪ್ರಭಾಚಂದ್ರ ಸೇರಿದಂತೆ ತಾನು ಮತ್ತು ಅನೇಕ ಮಂದಿ ನಿರಂತರ ಸೇವಾ ನಿರತರಾದುದನ್ನು ಉಲ್ಲೇಖಿಸಿ ಈ ಜವಾಬ್ದಾರಿಯ ನಡೆಯಿಂದಾಗಿ ಇಂದು ನೈತಿಕತೆಯಿಂದ ಮಾತನಾಡುವಂತಾಗಿದೆ ಎಂದರು.ಪ್ರಶಸ್ತಿ ಪ್ರದಾನ: ಸುಮಾರು 48 ವರ್ಷಗಳಿಂದ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ಗ್ರಾಮೀಣ ಆರೋಗ್ಯ ಸೇವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೂಡುಬಿದಿರೆಯ ವೈದ್ಯ ಡಾ.ಎನ್.ಪ್ರಭಾಚಂದ್ರ ಅವರಿಗೆ ಮೂಡುಬಿದಿರೆ ಸೊಸೈಟಿ (ಎಂಸಿಎಸ್) ವತಿಯಿಂದ ಸಮಗ್ರ ಸಾಧಕ ಪ್ರಶಸ್ತಿ 2026 ಪ್ರದಾನ ಮಾಡಲಾಯಿತು.
ತನ್ನ ಕರ್ತವ್ಯವನ್ನು ಸೇವೆಯಾಗಿ ಗುರುತಿಸಿ ನೀಡಿದ ಗೌರವಕ್ಕಾಗಿ ಡಾ.ಎನ್.ಪ್ರಭಾಚಂದ್ರ ಕೃತಜ್ಞತೆ ವ್ಯಕ್ತಪಡಿಸಿದರು.ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಅಭಿನಂದನಾ ಮಾತುಗಳನ್ನಾಡಿ ಸೇವೆಯೇ ಪರಮ ಧರ್ಮ ಎಂಬಂತೆ ಗ್ರಾಮೀಣ ಜನತೆಯ ಆರೋಗ್ಯ ರಕ್ಷಣೆಗೆ ಶ್ರಮಿಸಿದ ಡಾ. ಎನ್. ಪ್ರಭಾಚಂದ್ರ ತಮ್ಮ ನಡೆ, ನುಡಿ, ನಗುವಿನಿಂದಲೇ ರೋಗ ಪರಿಹರಿಸಿದ ಸಾಧಕ. ಪ್ರತಿಭಾ ಪೋಷಕ, ವೈದ್ಯಲೋಕ ಧ್ರುವತಾರೆ ಎಂದರು.
ಸಂಪಿಗೆ ಹೋಲಿ ಸ್ಪಿರಿಟ್ ಚರ್ಚ್ ನ ರೆ.ಫಾ.ವಿನ್ಸೆಂಟ್ ಡಿಸೋಜ ತಮ್ಮ ಆಶೀರ್ವಚನದಲ್ಲಿ ಜನರಿಗೆ ಹತ್ತಿರವಾಗುವವರು ದೇವರ ಪ್ರೀತಿಗೂ ಪಾತ್ರರಾಗುತ್ತಾರೆ. ಸಮಾನತೆಯ ಸೇತುವೆಯಾಗಿರುವ ಸಹಕಾರದಿಂದ ಸಮೃದ್ಧ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸಿದರು.ಸೊಸೈಟಿಯ ಅಧ್ಯಕ್ಷ ಸಹಕಾರ ರತ್ನ ಎಂ. ಬಾಹುಬಲಿ ಪ್ರಸಾದ್ ಮಾತನಾಡಿ ಸಾಲಗಾರ ಸದಸ್ಯರ ಮರಣ ಪ್ರಕರಣಗಳಲ್ಲಿ ಸಾಲದಲ್ಲಿ ಒಂದು ಲಕ್ಷ ರೂ. ಮನ್ನಾ ಮಾಡುವ ಯೋಜನೆ ಜಾರಿಗೊಳಿಸಲಾಗಿದೆ. ಇದೀಗ ಖಾಯಿಲೆಯಿಂದ ಮಲಗಿದ್ದಲ್ಲೇ ಇರುವವರಿಗೆ ಏನಾದರೂ ಸಹಾಯ ಒದಗಿಸಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ ಎಂದರು.
