ಸಾರಾಂಶ
ರಾಯಚೂರಿನ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದಿಂದ ಸೆ.1ರಿಂದ 30 ವರೆಗೆ ಹಮ್ಮಿಕೊಂಡಿರುವ ಸ್ವಾತಂತ್ರ್ಯದ ಭರವಸೆ ಎಂಬ ಧ್ಯೇಯವಾಕ್ಯದಡಿ ರಾಷ್ಟ್ರವ್ಯಾಪಿ ಅಭಿಯಾನದ ಫೋಸ್ಟರ್ ಬಿಡುಗಡೆಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದಿಂದ ಸೆ.1ರಿಂದ 30ವರೆಗೆ ನೈತಿಕತೆಯೇ ಸ್ವಾತಂತ್ರ್ಯದ ಭರವಸೆ ಎಂಬ ಧ್ಯೇಯವಾಕ್ಯದಡಿ ರಾಷ್ಟ್ರವ್ಯಾಪಿ ಅಭಿಯಾನ ಆಯೋಜಿಸಿದ್ದು, ಅದರಡಿಯಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸಂಘಟನೆ ರಾಜ್ಯಸಹ ಕಾರ್ಯದರ್ಶಿ ಹುಮೇರಾ ಹಾಗೂ ಜಿಲ್ಲಾಧ್ಯಕ್ಷೆ ಶಮೀಮ್ ಉನ್ನೀಸ್ ಸಾಹೇಬಾ ತಿಳಿಸಿದರು.ಸ್ಥಳೀಯ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಹೆಚ್ಚುತ್ತಿರುವ ಅಶ್ಲೀಲತೆ, ಜೂಜಾಟ, ಮದ್ಯಪಾನ, ಮಾದಕ ವ್ಯಸನ, ಸಹಜೀವನ ಪದ್ಧತಿ, ಸಲಿಂಗ ಕಾಮ ಹಾಗೂ ವೇಶ್ಯಾವಾಟಿಕೆಗಳಂತಹ ಕೆಡುಕುಗಳು ಸಮಾಜದಲ್ಲಿ ಅಶಾಂತಿ, ರಾಗ-ದ್ವೇಷ, ಅಸೂಯೆಗೆ ಎಡೆಮಾಡಿಕೊಡುತ್ತಿದ್ದು, ಇದು ನೈತಿಕ ಹಾಗೂ ಜೈವಿಕ ಮಟ್ಟದಲ್ಲಿ ಅಸಂಖ್ಯಾತ ಸಮಸ್ಯೆಗಳಿಗೆ ಕಾರಣವಾಗುತ್ತಿರುವುದು ಕಳವಳಿಕಾರಿ ಸಂಗತಿಯಾಗಿದೆ ಎಂದರು.
ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಸಮಾಜ ಜಾಗೃತಿ ಮೂಡಿಸಬೇಕಾಗಿದ್ದು, ಇಸ್ಲಾಮಿನಲ್ಲಿ ನೈತಿಕತೆ ಮತ್ತು ಮಾನವನ ಅಸ್ತಿತ್ವದ ಸದುದ್ದೇಶವಿದೆ, ಆ ನಿಟ್ಟಿನಲ್ಲಿ ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನ ನಡೆಸಿ ಜನಜಾಗೃತಿ ರೂಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.ಸಂಘಟನೆಯಿಂದ ಸೆಪ್ಟಂಬರ್‌ನಲ್ಲಿ ಇಡೀ ದೇಶದಾದ್ಯಂತ ಅಭಿಯಾನ ನಡೆಸುತ್ತಿದ್ದು ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿ ಸಹ ಜಾಗೃತಿ ಸಮಾವೇಶಗಳು, ಚಿಂತನಾಗೋಷ್ಠಿಗಳು, ಸ್ಪರ್ಧೆಗಳು, ಶಾಲಾ-ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಸದಸ್ಯರಾದ ರಶೀದಾ ಬೇಗಂ, ಅಥಿಯಾ ನಸ್ರೀನ್, ನುಸರತ್ ಜಹಾಂ, ಶಹನಾಜ್ ಬೇಗಂ, ಅಫ್ರಾ ಫತೀನ್ ಸೇರಿದಂತೆ ಇತರರು ಇದ್ದರು.