ಮೂಡುವೇಣುಪುರದೊಡೆಯನ ಪ್ರತಿಷ್ಠಾ ವರ್ಧಂತಿ, ಗಡಿ ಪ್ರಸಾದ

| Published : May 27 2024, 01:06 AM IST

ಸಾರಾಂಶ

ಶ್ರೀ ವೆಂಕಟರಮಣ ದೇವರ ಪ್ರತಿಷ್ಠಾ ವರ್ಧಂತಿ ಹಿನ್ನೆಲೆ ಪೇಟೆ ಸವಾರಿ ಉತ್ಸವದ ಅಂಗವಾಗಿ ಶೃಂಗರಿಸಿದ ರಜತ ಪಲ್ಲಕ್ಕಿಯಲ್ಲಿ ಪಟ್ಟದ ದೇವರು ಮತ್ತು ಉತ್ಸವ ಶ್ರೀ ಗೋಪಾಲಕೃಷ್ಣ ದೇವರ ಬಿಂಬಗಳ ಪೇಟೆ ಸವಾರಿ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪಟ್ಟದ ಶ್ರೀ ವೆಂಕಟರಮಣ ದೇವರ ಪ್ರತಿಷ್ಠಾ ವರ್ಧಂತಿ ಸಂಭ್ರಮ ವೈಶಾಖ ಬಹುಳ ಬಿದಿಗೆಯ ಶನಿವಾರ ವೈಭವದಿಂದ ನಡೆಯಿತು. ಶತಕಲಶಾಭಿಷೇಕ, ಮಧ್ಯಾಹ್ನ ವಿಶೇಷ ಮಹಾಪೂಜೆ ಬಳಿಕ ಸಮಾರಾಧನೆ ಜರಗಿತು.

* ಒಡೆಯನ ಪೇಟೆ ಸವಾರಿ:

ಸಂಜೆ ಪೇಟೆ ಸವಾರಿ ಉತ್ಸವದ ಅಂಗವಾಗಿ ಶೃಂಗರಿಸಿದ ರಜತ ಪಲ್ಲಕ್ಕಿಯಲ್ಲಿ ಪಟ್ಟದ ದೇವರು ಮತ್ತು ಉತ್ಸವ ಶ್ರೀ ಗೋಪಾಲಕೃಷ್ಣ ದೇವರ ಬಿಂಬಗಳ ಪೇಟೆ ಸವಾರಿ ನಡೆಯಿತು.

ಛತ್ರ, ಚಾಮರ, ದಂಡ, ಧ್ವಜ ದೀವಟಿಗೆ ವಾದ್ಯ ಮೇಳ ಸಹಿತ ಜಯ ಘೋಷಗಳೊಂದಿಗೆ ಸವಾರಿ ಹೊರಟು ಶ್ರೀ ಹನುಮಂತ ದೇವಸ್ಥಾನ, ಹಳೇ ಪೊಲೀಸ್ ಠಾಣೆ, ಕಲ್ಸಂಕ ಅಲ್ಲಿಂದ ಮರಳಿ ಜಿ.ವಿ.ಪೈ ನಗರ ರೋಟರಿ ಶಾಲಾ ಜಂಕ್ಷನ್, ಅಲ್ಲಿಂದ ಮರಳಿ ಮತ್ತೆ ಹಳೆ ಪೊಲೀಸ್‌ ಠಾಣೆ ಜಂಕ್ಷನ್ ಮೂಲಕ ಮುಖ್ಯ ರಸ್ತೆಯಾಗಿ ಹಳೆ ಬಸ್ ನಿಲ್ದಾಣ ಜಂಕ್ಷನ್ ಮತ್ತೆ ಅಲ್ಲಿಂದ ಮುಖ್ಯರಸ್ತೆ, ಶ್ರೀ ಹನುಮಂತ ದೇವಸ್ಥಾನ ಬಳಿ ತಿರುಗಿ ದೇವಳಕ್ಕೆ ಉತ್ಸವ ಮರಳಿತು.ಸಮಾಜ ಬಾಂಧವರ ಘರಣೆಯವರು ತಮ್ಮ ಮನೆ ಬಾಗಿಲತ್ತ ಬಂದ ಒಡೆಯನಿಗೆ ಆರತಿ, ಹಣ್ಣುಕಾಯಿ, ಹೂವು ಕಾಣಿಕೆ ಅರ್ಪಿಸಿ ತಮ್ಮ ಸೇವೆ ಅರ್ಪಿಸಿದರು. ರಾತ್ರಿ ವೇದ, ಅಷ್ಟಕ, ಸಂಕೀರ್ತನೆ, ವಾದ್ಯ ಸೇವೆಯ ಪ್ರದಕ್ಷಿಣೆಗಳ ಬಳಿಕ ವಸಂತ ಮಂಟಪದಲ್ಲಿ ವಸಂತ ಪೂಜೆ ನಡೆಯಿತು.

