ಜಿಲ್ಲೆಯ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು.
ಕನ್ನಡಪ್ರಭವಾರ್ತೆ ನಾಪೋಕ್ಲು
ಜಿಲ್ಲೆಯ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು.ಸ್ಥಳೀಯ ಕೆಪಿಎಸ್ ಶಾಲಾ ಮೈದಾನದಲ್ಲಿ ಚೀಯಕಪೂವಂಡ ಕುಟುಂಬಸ್ಥರ ವತಿಯಿಂದ ಏರ್ಪಡಿಸಲಾದ 5ನೇ ವರ್ಷದ ಕೊಡವ ಕೌಟುಂಬಿಕಕೇರ್ ಬಲಿ ನಮ್ಮೆ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಕ್ರೀಡಾಪಟುಗಳಿದ್ದರೂ ಮೂಲಭೂತ ಸಮಸ್ಯೆಗಳಿಂದ ನಿರೀಕ್ಷಿತ ಸಾಧನೆ ಸಾಧ್ಯವಿಲ್ಲದಂತಾಗಿದೆ. ಆದುದರಿಂದ ಕ್ರೀಡಾಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸಬೇಕಿದೆ. ಜಿಲ್ಲೆಯ ಕ್ರೀಡಾ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದರು. ಪೊನ್ನಂಪೇಟೆಯಲ್ಲಿ ಬಾಲಕ -ಬಾಲಕಿಯರಿಗೆ ವಸತಿ ಶಾಲೆ, ಟರ್ಫ್ ಮೈದಾನದ ನವೀಕರಣವನ್ನು 3.50 ಕೋಟಿ ರು. ವೆಚ್ಚದಲ್ಲಿ ನಡೆಸಲಾಗುವುದು. ಅದರೊಂದಿಗೆ ಅಲ್ಲಿನ ಶೌಚಾಲಯ, ನೀರಿನ ಟ್ಯಾಂಕ್, ಮತ್ತಿತರ ಕಾಮಗಾರಿಗಳಿಗೆ ಸರ್ಕಾರದಿಂದ 3.50 ಕೋಟಿ ರು. ಮಂಜೂರು ಮಾಡಲಾಗಿದೆ ಎಂದರು. ಬಾಡಗ ಗ್ರಾಮದಲ್ಲಿ ಕ್ರೀಡಾ ಸಂಕೀರ್ಣಕ್ಕೆ 11.50 ಏಕರೆ ಜಾಗ ಗುರುತಿಸಲಾಗಿದ್ದು, ಸರ್ಕಾರದಿಂದ 30 ಕೋಟಿ ರು., ರಾಜ್ಯಸಭಾ ಸದಸ್ಯರಾದ ಅಜಯ್ ಮೇಕಾನ್ ಅವರ 15 ಕೋಟಿ ರು.. ಅನುದಾನದಿಂದ ಕಾಮಗಾರಿ ಕೈಗೊಳ್ಳಲಾಗುವುದು ಎಂದರು ಈ ಸಂದರ್ಭ ಅವರು ಕ್ರೀಡಾಂಗಣ ಹಾಗೂ ವೆಬ್ಸೈಟ್, ಟ್ರೋಫಿಗಳನ್ನುಉದ್ಘಾಟಿಸಿ ಶುಭ ಹಾರೈಸಿದರು. ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಹಾಕಿ ಕ್ರಿಕೆಟ್ ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಅಗತ್ಯ ಸೌಕರ್ಯ ವಿರುವ ಕ್ರೀಡಾ ಸಂಕೀರ್ಣ ರಾಜ್ಯದ ವಿವಿಧ ಜಿಲ್ಲೆಗಳಲ್ಲಿದೆ. 17 ಒಲಂಪಿಯನ್ ಗಳನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಕೊಡಗು ಜಿಲ್ಲೆಗೆ ಇದೆ ಹಾಗಿದ್ದು ಇಲ್ಲಿ ಕ್ರೀಡಾ ಸಂಕೀರ್ಣ ಇಲ್ಲ. ಕೊಡಗಿನಲ್ಲಿಕ್ರೀಡಾ ಸಂಕೀರ್ಣದ ಅವಶ್ಯಕತೆಯಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅಭಿವೃದ್ಧಿಗೆ ಕ್ಷಮಿಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಸದಸ್ಯ ಚೀಯಕಪೂವಂಡ ಕೆ.ಬೋಪಣ್ಣ ಹಾಗೂ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೊಲತಂಡ ಕಿರಣ್ ಪೊನ್ನಪ್ಪ ಮಾತನಾಡಿ ಶುಭ ಹಾರೈಸಿದರು..