ವೈಭವದಿಂದ ಜರುಗಿದ ಮೂಕಾಂಬಿಕಾದೇವಿ ರಥೋತ್ಸವ

| Published : May 11 2024, 12:32 AM IST

ಸಾರಾಂಶ

ರಬಕವಿ-ಬನಹಟ್ಟಿ ತಾಲೂಕಿನ ಸಸಾಲಟ್ಟಿಯ ಆರಾಧ್ಯ ದೈವ ಮೂಕಾಂಬಿಕಾದೇವಿ ಜಾತ್ರೆ ನಿಮಿತ್ತ ಶುಕ್ರವಾರ ಸಹಸ್ರಾರು ಭಕ್ತರ ಮಧ್ಯೆ ಭವ್ಯ ರಥೋತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ಸಸಾಲಟ್ಟಿಯ ಆರಾಧ್ಯ ದೈವ ಮೂಕಾಂಬಿಕಾದೇವಿ ಜಾತ್ರೆ ನಿಮಿತ್ತ ಶುಕ್ರವಾರ ಸಹಸ್ರಾರು ಭಕ್ತರ ಮಧ್ಯೆ ಭವ್ಯ ರಥೋತ್ಸವ ಜರುಗಿತು.ಜಾತ್ರೆ ಅಂಗವಾಗಿ ದೇವಿ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ಬಸವೇಶ್ವರ ಭಾವಚಿತ್ರವನ್ನು ತೊಟ್ಟಿಲಲ್ಲಿಡುವ ಮೂಲಕ ಮುತ್ತೈದೆಯರು ನಾಮಕರಣ ಕಾರ್ಯಕ್ರಮ ನಡೆಸಿಕೊಟ್ಟರು. ಸ್ನೇಹಾ ಹಿರೇಮಠ ನೇತೃತ್ವದಲ್ಲಿ ದೇವಿಗೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಬಳಿಕ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ಸ್ಲೋ ಮೋಟರ್ ಸೈಕಲ್, ಸ್ಲೋ ಸೈಕಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು.

ಸಂಜೆ ಅಲಂಕೃತವಾದ ಭವ್ಯ ರಥವನ್ನು ಭಕ್ತರು ಜಯಘೋಷಣೆಗಳ ಮಧ್ಯೆ ಎಳೆದರು. ಹರಕೆ ಹೊತ್ತ ಭಕ್ತರು ರಥಕ್ಕೆ ಬಿಸ್ಕತ್ತು, ಉತ್ತತ್ತಿ, ಬೆಂಡು-ಬತ್ತಾಸು ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಸ್ಥಳೀಯ ಬೀರೇಶ್ವರ ಸತ್ತಿಗೆ, ಡೊಳ್ಳಿನ ಕೈಪೆಟ್ಟು, ಗೋಲಬಾವಿಯ ಡೊಳ್ಳಿನ ಕೈಪೆಟ್ಟು ತಂಡ, ನಾವಲಗಿಯ ಕರಡಿ ಮಜಲು ಹಾಗು ಸ್ಥಳೀಯ ಕರಡಿ ಮಜಲು ಕಲಾವಿದರ ತಂಡಗಳ ಪ್ರದರ್ಶನ ರಥೋತ್ಸವಕ್ಕೆ ಮೆರುಗು ತಂದವು.

ಚಿಮ್ಮಡ ವಿರಕ್ತಮಠದ ಪ್ರಭುಗಳು ಸಾನ್ನಿಧ್ಯ ವಹಿಸಿದ್ದರು. ಮಹೇಶ ಹಿರೇಮಠ ಜಾತ್ರೆಯ ನೇತೃತ್ವ ವಹಿಸಿದ್ದರು. ಅಡವೇಶ ಮಠದ ಉಪಸ್ಥಿತರಿದ್ದರು. ಸಸಾಲಟ್ಟಿ ಸೇರಿದಂತೆ ತೇರದಾಳ, ಗೋಲಬಾವಿ, ಕಾಲತಿಪ್ಪಿ ಬೆಳಗಾವಿ ಜಿಲ್ಲೆಯ ಮುಗಳಖೋಡ, ಪಾಲಬಾಂವಿಯ ಸಾವಿರಾರು ಭಕ್ತರು ಜಾತ್ರೆಗೆ ಆಗಮಿಸಿದ್ದರು.