* ಗಡಿ ಪ್ರಸಾದ

ವೈಶಾಖ ಬಹುಳ ತದಿಗೆಯ ಭಾನುವಾರ ದೇವರ ಪೇಟೆ ಉತ್ಸವದ ಸಮಾರೋಪ ದಿನವಾಗಿದ್ದು, ವೈಶಾಖ ಹುಣ್ಣಿಮೆಯ ಪೇಟೆ ಉತ್ಸವ ಜರುಗಿತು. ರಾತ್ರಿ ವಸಂತ ಪೂಜೆಯ ಬಳಿಕ ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿ ದೇವಳದ ಒಳಾಂಗಣದ ಪ್ರದಕ್ಷಿಣೆಯ ಕೊನೆಯಲ್ಲಿ ಸಮಾಜದ ಪ್ರತೀ ಘರಣೆಯವರು ಕಾಣಿಕೆಯೊಂದಿಗೆ ನೀಡಿದ ತೆಂಗಿನಕಾಯಿಗಳನ್ನು ದೇವರ ಬಿಂಬಕ್ಕೆ ನಿವಾಳಿಸಿ ಗಣೆ ಕಲ್ಲಿಗೆ ಎಸೆದು ಒಡೆಯುವ ಕಾರ್ಯದಲ್ಲಿ ಭಜಕರು ಉತ್ಸಾಹದಿಂದ ಪಾಲ್ಗೊಂಡರು.

ಒಡೆಯನು ಒಂದು ವರ್ಷದ ಪೇಟೆ ಉತ್ಸವಾದಿಗಳನ್ನು ಪೂರೈಸಿ ಸಿಂಹಸಾನಾರೂಢನಾಗಿ ಮತ್ತೆ ಉತ್ಥಾನ ಏಕಾದಶಿ ವರೆಗೆ ವಿಶ್ರಾಂತಿಯಲ್ಲಿರುವ ನಿಮಿತ್ತ ಮಂಗಲ ಪ್ರಾರ್ಥನೆ, ಪೂಜೆ ಸಲ್ಲಿಸಿ ಬಳಿಕ ದೇವರ (ತೆಂಗಿನ ಕಾಯಿಯ ಯಾವುದಾದರೂ ಒಂದು ) ಗಡಿ ಪ್ರಸಾದವನ್ನು ಭಜಕರಿಗೆ ವಿತರಿಸಲಾಯಿತು......................

ಒಡೆಯನ ಪ್ರಥಮ ಪೇಟೆ ಸವಾರಿ, ಮಂಗಲೋತ್ಸವ!

ಮೂಡುವೇಣುಪುರದೊಡೆಯ ಪಟ್ಟದ ಶ್ರೀ ವೆಂಕಟರಮಣ ದೇವರು ವರ್ಷಕ್ಕೆ ಎರಡು ಬಾರಿ ಮಾತ್ರ ಪೇಟೆ ಸವಾರಿಗೆ ಬರುವುದು ವಿಶೇಷತೆ. ಈ ಪೈಕಿ 1936ರಲ್ಲಿ ಪುನಃ ಪ್ರತಿಷ್ಠೆಗೊಂಡ ಬಿಂಬದ ಪ್ರತಿಷ್ಠಾ ವರ್ಧಂತಿಯ ಈ ಸುದಿನವೇ ಮೊದಲ ಪೇಟೆ ಸವಾರಿ. ಅದರ ಮರುದಿನವೇ ಒಂದು ತಿಂಗಳ ವಸಂತ ಮಾಸದ ಪೂಜೆಗಳ ಸಮಾಪನ, ದೇವರ ಪೇಟೆ ಉತ್ಸವಗಳಿಗೂ ತೆರೆ ಬೀಳುವ ವೈಶಾಖ ಹುಣ್ಣಿಮೆಯ ಉತ್ಸವ ನಡೆಯುವುದು ಮಾತ್ರ ಬಹುಳ ತದಿಗೆಯಂದು.

ವಾಡಿಕೆಯಂತೆ ಅಂದು ಸಂಕಷ್ಟ ಚತುರ್ಥಿಯೂ ಆಗಿರುವುದರಿಂದ ಪರಿವಾರ ಗಣಪತಿ ದೇವರ ಸನ್ನಿಧಿಯಲ್ಲೂ ವಿಶೇಷ ಸೇವೆ ಇರುತ್ತದೆ. ಮತ್ತೆ ಪೇಟೆ ಉತ್ಸವ ಆರಂಭವಾಗುವುದು ಉತ್ಥಾನ ದ್ವಾದಶಿಯಂದು. ಅದೇ ವರ್ಷಾವಧಿ ಕಾರ್ತಿಕ ದೀಪೋತ್ಸವದ ಸಂಭ್ರಮ. ಕಾರ್ತಿಕ ಹುಣ್ಣಿಮೆಯಂದು ಮತ್ತೊಮ್ಮೆ ಪಟ್ಟದ ದೇವರು ಪೇಟೆ ಸವಾರಿ ಹೊರಟು ರಾತ್ರಿ ಬೆಳಗಾಗುವವರೆಗೆ ಕಟ್ಟೆ ಪೂಜೆಗಳೊಂದಿಗೆ ಸಂಭ್ರಮಿಸುವುದು ಇವರೆರಡೂ ಭಜಕರಿಗೆ ವಿಶೇಷ ದಿನ, ಕ್ಷಣಗಳಾಗಿವೆ.