ಚೀಯಕಪೂವಂಡ ಕುಟುಂಬದ ಪಟ್ಟೆದಾರ ಚಿಟ್ಟಿಯಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ನಾಣಯ್ಯ, ಕೆ.ಪಿ.ಎಸ್ ಶಾಲಾ ಪ್ರಾಂಶುಪಾಲೆ ಮೇದುರ ವಿಶಾಲ್, ಕಾಫಿ ಬೆಳೆಗಾರ ಬೊಳ್ಳಚೆಟ್ಟಿರ ಸುರೇಶ್, ಬೊಟ್ಟೋಳಂಡ ಗಣಪತಿ, ಚೆಟ್ಟಂಗಡ ರವಿ ಸುಬ್ಬಯ್ಯ, ಬಾಳೆಕುಟ್ಟಿರ ರಾಯಪ್ಪ ಮಂದಣ್ಣ, ಪೊನ್ನೊಲತಂಡ ಸೋಮಣ್ಣ, ಅಶೋಕ್ ಸಮಿತಿ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು .ಬಾಲಕಿ ಸ್ವರ ಪ್ರಾರ್ಥಿಸಿದರು. ಚೀಯಕಪೂವಂಡ ಕುಟುಂಬದ ಅಧ್ಯಕ್ಷ ಅಪ್ಪಚ್ಚು ಸ್ವಾಗತಿಸಿದರು. ಮಾಳೇಟಿರ ಶ್ರೀನಿವಾಸ್ ,ಮುಂಡಚಾಡಿರಾ ರಿನಿ ಭರತ್ ನಿರೂಪಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಶ್ವೇತನ್ ಚಂಗಪ್ಪ ಮಾಡಿದರು. ಚೀಯಕಪೂವಂಡ ಸುಶ್ಮಾ ಅಯ್ಯಪ್ಪ ವಂದಿಸಿದರು. ಇದಕ್ಕೂ ಮೊದಲು ಟಗ್ ಆಫ್ ಅಕಾಡೆಮಿ ಹಾಗೂ 5 ವರ್ಷ ಹಗ್ಗಜಗ್ಗಾಟ ಪಂದ್ಯಾಟದ ಉಸ್ತುವಾರಿ ವಹಿಸಿದ ಕುಟುಂಬಗಳ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಕತ್ತಿಯಾಟ್, ಕೋಲಾಟ್ ಇತರ ನೃತ್ಯಪ್ರದರ್ಶನ ಗಮನ ಸೆಳೆಯಿತು.
ಈಶ್ವರ ಇಗ್ಗುತ್ತಪ್ಪ ಎ ಮತ್ತು ಈಶ್ವರ ಇಗ್ಗುತಪ್ಪ ಬಿ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಈಶ್ವರ ಇಗ್ಗುತ್ತಪ್ಲ ಎ ತಂಡವು ಗೆಲುವುಸಾಧಿಸಿತು . ಆನಂತರ ಇತರ ಕುಟುಂಬಗಳ ತಂಡಗಳ ಹಗ್ಗ ಸ್ಪರ್ಧೆಗಳು ಜರುಗಿದವು.ಮೆರವಣಿಗೆ: ಕೇರ್ ಬಲಿ ಪಂದ್ಯಾಟದ ಪ್ರಯುಕ್ತ ನಾಪೋಕ್ಲು ಪಟ್ಟಣದ ಪೊನ್ನಾಡ್ ಸೂಪರ್ ಮಾರ್ಕೆಟ್ ಬಳಿಯಿಂದ ಪಂದ್ಯಾಟ ನಡೆಯುವ ಕೆಪಿಎಸ್ ಶಾಲಾ ಮೈದಾನದವರೆಗೆ ಚೀಯಕಪೂವಂಡ ಕುಟುಂಬಸ್ಥರು ಸಾಂಪ್ರದಾಯಿಕ ಉಡುಗೆ, ತೊಡುಗೆ, ತಳಿಯಕ್ಕಿ ಬೊಳಕ್ ಮೂಲಕ ಮೆರವಣಿಗೆ ನಡೆಸಿ ಎಲ್ಲರ ಗಮನ ಸೆಳೆದರು. ಮೆರವಣಿಗೆಯಲ್ಲಿ ಚೀಯಕಪೂವಂಡ ಮುತ್ತಪ್ಪ, ಬೋಪಣ್ಣ, ಜೋಯಪ್ಪ, ರಾಜಾ ಸೋಮಯ್ಯ ದುಡಿಕೊಟ್ಟ್ ಪಾಟ್ ಪ್ರದರ್ಶಿಸಿದರು. ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಉಪಾಧ್ಯಕ್ಷ ಚೀಯಕಪೂವಂಡ ಕಟ್ಟಿ ಮಂಜುನಾಥ್, ನವೀನ್ ನಾಚಪ್ಪ, ಸಿ.ಎ.ನಾಚಪ್ಪ, ಸತೀಶ್ ದೇವಯ್ಯ, ಸುನಿಲ್ ಮಾಚಯ್ಯ, ಸಚಿನ್ ಮುತ್ತಪ್ಪ, ಪ್ರಕಾಶ್ ಮಂದಣ್ಣ, ಸಚಿನ್ ಪೂವಯ್ಯ, ಶಂಭು ನಂಜಪ್ಪ, ಸೇರಿದಂತೆ ಕುಟುಂಬದ ಎಲ್ಲಾ ಹಿರಿಯರು, ಕಿರಿಯರು ಪಾಲ್ಗೊಂಡಿದ್ದರು.
ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ 5ನೇ ವರ್ಷದ ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆ ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.