ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ನೈಸರ್ಗಿಕ ಕೃಷಿಯಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸಬಹುದು ಎಂದು ಹಾಸನದ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಿವಶಂಕರ್ ಹೇಳಿದರು.ತಾಲೂಕಿನ ಕುರುಭತ್ತೂರು ಗ್ರಾಪಂನ ಕುವೆಂಪು ಸಭಾಂಗಣದಲ್ಲಿ ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರ ಕಂದಲಿ ಕೃಷಿ ವಿಜ್ಞಾನಕೇಂದ್ರ ಹಾಗೂ ತೋಟಗಾರಿಕೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಆಧುನಿಕ ಕೃಷಿ ಪದ್ಧತಿಯಿಂದ ಹಾಳಾಗುತ್ತಿರುವ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಂಡು ಮುಂದಿನ ಜನಾಂಗಕ್ಕೆ ಉತ್ತಮ ಕೃಷಿಭೂಮಿ ಹಸ್ತಾಂತರಿಸುವ ಉದ್ದೇಶದಿಂದ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಸ್ವಾಭಾವಿಕ ಕೃಷಿಗೆ ಒತ್ತುಕೊಡುವ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಸತೀಶ್ ಮಾತನಾಡಿ, ಸಮಗ್ರ ಕೃಷಿಯಿಂದ ಮಾತ್ರ ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದಾಗಿದೆ. ಕೃಷಿಯೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆಯಂತ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಾಗ ರೈತರು ತಮಗಾಗುವ ನಷ್ಟದ ಪ್ರಮಾಣವನ್ನು ತಗ್ಗಿಸುವುದರೊಂದಿಗೆ ನಿಖರ ಆದಾಯ ಪಡೆಯಬಹುದಾಗಿದೆ. ಇಂದು ಎಲ್ಲ ಇಲಾಖೆಗಳಲ್ಲೂ ಸರ್ಕಾರದ ಸೌಲಭ್ಯಗಳು ಲಭ್ಯವಿದ್ದು ರೈತರು ಇಲಾಖೆಗಳೊಂದಿಗೆ ನಿರಂತರ ಒಡನಾಟ ಬೆಳಸಿಕೊಂಡಾಗ ಈ ಯೋಜನೆಗಳ ಫಲ ಪಡೆಯಬಹುದಾಗಿದೆ ಎಂದರು.ಕೃಷಿ ಅಧಿಕಾರಿ ಕೇಶವಮೂರ್ತಿ ಮಾತನಾಡಿ, ರೈತರಿಗೆ ಹಿಂದೆ ಎಂದಿಲ್ಲದ ಮಹತ್ವವನ್ನು ಸರ್ಕಾರ ನೀಡುತ್ತಿದೆ. ಬಿತ್ತನೆ ವೇಳೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಹಲವು ಆಧುನಿಕ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ಈ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಲು ಹತ್ತಿರ ಪ್ರಾಥಮಿಕ ಕೃಷಿ ಕೇಂದ್ರಗಳನ್ನು ಸಂಪರ್ಕಿಸಬೇಕು. ಈ ಬಾರಿ ನೈರ್ಸಗಿಕ ಕೃಷಿಗೆ ವಳಲಹಳ್ಳಿ ಗ್ರಾಮ ಪಂಚಾಯಿತಿಯನ್ನು ಆಯ್ಕೆಮಾಡಿಕೊಳ್ಳಲಾಗಿದೆ ಎಂದರು.
ವೇದಿಕೆಯಲ್ಲಿ ಕುರುಭತ್ತೂರು ಗ್ರಾಮ ಪಂಚಾಯತ್ ಮಟ್ಟದ ಬೆಳೆಗಾರರ ಸಂಘದ ಅಧ್ಯಕ್ಷ ದರ್ಶನ್, ಕಾಫಿ ಮಂಡಳಿ ಕಿರಿಯ ಸಂಪರ್ಕ ಅಧಿಕಾರಿ ರಂಜಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))