ಮೂರ್ನಾಡು: ವಯನಾಡು ಸಂತ್ರಸ್ತರ ನೆರವಿಗೆ ಮೀನು ಮಾರಾಟ!

| Published : Aug 30 2024, 01:10 AM IST

ಸಾರಾಂಶ

ಮೂರ್ನಾಡಿನಲ್ಲಿ ಸಂತೆ ದಿನ ಗುರುವಾರ ಈ ಮೀನಿನ ಮಳಿಗೆ ಪ್ರತ್ಯಕ್ಷವಾಗಿತ್ತು. ನಾಪೋಕ್ಲು ಇಂದಿರಾನಗರದ ಪಿ.ಎಂ. ಮಸೂದ್, ವಯನಾಡಿನ ಸಂತ್ರಸ್ತರಿಗೆ ನೆರವಾಗಲು ಕಂಡುಕೊಂಡದ್ದು ಮೀನು ವ್ಯಾಪಾರ. ಮೀನು ವ್ಯಾಪಾರದಿಂದ ಬರುವ ಲಾಭದ ಹಣವನ್ನು ವಯನಾಡ್ ಸಂತ್ರಸ್ತರಿಗೆ ನೀಡುವ ಮಸೂದ್ ನಿರ್ಧಾರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಭಯಾನಕ ಜಲಪ್ರಳಯಕ್ಕೆ ಸರ್ವನಾಶವಾದ ವಯನಾಡಿನಲ್ಲಿ ಬದುಕುಳಿದಿರುವ ಸಂತ್ರಸ್ತರ ನೆರವಿಗಾಗಿ ವ್ಯಾಪಾರಿಯೊಬ್ಬರು ಶಪಥ ಮಾಡಿದ್ದಾರೆ. ಸಂತೆ ದಿನ ಮೀನು ಮಾರಾಟದಿಂದ ಬರುವ ಲಾಭವನ್ನು ಸಂತ್ರಸ್ತರಿಗೆ ನೀಡಲು ನಿರ್ಧರಿಸಿದ್ದಾರೆ.

ಮೂರ್ನಾಡಿನಲ್ಲಿ ಸಂತೆ ದಿನ ಗುರುವಾರ ಈ ಮೀನಿನ ಮಳಿಗೆ ಪ್ರತ್ಯಕ್ಷವಾಗಿತ್ತು. ನಾಪೋಕ್ಲು ಇಂದಿರಾನಗರದ ಪಿ.ಎಂ. ಮಸೂದ್, ವಯನಾಡಿನ ಸಂತ್ರಸ್ತರಿಗೆ ನೆರವಾಗಲು ಕಂಡುಕೊಂಡದ್ದು ಮೀನು ವ್ಯಾಪಾರ.

ನಾಪೋಕ್ಲಿನ ಕೊಟ್ಟಮುಡಿ ಜಂಕ್ಷನ್‌ನಲ್ಲಿ ಮೀನು ಮಳಿಗೆ ಹೊಂದಿರುವ ಮಸೂದ್, ಮೂರ್ನಾಡಿನಲ್ಲೂ ಹಸಿ ಮೀನು ಮಳಿಗೆಗೆ ಅನುಮತಿ ಪಡೆದಿದ್ದು, ಗುರುವಾರ ಸಂತೆ ಆವರಣದಲ್ಲಿ ಹೊಸ ಮಳಿಗೆಯನ್ನು ಮೂರ್ನಾಡು ಗ್ರಾಮ ಪಂಚಾಯತಿ ಅಧ್ಯಕ್ಷ ಕುಶಾಲ್ ರೈ ಉದ್ಘಾಟಿಸಿದರು.

ಮೊದಲ ದಿನದ ಕೊಡುಗೆಯಾಗಿ ಗ್ರಾಹಕರು 200 ರು.ಗೆ ಒಂದೂವರೆ ಕೆ.ಜಿ. ಮತ್ತಿಮೀನು ಸೇರಿದಂತೆ ಎಲ್ಲಾ ವಿವಿಧ ಮೀನುಗಳಿಗೂ ಬಾರಿ ಕಡಿಮೆ ರೇಟಿನಲ್ಲಿ ಖರಿದಿಸುವ ಅವಕಾಶ ಪಡೆದರು. ಈ ಹಿನ್ನೆಲೆಯಲ್ಲಿ ಮಸೂದ್ ಮಳಿಗೆಗೆ ಗ್ರಾಹಕರ ನೂಕು ನುಗ್ಗಲೇ ಆರಂಭವಾಯ್ತು. ಸಂಜೆ ವರೆಗೆ ಭರ್ಜರಿ ವ್ಯಾಪಾರವೂ ಆಯ್ತು.

ಮೀನು ವ್ಯಾಪಾರದಿಂದ ಬರುವ ಲಾಭದ ಹಣವನ್ನು ವಯನಾಡ್ ಸಂತ್ರಸ್ತರಿಗೆ ನೀಡುವ ಮಸೂದ್ ನಿರ್ಧಾರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಗ್ರಾಹಕರಿಂದ ಉತ್ತಮ ಸ್ಪಂದನೆ ಲಭಿಸಿದೆ. ಪ್ರಾರಂಭ ದಿನವಾದ ಇಂದು ಮೀನು ವ್ಯಾಪಾರದಿಂದ ಗಳಿಸಿದ ಲಾಭವನ್ನು ವೈನಾಡ್ ಸಂತ್ರಸ್ಥರಿಗೆ ಅರ್ಪಿಸುವುದಾಗಿ ಮಸೂದ್ ಹೇಳಿದರು.

ಮೂರ್ನಾಡು ಪಂಚಾಯ್ತಿ ಅಧ್ಯಕ್ಷ ಕುಶಾಲ್ ರೈ ಮಳಿಗೆ ಉದ್ಘಾಟಿಸ ಮಾತನಾಡಿ, ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೆರವಾಗಲು ಒಂದು ದಿನದ ಲಾಭದ ಹಣ ನೀಡುವುದಾಗಿ ಮಸೂದ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೀನು ಪ್ರಿಯರ ಖರೀದಿಯ ಭರಾಟೆ ಜೋರಾಗಿಯೇ ಇದೆ. ಒಟ್ಟಿನಲ್ಲಿ ಸಂತ್ರಸ್ತ ಜೀವಗಳಿಗೆ ಮೀನು ವ್ಯಾಪಾರಿ ಈ ರೀತಿ ಮಿಡಿದಿರುವುದು ಮಾದರಿ ಎಂದರು.

ನಿವೃತ್ತ ಎಸ್ ಐ ಸದಾಶಿವ ಮಾತನಾಡಿ, ಸಂತ್ರಸ್ತರಿಗೆ ನೆರವು ನೀಡುವ ಮಸೂದ್ ಅವರ ಕಾರ್ಯ ಶ್ಲಾಘನೀಯ ಎಂದರು.....................

ಮೂರ್ನಾಡು ಪಂಚಾಯ್ತಿ ಅಧ್ಯಕ್ಷ ಕುಶಾಲ್ ರೈ ಮಳಿಗೆ ಉದ್ಘಾಟಿಸುತ್ತಿರುವುದು.