ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ಸುತ್ತಲೂ ದಟ್ಟ ಅರಣ್ಯ, ಮೇಲೆ ನಕ್ಷತ್ರಗಳ ರಾಶಿ, ಆಗಾಗ ಬೀಸುವ ಕುಳಿರ್ಗಾಳಿ, ಬಿಸಿ ಬಿಸಿ ಟೀ, ಕಷಾಯ ಹೀರುತ್ತ ಪ್ರಸಿದ್ಧ ಕಲಾವಿದರ ಸಂಗೀತ ಕೇಳುತ್ತಿದ್ದರೆ ಬೆಳಗಾಗಿದ್ದೇ ಗೊತ್ತಾಗದು. ಹೊನ್ನಾವರದ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ಜ. 11ರಂದು ಬೆಳದಿಂಗಳ ಸಂಗೀತ ಇಂತಹ ಅಪರೂಪದ ಅನುಭವಗಳನ್ನು ತೆರೆದಿಡಲಿದೆ. ಮುಸ್ಸಂಜೆಯಿಂದ ಮುಂಜಾವಿನ ತನಕ ಶಾಸ್ತ್ರೀಯ ಸಂಗೀತ, ತಬಲಾ, ಸಂತೂರ್, ಸಿತಾರ್, ಕೊಳಲು ವಾದನ.. ಹೀಗೆ ನಿರಂತರವಾಗಿ 12 ಗಂಟೆ ಕಾಲ ಸಂಗೀತ ಲೋಕದಲ್ಲಿ ಮೈಮರೆಯಬಹುದು.ಮುಸ್ಸಂಜೆ ತಿಂಡಿ, ನಂತರ ಊಟ, ಮಧ್ಯರಾತ್ರಿ ಬಿಸಿ ಬಿಸಿ ತಿಂಡಿ, ಟೀ, ಬೆಳಗಿನ ಜಾವ ಟಿಫಿನ್ ಇವೆಲ್ಲವೂ ಇರಲಿವೆ. 27ನೇ ವರ್ಷದ ಸಂಗೀತೋತ್ಸವಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದೆ.ಹೊನ್ನಾವರದಿಂದ 8 ಕಿಮೀ ದೂರದ ಅರೆಅಂಗಡಿಗೆ ಬಂದು ಅಲ್ಲಿಂದ 5 ಕಿಮೀ ಕರಿಕಾನ ಪರಮೇಶ್ವರ ಗುಡ್ಡ ಏರಿದರೆ (ವಾಹನಗಳಲ್ಲಿ ತೆರಳಬಹುದು) ಪರ್ವತ, ಕಣಿವೆ, ದಟ್ಟ ಅರಣ್ಯದ ನಡುವಣ ಮೋಹಕ ತಾಣದಲ್ಲಿ ನೀವಿರುತ್ತೀರಿ. ಗುಡ್ಡದ ಕಲ್ಲುಬಂಡೆಗಳಿಗೆ ಮೈಯೊಡ್ಡಿ ರಾತ್ರಿಯಿಡಿ ಸಂಗೀತ ಆಸ್ವಾದಿಸಬಹುದು. ಎಸ್‌ಕೆಪಿ ಮ್ಯೂಸಿಕ್ ಟ್ರಸ್ಟ್ ಅರೆಅಂಗಡಿ, ಕಲಾ ಮಂಡಲ ಹೊನ್ನಾವರ ಹಾಗೂ ಎಸ್‌ಕೆಪಿ ದೇವಸ್ಥಾನ ಟ್ರಸ್ಟ್ ನೀಲ್ಕೋಡು ಇವರ ಸಹಯೋಗದಲ್ಲಿ ಸಂಗೀತೋತ್ಸವ ನಡೆಸಲಾಗುತ್ತಿದೆ. ಪ್ರಸಿದ್ಧ ಕಲಾವಿದರ ಕಾರ್ಯಕ್ರಮ ಸಂಗೀತಾಭಿಮಾನಿಗಳಿಗೆ ರಸದೌತಣವಾದರೆ, ಯುವ ಕಲಾವಿದರಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಉತ್ತರ ಕನ್ನಡ ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಯ ಸಂಗೀತಾಸಕ್ತರ ಜತೆಗೆ ವಿದೇಶಿಯರೂ ಆಗಮಿಸುತ್ತಿರುವುದು ವಿಶೇಷವಾಗಿದೆ.