ದುಬೈನಿಂದ ಬರುವ ಕಳ್ಳ ಚಿನ್ನಕ್ಕೆ ಭಾರಿ ಬೇಡಿಕೆ! ಕಾಳಸಂತೆಯಲ್ಲಿ ‘ಹಾಟ್‌ ಕೇಕ್‌’ ಮಾದರಿಯಲ್ಲಿ ಮಾರಾಟ

| N/A | Published : Mar 18 2025, 01:49 AM IST / Updated: Mar 18 2025, 07:15 AM IST

ದುಬೈನಿಂದ ಬರುವ ಕಳ್ಳ ಚಿನ್ನಕ್ಕೆ ಭಾರಿ ಬೇಡಿಕೆ! ಕಾಳಸಂತೆಯಲ್ಲಿ ‘ಹಾಟ್‌ ಕೇಕ್‌’ ಮಾದರಿಯಲ್ಲಿ ಮಾರಾಟ
Share this Article
  • FB
  • TW
  • Linkdin
  • Email

ಸಾರಾಂಶ

ದುಬೈನಿಂದ ಕಳ್ಳ ಸಾಗಣೆ ಮುಖಾಂತರ ರಾಜ್ಯಕ್ಕೆ ಬರುವ ‘ಚಿನ್ನ’ ಕಾಳಸಂತೆಯಲ್ಲಿ ‘ಹಾಟ್‌ ಕೇಕ್‌’ ಮಾದರಿಯಲ್ಲಿ ಮಾರಾಟವಾಗುತ್ತಿದೆ. ಎಷ್ಟು ಪ್ರಮಾಣದಲ್ಲಿ ಅಧಿಕೃತವಾಗಿ ಖರೀದಿಯಾಗುತ್ತದೋ ಅಷ್ಟೇ ಪ್ರಮಾಣದಲ್ಲಿ ಅನಧಿಕೃತವಾಗಿಯೂ ಖರೀದಿಯಾಗುತ್ತಿದೆ.

  ಮೋಹನ ಹಂಡ್ರಂಗಿ

 ಬೆಂಗಳೂರು :  ದುಬೈನಿಂದ ಕಳ್ಳ ಸಾಗಣೆ ಮುಖಾಂತರ ರಾಜ್ಯಕ್ಕೆ ಬರುವ ‘ಚಿನ್ನ’ ಕಾಳಸಂತೆಯಲ್ಲಿ ‘ಹಾಟ್‌ ಕೇಕ್‌’ ಮಾದರಿಯಲ್ಲಿ ಮಾರಾಟವಾಗುತ್ತಿದೆ. ಎಷ್ಟು ಪ್ರಮಾಣದಲ್ಲಿ ಅಧಿಕೃತವಾಗಿ ಖರೀದಿಯಾಗುತ್ತದೋ ಅಷ್ಟೇ ಪ್ರಮಾಣದಲ್ಲಿ ಅನಧಿಕೃತವಾಗಿಯೂ ಖರೀದಿಯಾಗುತ್ತಿದೆ.

ತೆರಿಗೆ ವಂಚಕರು ಅಕ್ರಮವಾಗಿ ಗಳಿಸಿದ ಹಣವನ್ನು ಸಕ್ರಮ ಮಾಡಿಕೊಳ್ಳಲು ಕಾಳ ಸಂತೆಯಲ್ಲಿ ಚಿನ್ನ ಖರೀದಿಸುತ್ತಾರೆ. ಚಿನ್ನ ಖರೀದಿಯೇ ಏಕೆಂದರೆ, ಬಚ್ಚಿಡುವುದು ಮತ್ತು ಸಾಗಣೆ ಸುಲಭ. ಮುಖ್ಯವಾಗಿ ಚಿನ್ನದ ಮೇಲಿನ ಹೂಡಿಕೆ ಯಾವತ್ತಿದ್ದರೂ ಲಾಭವೇ. ಹೀಗಾಗಿ ತೆರಿಗೆ ವಂಚಕರು ಬಹುಪಾಲು ಅಕ್ರಮ ಹಣವನ್ನು ಚಿನ್ನ ಖರೀದಿಗೆ ವಿನಿಯೋಗಿಸುತ್ತಾರೆ. ಹೀಗಾಗಿ ವಿದೇಶದಿಂದ ಕಳ್ಳ ಸಾಗಣೆಯಿಂದ ಬರುವ ಚಿನ್ನಕ್ಕೆ ಕಾಳಸಂತೆಯಲ್ಲಿ ಬಹುಬೇಡಿಕೆ ಇದೆ. ಇಲ್ಲಿ ಚಿನ್ನ ಕಳ್ಳ ಸಾಗಣೆದಾರರು, ಮಧ್ಯವರ್ತಿಗಳು ಹಾಗೂ ಖರೀದಿದಾರರು ಲಾಭ ಮಾಡಿಕೊಳ್ಳುತ್ತಾರೆ ಎಂದು ಹೂಡಿಕೆ ತಜ್ಞರೊಬ್ಬರು ಹೇಳುತ್ತಾರೆ.

