ಸರಣಿ ಅಪಘಾತಗಳ ಮೂಲಕ ಭಾರಿ ಆತಂಕ ಮೂಡಿಸಿದ್ದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಬನ್ನಡ್ಕ ರಾಷ್ಟ್ರೀಯ ಹೆದ್ದಾರಿ ಪ್ರದೇಶಕ್ಕೆ ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂಡುಬಿದಿರೆ: ಸರಣಿ ಅಪಘಾತಗಳ ಮೂಲಕ ಭಾರಿ ಆತಂಕ ಮೂಡಿಸಿದ್ದ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಬನ್ನಡ್ಕ ರಾಷ್ಟ್ರೀಯ ಹೆದ್ದಾರಿ ಪ್ರದೇಶಕ್ಕೆ ಮೂಡುಬಿದಿರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಪಘಾತಗಳ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸುವ ಮುನ್ಸೂಚನೆ ನೀಡಿದಾಗ ಶಾಸಕರು ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರ ಬೇಡಿಕೆಯಂತೆ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸೂಚನೆ ನೀಡಿದ್ದರು.ಈ ಹಿನ್ನೆಲೆಯಲ್ಲಿ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಡಿಬಿಎಲ್ ಸಂಸ್ಥೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ರಸ್ತೆ ಬದಿಯಲ್ಲಿರುವ ಜಾಗವನ್ನು ವಶಕ್ಕೆ ಪಡೆದುಕೊಂಡು, ರಸ್ತೆ ನಿರ್ಮಾಣಕ್ಕಾಗಿ ಜಾಗವನ್ನು ಸಮತಟ್ಟುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿಯನ್ನು ಶಾಸಕ ಉಮಾನಾಥ ಕೋಟ್ಯಾನ್ ಸ್ಥಳದಲ್ಲೇ ಇದ್ದು ಪರಿಶೀಲಿಸಿದರು.ಈ ಸಂದರ್ಭ ಪಡುಮಾರ್ನಾಡು ಗ್ರಾಪಂ ಮಾಜಿ ಅಧ್ಯಕ್ಷ ದಯಾನಂದ ಪೈ, ಬಿಜೆಪಿ ಪ್ರಮುಖರಾದ ಸೂರಜ್ ಜೈನ್, ಗೋಪಾಲ್ ಶೆಟ್ಟಿಗಾರ್, ಬೋಳ ವಿಶ್ವನಾಥ್ ಕಾಮತ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಸ್ಥಳೀಯರು ಮೇ 30ರಂದು ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಅದಕ್ಕೂ ಮುನ್ನವೇ ಶಾಸಕರ ಮಧ್ಯಸ್ಥಿಕೆಯಿಂದಾಗಿ ಕಾಮಗಾರಿ ಆರಂಭಗೊಂಡಿದೆ.