ನೈತಿಕ ಶಿಕ್ಷಣ ಮಕ್ಕಳ ಭೌತಿಕ ಗುಣಮಟ್ಟ ಹೆಚ್ಚಿಸುತ್ತದೆ

| Published : Mar 13 2025, 12:45 AM IST

ಸಾರಾಂಶ

ಕೊಂಡಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಭಗೀರಥ ಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ನೈತಿಕ ಶಿಕ್ಷಣ ಮಕ್ಕಳ ಭೌತಿಕ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಭಗೀರಥ ಗುರು ಪೀಠದ ಶ್ರೀ ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ ತಿಳಿಸಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಮಿಷನ್ ವತಿಯಿಂದ ಹೊಸದುರ್ಗ ತಾಲೂಕಿನ ಕೊಂಡಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿತರಿಸಿ ಅವರು ಮಾತನಾಡಿ.ಶಿಕ್ಷಕ ವೃತ್ತಿ ಅತ್ಯಮೂಲ್ಯವಾದದ್ದು, ಒಬ್ಬ ಗುರುವಾಗಿ ತಾನು ಕಲಿತ ಶಿಕ್ಷಣವನ್ನು ಮಕ್ಕಳಿಗೆ ದಾರೆ ತೆರೆದು ಶಿಕ್ಷಕ ಕೊಟ್ಟ ಶಿಕ್ಷಣದಿಂದ ಆ ಮಗು ಮುಂದೆ ಒಬ್ಬ ದಾರ್ಶನಿಕನಾಗಬಹುದು, ಅಧಿಕಾರಿಯಾಗಬಹುದು ಅಥವಾ ಒಬ್ಬ ಸ್ವಾಮೀಜಿಯೂ ಆಗಬಹುದು ಎಂದು ಹೇಳಿದರು. ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ಬ್ಯಾಗು, ಬಟ್ಟೆ ಸೇರಿದಂತೆ ವಿವಿಧ ಪರಿಕರಗಳನ್ನು ನೀಡಲಾಗುತ್ತಿದ್ದು ಇದರ ಉಪಯೋಗವಾಗುವಂತೆ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ನೀಡಲಾಗುತ್ತಿದೆ. ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಶಿಕ್ಷಣದ ಜೊತೆಗೆ ಕ್ರೀಡೆ ಸಾಹಿತ್ಯದ ಕಡೆ ಒಲವು ತೋರುವಂತೆ ನೋಡಿಕೊಳ್ಳಬೇಕು ಎಂದರು.

ಯುವ ಉದ್ಯಮಿ ಸದ್ಗುರು ಪ್ರದೀಪ್ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ರಾಷ್ಟ್ರೀಯ ಗ್ರಾಮೀಣಾ ಮಿಷನ್ ವತಿಯಿಂದ ಹಳ್ಳಿ ಹಳ್ಳಿಗಳಿಗೆ ಪರಿಕರ ನೀಡುತ್ತಿದೆ. ಆಧುನಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸಿ, ಸರ್ಕಾರಿ ಶಾಲೆಯಲ್ಲಿ ಓದಿದ ಮಗು ಖಾಸಗಿ ಶಾಲೆಯಲ್ಲಿ ಓದಿದ ಮಗುವಿಗಿಂತ ಹೆಚ್ಚಿನ ವ್ಯಾಸಂಗ ಮಾಡಲು ಸರ್ಕಾರಗಳು ಹೆಚ್ಚು ಹೆಚ್ಚು ಅನುದಾನವನ್ನು ಸರ್ಕಾರಿ ಶಾಲೆಗಳಿಗೆ ನೀಡಿದಾಗ ಆ ಶಾಲೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಯುವ ಮುಖಂಡರು ಕೃಷ್ಣಾಪುರ ಮಾತನಾಡಿದರು. ಕಾರ್ಯಕ್ರಮದಲ್ಲಿ ಯುವ ಮುಖಂಡ ದಿಲೀಪ್ ಗುರುಸ್ವಾಮಿ, ಗೂಳಿಹಟ್ಟಿ ಕೃಷ್ಣಮೂರ್ತಿ, ಗ್ರಾಪಂ ಸದಸ್ಯೆ ಭಾಗ್ಯಮ್ಮ, ರಮ್ಯಾ, ಪರಮೇಶ್ವರಪ್ಪ ಪಾಚಿ, ಗ್ರಾಪಂ ಸದಸ್ಯ ಈಶ್ವರಪ್ಪ, ಯುವ ಮುಖಂಡ ವಕೀಲ ಅರುಣ್ ಕೃಷ್ಣಾಪುರ, ವಿನಯ್ ಕಟ್ಟರಂಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್, ಶಿವಣ್ಣ, ಪರಪ್ಪ, ಶೇಖರಪ್ಪ, ಮಂಜುನಾಥ್, ನಾನಾಕೀಬಾಯಿ, ರತ್ನಮ್ಮ ಹಾಗೂ ಗ್ರಾಮಸ್ಥರು ಇದ್ದರು.