ಗಣ್ಯರು, ಪ್ರಭಾವಿಗಳೇ ಗ್ರಾಹಕರು:

ಕಳ್ಳ ಸಾಗಣೆಯಿಂದ ಬರುವ ಚಿನ್ನ ಖರೀದಿಗೆ ದೊಡ್ಡ ಗ್ರಾಹಕರ ಬಳಗವೇ ಇದೆ. ಇದರಲ್ಲಿ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮಾಲೀಕರು, ಉದ್ಯಮಿಗಳು, ಸಿನಿಮಾ ನಟ-ನಟಿಯರು ಹೀಗೆ ಸಮಾಜದಲ್ಲಿ ಗಣ್ಯರು, ಜನಪ್ರಿಯರು, ದೊಡ್ಡ ವ್ಯಕ್ತಿಗಳು ಎನಿಸಿಕೊಂಡವರೇ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಸರ್ಕಾರಕ್ಕೆ ತೆರಿಗೆ ವಂಚಿಸಿ ತಮ್ಮ ಅಕ್ರಮ ಸಂಪತ್ತನ್ನು ಮತ್ತಷ್ಟು ವೃದ್ಧಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಇದರ ಹಿಂದೆ ವಂಚಕರ ದೊಡ್ಡ ವ್ಯವಸ್ಥಿತ ಜಾಲವೇ ಕೆಲಸ ಮಾಡುತ್ತಿದೆ ಎಂದು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕ್ಯಾಶ್‌ನಲ್ಲೇ ವ್ಯವಹಾರ:

ಕಾಳಸಂತೆಯ ಈ ಚಿನ್ನ ಖರೀದಿ ವ್ಯವಹಾರ ನೂರಕ್ಕೆ ನೂರರಷ್ಟು ನಗದು ರೂಪದಲ್ಲೇ ನಡೆಯುತ್ತದೆ. ಚೆಕ್‌ ಅಥವಾ ಆನ್‌ಲೈನ್‌ ಮುಖಾಂತರ ಹಣಕಾಸು ವ್ಯವಹಾರ ಮಾಡಿದರೆ, ತನಿಖಾ ಸಂಸ್ಥೆಗಳಿಗೆ ಸಿಕ್ಕಿ ಬೀಳುವ ಭಯದಿಂದ ಈ ಕಳ್ಳ ವ್ಯವಹಾರ ನಗದು ರೂಪದಲ್ಲೇ ನಿರಾತಂಕವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಬೆಂಗಳೂರು ಮಾತ್ರವಲ್ಲದೇ ಎರಡನೇ ಹಂತದ ನಗರಗಳಾದ ತುಮಕೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ದಕ್ಷಿಣ ಕನ್ನಡ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈ ಚಿನ್ನದ ಕಳ್ಳ ವ್ಯವಹಾರ ಅವ್ಯಾಹತವಾಗಿ ನಡೆಯುತ್ತಿದೆ.

ಚಿನ್ನ ಕಳ್ಳ ಸಾಗಣೆ ಹಿಂದೆ ವ್ಯವಸ್ಥಿತ ಜಾಲ:

