ಮಕ್ಕಳ ಕ್ರಿಯಾಶೀಲ, ಸೃಜನಶೀಲ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ಶಾಸಕದ್ವಯರ ಅಭಿಮತ

| Published : Oct 29 2025, 11:00 PM IST

ಮಕ್ಕಳ ಕ್ರಿಯಾಶೀಲ, ಸೃಜನಶೀಲ ಚಟುವಟಿಕೆಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ: ಶಾಸಕದ್ವಯರ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಸೃಜನಶೀಲ ಚಟುವಟಿಕೆಗೆ ವಿದ್ಯಾರ್ಥಿಗಳ ಶ್ರಮ ಜೊತೆಗೆ ಪೋಷಕರು ಮತ್ತು ಗುರುಗಳ ಮಾರ್ಗದರ್ಶನವೂ ಅತ್ಯಗತ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿ ಸಿಂಚನ ಸಾಧನೆ ಮೆಚ್ಚುವಂತದ್ದು ಎಂದು ಶಾಸಕ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಕ್ಕಳ ಕ್ರಿಯಾಶೀಲ ಹಾಗೂ ಸೃಜನಶೀಲ ಚಟುವಟಿಕೆಗೆ ವಿದ್ಯಾರ್ಥಿಗಳ ಶ್ರಮ ಜೊತೆಗೆ ಪೋಷಕರು ಹಾಗೂ ಗುರುಗಳ ಮಾರ್ಗದರ್ಶನವು ಅತ್ಯಗತ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿನಿ ಸಿಂಚನ ಅವರ ಯೋಗ ಸಾಧನೆ ಮೆಚ್ಚುವಂತದ್ದು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಪರಮಪೂಜ್ಯ ಜಗದ್ಗುರು ಶ್ರೀಮನ್ನಿರಂಜನ ಪ್ರಣವ ಸ್ವರೂಪಿ ಶ್ರೀವಿಧ ದಾಸೋಹಿ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಕೃಪಾಶೀರ್ವಾದಗಳೊಂದಿಗೆ ಮಂಗಳವಾರ ಮದೆನಾಡು ಬಿಜಿಎಸ್ ಶಾಲೆ ಸಭಾಂಗಣದಲ್ಲಿ ಸಿಂಚನ ಅವರು ಯೋಗದಲ್ಲಿ 3 ವಿಶ್ವ ದಾಖಲೆ(ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್)ಯ ಪ್ರದರ್ಶನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಬಿಜಿಎಸ್ ಸಂಸ್ಥೆ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು. ಬಿಜಿಎಸ್ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದೆ. ಬಡ ವಿದ್ಯಾರ್ಥಿಗಳ ಏಳಿಗೆಗೆ ಸದಾ ಸ್ಪಂದಿಸುತ್ತಿದೆ ಎಂದು ತಿಳಿಸಿದರು. ಇಲ್ಲಿನ ವಿದ್ಯಾರ್ಥಿನಿ ಸಿಂಚನ ಯೋಗ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಮಾಡಿದ್ದಾರೆ. ಇವರ ಯೋಗ ಪ್ರದರ್ಶನ ಗಮನ ಸೆಳೆಯುತ್ತದೆ ಎಂದರು. ವಿದ್ಯಾರ್ಥಿನಿಯ ಛಲ, ದೃಢಮನಸ್ಸು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದೆ. ಪೋಷಕರು ಸದಾ ಬೆನ್ನುಲುಬಾಗಿ ನಿಂತಿರುವುದು ಹಾಗೂ ಗುರುಗಳ ಮಾರ್ಗದರ್ಶನ ಹೆಚ್ಚಿನದ್ದಾಗಿದೆ ಎಂದರು.

