ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ದೇಶದಲ್ಲಿ ಮಹಾಮಾರಿ ಕೋರೋನಾ ಸಂದರ್ಭದಲ್ಲಿ ಆದ ಸಾವು ನೋವುಗಳಿಗಿಂತ ರಸ್ತೆ ಅಪಘಾತಗಳಿಂದ ಸಂಭವಿಸುತ್ತಿರುವ ಸಾವು ನೋವುಗಳ ಪ್ರಮಾಣ ಹೆಚ್ಚಾಗುತ್ತಿವೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಕಳವಳ ವ್ಯಕ್ತಪಡಿಸಿದರು.ನಗರದ ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದಲ್ಲಿ ಜಿಲ್ಲಾ ಆಡಳಿತ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಹೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಭಯದಿಂದ ಎರಡೆರಡು ಮಾಸ್ಕ್ ಧರಿಸುತ್ತಿದ್ದ ಜನರು; ರಸ್ತೆ ಅಪಘಾತದ ಭಯವಿಲ್ಲದೆ ಹೆಲ್ಮೇಟ್ ಧರಿಸದೆ ಬೈಕ್ ಸವಾರರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ದೇಶ ಅಭಿವೃದ್ಧಿಯಾದಂತೆ ರಸ್ತೆಯಲ್ಲಿ ವಾಹನ ದಟ್ಟನೆಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ರಸ್ತೆ ಸುರಕ್ಷತೆಯನ್ನು ಅಳವಡಿಸಿಕೊಂಡು ವಾಹನ ಚಲಾಯಿಸಬೇಕು. ರಸ್ತೆ ಸುರಕ್ಷತೆಯಲ್ಲಿ ಇಲಾಖೆಗಳ ಜವಾಬ್ದಾರಿ ಅಷ್ಟೇ ಅಲ್ಲದೇ ಸಾರ್ವಜನಿಕರ ಜವಾಬ್ದಾರಿಗಳು ಸಹ ಅಷ್ಟೇ ಮಹತ್ವದ್ದಾಗಿದ್ದು, ರಸ್ತೆ ಸುರಕ್ಷತೆಯನ್ನು ಪಾಲನೆ ಮಾಡಬೇಕು ಎಂದು ಕರೆ ನೀಡಿದರು.
ರಸ್ತೆ ನಿಯಮ ಪಾಲನೆ ಮಾಡುವುದರಿಂದ ತಮ್ಮ ಹಾಗೂ ತಮ್ಮ ಕಟುಂಬದ ಜೀವವನ್ನು ಉಳಿಸಬಹುದು. ೧೮ ವರ್ಷದೊಳಗಿನ ಮಕ್ಕಳಿಗೆ ವಾಹನ ಚಾಲನೆ ಮಾಡದಂತೆ ಪಾಲಕರು ನಿಗಾ ವಹಿಸಬೇಕು ಎಂದು ತಿಳಿಸಿದರು.ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ರಸ್ತೆ ಸಾರಿಗೆ ಸುರಕ್ಷತಾ ಸಮಿತಿಯ ಕಾರ್ಯದರ್ಶಿ ಬಿ.ಬಿ.ಜಂಗಮಶೆಟ್ಟಿ ಮಾತನಾಡಿ ಲೋಕೊಪಯೋಗಿ ಇಲಾಖೆಯಿಂದ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ರಸ್ತೆ ಅಭಿವೃದ್ಧಿಯಾದರೂ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಹೇಳಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ವಸೀಂಬಾಬಾ ಮುದ್ದೇಬಿಹಾಳ ಮಾತನಾಡಿ, ರಸ್ತೆ ಅಪಘಾತಗಳಲ್ಲಿ ಶೇ.೮೫ ರಷ್ಟು ಅಪಘಾತಗಳು ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸುತ್ತಿವೆ. ಚಾಲಕರು ತಾಳ್ಮೆ, ವಿಶ್ರಾಂತಿ, ಜಾಗೃಕತೆಗಳಿಂದ ವಾಹನ ಚಾಲನೆ ಮಾಡಿದಲ್ಲಿ ಅಪಘಾತಗಳು ಕಡಿಮೇ ಆಗುವುದಲ್ಲದೆ; ಆಮದು ಹಾಗೂ ರಫ್ತು ಸರಿಯಾಗಿ ಮಾಡುವುದರ ಮೂಲಕ ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಮಾತನಾಡಿದರು. ಈ ಸಂರ್ಭದಲ್ಲಿ ಸುರಕ್ಷತಾ ಭಿತ್ತಿ ಪತ್ರ ಬಿಡುಗಡೆ ಹಾಗೂ ಚಾಲನಾ ಅನುಜ್ಞಾ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಚಿತ್ರಕಲೆ, ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಮೋಟಾರ ವಾಹನ ನಿರೀಕ್ಷಕರಾದ ಪಂಚಾಕ್ಷರಿ ಅಳವಂಡಿ, ವಿಭಾಗೀಯ ಸಾರಿಗೆ ಅಧಿಕಾರಿ ಡಿ.ಎ.ಬಿರಾದಾರ, ಘಟಕ ವ್ಯವಸ್ಥಾಪಕ ಆನಂದ ಹೂಗಾರ, ಅಧೀಕ್ಷಕರಾದ ರಾಘವೇಂದ್ರ ಯಡಹಳ್ಳಿ, ವಿ.ಎ.ಬಿರಾದಾರ, ಆಟೋ ಚಾಲಕರ ಸಂಘ, ಮ್ಯಾಕ್ಸಿ ಕ್ಯಾಬ್, ಟ್ಯಾಕ್ಸಿ, ಲಾರಿ ಮಾಲೀಕರ ಸಂಘದ ಪದಾಧಿಕಾರಿ, ರೋಟರಿ ಕ್ಲಬ್, ರೆಡ್ ಕ್ರಾಸ್ ಸಂಸ್ಥೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.