ಉದ್ಯಮಿ ಕೆ.ಶ್ರೀಪತಿ ಭಟ್ ಈ ಸೊಸೈಟಿ ಜನರ ಸೋಶಿಯಲ್ ಸ್ಕೋರ್ ನೀಡಿ ವ್ಯವಹರಿಸುತ್ತಿರುವುದರಿಂದಲೇ ವಿಶಿಷ್ಠವಾಗಿದೆ ಎಂದರು. ಉಪನ್ಯಾಸಕ ಗಣೇಶ್ ಕಾಮತ್ ಎಂ, ಸೊಸೈಟಿಯ ಆರ್ಥಿಕ ಶಿಸ್ತು ಮಾದರಿ ಎಂದರು. ಮಾಜಿ ಸಚಿವ ಸೊಸೈಟಿ ನಿರ್ದೇಶಕ ಕೆ.ಅಭಯಚಂದ್ರ ಜೈನ್ ಸೊಸೈಟಿ ಸಾಲಗಾರರಿಗೂ ಸಹಕಾರ ನೀಡಿ ಬೆಳೆಸಿದೆ ಎಂದರು. ಶ್ರೀಮತಿ ಸುಜಾತಾ ಪ್ರಭಾಚಂದ್ರ ಉಪಸ್ಥಿತರಿದ್ದರು.ಗೌರವ: ಹಿರಿಯ ಸಕ್ರಿಯ ಸದಸ್ಯ ಸುಕುಮಾರ್ ರಾವ್ ಮುಂಬೈ , ಪಿಯುಸಿಯಲ್ಲಿ 600ರಲ್ಲಿ 600 ಅಂಕಗಳಿಸಿದ ಆಳ್ವಾಸ್ ನ ದಿಶಾ ಪೂಜಾರಿ ಮತ್ತು ಪಿಎಚ್ ಡಿ ಸಾಧಕಿ ಡಾ. ಪವಿತ್ರಾ ಪ್ರಸಾದ್ ಅವರನ್ನು ಪುರಸ್ಕರಿಸಲಾಯಿತು. 17 ಅಂಗನವಾಡಿಗಳಿಗೆ ಸಹಾಯಧನದೊಂದಿಗೆ ಕಾರ್ಯಕರ್ತೆಯರನ್ನು ಗೌರವಿಸಲಾಯಿತು.
ಸಂತೋಷ್ ನಾಯ್ಕ್ ನಿರೂಪಿಸಿ ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ ಭಟ್ ವಂದಿಸಿದರು. ಅಯನಾ ವಿ. ರಮಣ್ ‘ಊರ್ಮಿಳಾ‘ ಏಕವ್ಯಕ್ತಿ ನಾಟಕ ಪ್ರಸ್ತುತಪಡಿಸಿದರು.ಗಮನ ಸೆಳೆದ ವೈದ್ಯರ ನೈತಿಕ ಕರ್ತವ್ಯ ಪ್ರಜ್ಞೆ !: ಡಾ.ಎನ್. ಪ್ರಭಾಚಂದ್ರರು ಗ್ರಾಮೀಣ ಪರಿಸರದಲ್ಲಿನ ಸಂಕಷ್ಟಗಳ ನಡುವೆಯೇ ವೃತ್ತಿ ಪರತೆ ಮೆರೆದವರು. ತಮ್ಮ ಸುದೀರ್ಘ ಸೇವೆಯಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಹೆರಿಗೆ ಮಾಡಿಸಿ ಎಲ್ಲ ಸವಾಲುಗಳನ್ನೂ ಮೆಟ್ಟಿ ನಿಂತವರು. ಕರೆಂಟಿಲ್ಲದ, ಗ್ರಾಮೀಣ ಪ್ರದೇಶದಲ್ಲಿ ಟಾರ್ಚ್ ಬೆಳಕಿನಲ್ಲಿ ಚಿಕಿತ್ಸೆ ನೀಡಿದವರು. ತನ್ನ ವೃತ್ತಿ ಧರ್ಮ ಎಂಬಂತೆ ಎಂದಿಗೂ ಗರ್ಭಪಾತ ಮಾಡಿಸಿಲ್ಲ, ಗರ್ಭ ಪಾತ್ರದ ಮಾತ್ರೆ, ಔಷಧವನ್ನೂ ಈವರೆಗೆ ನೀಡದಿರುವ ಅವರ ಬದ್ಧತೆ, ನೈತಿಕತೆ ಗಮನಾರ್ಹ ಎಂದು ಡಾ. ಮೋಹನ ಆಳ್ವ ಶ್ಲಾಘಿಸಿದರು.