ದುಬೈನಿಂದ ಚಿನ್ನ ಕಳ್ಳ ಸಾಗಣೆ ವೇಳೆ ನಟ ರನ್ಯಾ ರಾವ್‌ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಈ ಚಿನ್ನ ಕಳ್ಳ ಸಾಗಣೆ ಹಲವು ದಶಕಗಳಿಂದ ನಡೆಯುತ್ತಿದೆ. ಈ ವ್ಯವಸ್ಥಿತ ಜಾಲದಲ್ಲಿ ಹಲವರು ಭಾಗಿಯಾಗಿದ್ದಾರೆ. ಕೆಲವರು ಹಣದಾಸೆಗೆ ‘ಕೊರಿಯರ್‌’ ಮಾದರಿಯಲ್ಲಿ ಚಿನ್ನ ಕಳ್ಳ ಸಾಗಣೆ ಮಾಡಿದರೆ, ಇನ್ನೂ ಕೆಲವರು ವಿಮಾನ ನಿಲ್ದಾಣದ ಕೆಲ ಭ್ರಷ್ಟ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು, ಪೊಲೀಸ್‌ ಅಧಿಕಾರಿಗಳ ನೆರವಿನಿಂದ ವ್ಯವಹಾರದ ಮಾದರಿಯಲ್ಲೇ ಚಿನ್ನ ಕಳ್ಳ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರನ್ಯಾ ಸಿಕ್ಕಿಬಿದ್ದ ಮಾತ್ರಕ್ಕೆ ಚಿನ್ನ ಕಳ್ಳ ಸಾಗಣೆ ನಿಲ್ಲುತ್ತದೆ ಎಂದು ಹೇಳಲಾಗುವುದಿಲ್ಲ. ಈ ವ್ಯವಸ್ಥಿತ ಜಾಲದಲ್ಲಿ ಸಾಕಷ್ಟು ಮಂದಿ ಸಕ್ರಿಯರಾಗಿದ್ದಾರೆ. ಬಿಗಿ ಕ್ರಮಗಳ ಹೊರತಾಗಿ ಈ ಕಳ್ಳ ವ್ಯವಹಾರ ನಿಯಂತ್ರಿಸುವುದು ಕಷ್ಟ ಸಾಧ್ಯ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳುತ್ತಾರೆ.

ರನ್ಯಾಗೆ ನಾನು ನೆರವು ಕೊಟ್ಟಿಲ್ಲ: ಡಿಜಿಪಿ ರಾವ್‌ಬೆಂಗಳೂರು: ನಟಿ ರನ್ಯಾ ರಾವ್‌ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಶಿಷ್ಟಾಚಾರ ಸೌಲಭ್ಯ ದುರ್ಬಳಕೆ ಆರೋಪ ಸಂಬಂಧ ಆಕೆಯ ಮಲತಂದೆಯೂ ಆಗಿರುವ ರಾಜ್ಯ ಪೊಲೀಸ್‌ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ರಾವ್‌ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ನೇತೃತ್ವದ ತನಿಖಾ ತಂಡದ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಈ ವೇಳೆ, ‘ರನ್ಯಾಗೆ ನಾನು ಯಾವುದೇ ನೆರವು ನೀಡಿಲ್ಲ. ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್‌ ದುರ್ಬಳಕೆಯಾಗಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.--

ರನ್ಯಾ ಪ್ರಕರಣದಲ್ಲಿ ಹಲವರಿಗೆ ಸಂಕಷ್ಟ

ನಟಿ ರನ್ಯಾ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಕೇಂದ್ರದ ಡಿಆರ್‌ಐ, ಸಿಬಿಐ, ಇ.ಡಿ. ತನಿಖಾ ಸಂಸ್ಥೆಗಳು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಈಗಾಗಲೇ ರನ್ಯಾ ಜತೆ ಸಂಪರ್ಕದಲ್ಲಿದ್ದ ಎರಡು ಪ್ರತಿಷ್ಠಿತ ಚಿನ್ನಾಭರಣ ಮಳಿಗೆಗಳ ಮಾಲೀಕರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿವೆ. ಮುಂದಿನ ತನಿಖೆಯಲ್ಲಿ ರನ್ಯಾ ಜತೆಗೆ ಸಂಪರ್ಕದಲ್ಲಿದ್ದವರು, ವ್ಯವಹಾರಿಕ ಪಾಲುದಾರರು, ಚಿನ್ನ ಕಳ್ಳ ಸಾಗಣೆಗೆ ಹಣಕಾಸು ನೆರವು ನೀಡಿದವರು, ಕಾಳಸಂತೆಯಲ್ಲಿ ರನ್ಯಾಳಿಂದ ಚಿನ್ನ ಖರೀದಿಸಿದವರು ಸೇರಿದಂತೆ ವ್ಯವಸ್ಥಿತ ಜಾಲದ ಹಿಂದಿರುವವರ ಬಣ್ಣ ಬಯಲಾಗಲಿದೆ. ಮತ್ತಷ್ಟು ಸಂಕಷ್ಟ ಎದುರಾಗಲಿದೆ.