ಸಂಗೀತ ದಿಗ್ಗಜರು: ಈ ಬಾರಿ ಪಂ.ಗಣಪತಿ ಭಟ್ ಗಾಯನ, ಪಂ. ರವೀಂದ್ರ ಯಾವಗಲ್ ತಬಲಾ ಸೋಲೋ, ಪಂ. ಕುಮಾರ ಮರಡೂರ ಗಾಯನ, ಉಸ್ತಾದ ಹಫೀಜ ಖಾನ್ ಸಿತಾರ್, ಬಸವರಾಜ ವಂದಲಿ ಗಾಯನ, ಸುಮಾ ಹೆಗಡೆ ಸಂತೂರ್, ವಿಭಾ ಹೆಗಡೆ ಗಾಯನ, ಧ್ರುವ ಅಜಯ್ ಹಾನಗಲ್ ಕೊಳಲು, ರಾಗಶ್ರೀ ಸಂಗೀತ ವಿದ್ಯಾಲಯ ಹಡಿನಬಾಳದ ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಲಿದ್ದಾರೆ.ಸಂವಾದಿನಿಯಲ್ಲಿ ಭರತ್ ಹೆಗಡೆ, ಗೌರೀಶ ಯಾಜಿ, ಪ್ರಕಾಶ್ ಹೆಗಡೆ, ತಬಲಾದಲ್ಲಿ ಶ್ರೀಹರಿ ಧಿಗ್ಗಾವಿ, ಮಧು ಕುಡಾಲ್ಕರ್ ಹಾಗೂ ವಿಘ್ನೇಶ ಕಾಮತ ಪಾಲ್ಗೊಳ್ಳಲಿದ್ದಾರೆ. ಪ್ರಸಿದ್ಧ ತಬಲಾ ವಾದಕ ಗೋಪಾಲಕೃಷ್ಣ ಹೆಗಡೆ ಕಲಭಾಗ ಇಡೀ ಕಾರ್ಯಕ್ರಮದ ಸೂತ್ರಧಾರರಾಗಿದ್ದು, 26 ವರ್ಷಗಳಿಂದ ಬೆಳದಿಂಗಳ ಸಂಗೀತೋತ್ಸವವನ್ನು ಅಚ್ಚುಕಟ್ಟಾಗಿ ಸಂಘಟಿಸುತ್ತಿದ್ದಾರೆ. ನಾದ ಮಾಧವ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ವಿ. ಅವಿನಾಶ ಹೆಬ್ಬಾರ್ ಸಂಸ್ಮರಣ ಯುವ ಪುರಸ್ಕಾರ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ. ಈ ಹಿಂದೆ ಪಂ. ಹಾಸಣಗಿ ಗಣಪತಿ ಭಟ್, ಪಂ. ಪರಮೇಶ್ವರ ಹೆಗಡೆ, ಪಂ. ವೆಂಕಟೇಶಕುಮಾರ್, ಪಂ.ವಿನಾಯಕ ತೊರವಿ, ಶ್ರೀಪಾದ ಹೆಗಡೆ ಕಂಪ್ಲಿ, ನಿತ್ಯಾನಂದ ಹಳದೀಪುರ, ಓಂಕಾರನಾಥ ಗುಲ್ವಾಡಿ, ಸುಭಾಷ ವಣಗೆ, ರವೀಂದ್ರ ಯಾವಗಲ್, ರಘುನಾಥ ನಾಕೋಡ, ಫಯಾಜ ಖಾನ್ ಮತ್ತಿತರ ಪ್ರಸಿದ್ಧ ಕಲಾವಿದರು ಪಾಲ್ಗೊಂಡಿದ್ದರು.
ಹಲವರ ಸಹಕಾರ: ಎಲ್ಲ ದಾನಿಗಳು, ಕಲಾವಿದರು, ಶೋತೃಗಳು, ಸ್ವಯಂ ಸೇವಕರ, ಊರ ನಾಗರಿಕರ ಸಹಕಾರದಿಂದ 26 ವರ್ಷಗಳಿಂದ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಜನರನ್ನು ಸೆಳೆಯುತ್ತಿದೆ ಎಂದು ಸಂಘಟಕರಾದ ಗೋಪಾಲಕೃಷ್ಣ ಕಲಭಾಗ ತಿಳಿಸಿದರು.