ಅವಕಾಶ ನೀಡಬೇಕು: ಹೀಗೆ ಎಲ್ಲರ ಪ್ರಯತ್ನದಿಂದ ವಿದ್ಯಾರ್ಥಿನಿ ಮೇಲೆ ಬರಲು ಸಾಧ್ಯವಾಗಿದೆ. ವಿದ್ಯಾರ್ಥಿಗಳಿಗೆ ಸಾಧನೆ ಮಾಡುವಂತಾಗಲು ಹೆಚ್ಚಿನ ಪ್ರೋತ್ಸಾಹ ನೀಡುವಂತಾಗಬೇಕು. ವಿದ್ಯಾರ್ಥಿಗಳಲ್ಲಿ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದು, ಅವಕಾಶ ನೀಡಬೇಕು ಎಂದು ತಿಳಿಸಿದರು. ಶಾಸಕರಾದ ಡಾ.ಮಂತರ್‌ಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಚಿಕ್ಕಂದಿನಿಂದಲೇ ಸರಿಯಾದ ಮಾರ್ಗದರ್ಶನ ಮಾಡಿದ್ದಲ್ಲಿ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಲಿದ್ದಾರೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವಂತಾಗಬೇಕು ಎಂದು ಹೇಳಿದರು.ವಿದ್ಯಾರ್ಥಿಗಳಲ್ಲಿಯೂ ಸಹ ದೃಢಸಂಕಲ್ಪ ಇರಬೇಕು. ಸಾಧನೆ ಮಾಡುವ ಛಲ ಇರಬೇಕು. ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನವು ಅತ್ಯಗತ್ಯ ಎಂದು ಹೇಳಿದರು. ಬಿಜಿಎಸ್ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದು, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸತ್ಪ್ರಜೆಗಳಾಗಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.

ದೀರ್ಘ ಕಾಲದ ಅಭ್ಯಾಸ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡಿ, ಕ್ಲಿಷ್ಟಕರ ಯೋಗಾಸನವನ್ನು ಸಿಂಚನ ಮಾಡಿದ್ದಾರೆ. ಇಂತಹ ಯೋಗಾಸನಕ್ಕೆ ದೀರ್ಘ ಕಾಲದ ಅಭ್ಯಾಸ ಇರಬೇಕು ಎಂದರು. ಯೋಗ ಮಾಡುವಾಗ ಖುಷಿಯಿಂದ ಮಾಡಿದರು. ಗೌರವದಿಂದ ಅಭ್ಯಾಸ ಮಾಡಿದಾಗ ಸಿದ್ದಿ ದೊರೆಯುತ್ತದೆ ಎಂದು ಸ್ವಾಮೀಜಿ ಅವರು ವಿವರಿಸಿದರು. ಮನಸ್ಸಿನ ಅಂತರಂಗದ ಕ್ಲೇಶ ಕೊಳೆಯನ್ನು ತೆಗೆಯುವುದು ಯೋಗವಾಗಿದೆ. ಅಕ್ಕ ಮಹಾದೇವಿ, ಮೀರಾದೇವಿ, ಬುದ್ಧ, ಅಲ್ಲಮ, ಒಬ್ಬ ತಾಯಿ ಮನಸ್ಸು ಮಾಡಿದರೆ ಮಕ್ಕಳು ಯಶಸ್ಸು ಸಾಧ್ಯ ಎಂದು ನುಡಿದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸವರಾಜು ಅವರು ಮಾತನಾಡಿ ಮಾನಸಿಕ ಒತ್ತಡ ಕಡಿಮೆ ಮಾಡಲು ಯೋಗ ಅಗತ್ಯವಾಗಿದೆ. ಮಕ್ಕಳ ಅಭಿರುಚಿಗೆ ಒತ್ತು ನೀಡಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವಂತಾಗಬೇಕು ಎಂದರು. ಏಷ್ಯಾ ಹೆಡ್ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮುಖ್ಯ ತೀರ್ಪುಗಾರರಾದ ಡಾ.ಮನಿಶ್ ವೈಶ್ನೋಯಿ ಅವರು ಮಾತನಾಡಿ, ಕಠಿಣ ಪರಿಸ್ಥಿತಿಯಲ್ಲಿ ಯೋಗ ಮಾಡಿ ಗೋಲ್ಡನ್ ಬುಕ್ ಆಪ್ ರೆಕಾರ್ಡ್ ನಿರ್ಮಿಸಿದ್ದಾರೆ ಎಂದು ವಿವರಿಸಿದರು.

ಯೋಗ ಸಹಕಾರಿ: ಯೋಗ ಶಿಕ್ಷಕರಾದ ಮಹೇಶ್ ಕುಮಾರ್ ಅವರು ಮಾತನಾಡಿ ಸಿಂಚನ ಯೋಗ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವಂತಾಗಬೇಕು. ಶರೀರ ಮತ್ತು ಮನಸ್ಸನ್ನು ಕೂಡಿಸುವುದೇ ಯೋಗವಾಗಿದೆ. ಕಿನ್ನತೆಯಿಂದ ಹೊರಬರಲು ಯೋಗ ಸಹಕಾರಿ. ಯೋಗ ಕ್ಷೇತ್ರದಲ್ಲಿ ಪ್ರಾಚೀನ ಭಾರತ ಕೊಡುಗೆ ಹೆಚ್ಚಿನದ್ದಾಗಿದೆ. ಯೋಗಾಸನ ನೆಮ್ಮದಿ ಮತ್ತು ಶಾಂತಿಗೆ ಅನುಕೂಲವಾಗಿದೆ ಎಂದರು. ವಿದ್ಯಾರ್ಥಿನಿ ಸಿಂಚನ ಮದೆನಾಡು ಗ್ರಾಮದ ಬಿಜಿಎಸ್ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಯೋಗಾಸನದಲ್ಲಿ 3 ಗೋಲ್ಡನ್ ಬುಕ್ ಆಪ್ ರೆಕಾರ್ಡ್ ನಿರ್ಮಿಸಿದರು. ಖಂಡಪೀಡಾಸನದಲ್ಲಿ 1.44 ನಿಮಿಷ ಇರುವುದು, ಧನುರಾಸನದಲ್ಲಿ ಒಂದು ನಿಮಿಷ ಸುತ್ತುವುದು ಹಾಗೂ ಡಿಂಬಾಸನದಲ್ಲಿ ಒಂದು ನಿಮಿಷದಲ್ಲಿ 15 ಸುತ್ತು ಹಾಕುವ ದಾಖಲೆ ನಿರ್ಮಿಸಿದಳು. ಡಿಂಬಾಸನ ಭಂಗಿಯಲ್ಲಿ 1 ನಿಮಿಷಕ್ಕೆ 10 ಸುತ್ತು ಬರುವ ಗುರಿ ನಿಗದಿ ಮಾಡಲಾಗಿತ್ತು. ಆದರೆ, ಸಿಂಚನಾ ನಿಮಿಷಕ್ಕೆ 15 ಸುತ್ತು ಬರುವ ಮೂಲಕ ಅಚ್ಚರಿ ಮೂಡಿಸಿದಳು. ಖಂಡಪೀಡಾಸನ ಭಂಗಿಯಲ್ಲಿ 1 ನಿಮಿಷ ಇರುವ ಗುರಿ ಇತ್ತು. ಆದರೆ, 1.44 ನಿಮಿಷ ಇರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ಧನುರಾಸನ ಭಂಗಿಯಲ್ಲಿ ಒಂದು ನಿಮಿಷಕ್ಕೆ 18 ಬಾರಿ ಸುತ್ತುವ ಮೂಲಕ ಅಂತರರಾಷ್ಟ್ರೀಯ ದಾಖಲೆ ನಿರ್ಮಿಸಿದಳು. ಪೂಜ್ಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ವಿದ್ಯಾರ್ಥಿನಿಯ ಪೋಷಕರು ಇತರರು ಇದ್ದರು.