ಮಂಗಳೂರು ನೆಹರು ಮೈದಾನದಲ್ಲಿ ಫುಟ್‍ಬಾಲ್ ಕ್ರೀಡಾಂಗಣಕ್ಕೆ ಆ್ಯಸ್ಟ್ರೋ ಟರ್ಫ್ ಹಾಗೂ ಸುತ್ತಲೂ ಇಂಟರ್‌ಲಾಕ್ ಅಳವಡಿಕೆ ಕಾಮಗಾರಿ ಉದ್ಘಾಟನಾ ಸಮಾರಂಭ ಬುಧವಾರ ನೆರವೇರಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ಫುಟ್‌ಬಾಲ್ ಕ್ರೀಡಾಂಗಣ ಅಭಿವೃದ್ಧಿಗೊಂಡಿದೆ. ಇಲ್ಲಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.ನೆಹರು ಮೈದಾನದಲ್ಲಿ ಫುಟ್‍ಬಾಲ್ ಕ್ರೀಡಾಂಗಣಕ್ಕೆ ಆ್ಯಸ್ಟ್ರೋ ಟರ್ಫ್ ಹಾಗೂ ಸುತ್ತಲೂ ಇಂಟರ್‌ಲಾಕ್ ಅಳವಡಿಕೆ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಬುಧವಾರ ಮಾತನಾಡಿದರು.
ಅಂತಾರಾಷ್ಟ್ರೀಯ ಪಂದ್ಯಾಟ ನಡೆಸಲು ಸೂಕ್ತವಾಗುವಂತೆ ಫುಟ್‌ಬಾಲ್ ಕ್ರೀಡಾಂಗಣ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಫ್ಲಡ್‌ಲೈಟ್, ಪೆವಿಲಿಯನ್ ಸಹಿತ ಫುಟ್‌ಬಾಲ್ ಆಟಕ್ಕೆ ಸಂಬಂಧಿಸಿದ ವಸ್ತುಗಳನ್ನು ಹೊಂದಿರುವ ಶೋರೂಂ ಇಲ್ಲೇ ಆರಂಭವಾಗಲಿದೆ ಎಂದು ತಿಳಿಸಿದರು.ಮಂಗಳೂರಿನಲ್ಲಿ ಕ್ರೀಡಾ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಉರ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶಟಲ್ ಬ್ಯಾಡ್ಮಿಂಟನ್, ಕಬಡ್ಡಿ ಕ್ರೀಡಾಂಗಣ, ಎಮ್ಮೆಕೆರೆಯಲ್ಲಿ ಅಂ.ರಾ. ಈಜುಕೊಳ ನಿರ್ಮಾಣವಾಗಿದೆ. ಈ ಮೂಲಕ ಇಲ್ಲಿನ ಯುವಕರನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನಾಗಿ ರೂಪಿಸುವ ಕೆಲಸ ನಡೆಯುತ್ತಿದೆ. ಈ ರೀತಿ ಕ್ರೀಡಾ ಕ್ಷೇತ್ರವೂ ಸ್ಮಾರ್ಟ್ ಆದರೆ ಮಂಗಳೂರು ಇನ್ನಷ್ಟು ಬೆಳೆಯಲು ಸಾಧ್ಯ ಎಂದರು.ಕಾಮಗಾರಿ ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಫುಟ್‌ಬಾಲ್ ಮೈದಾನ ಕನಸು ನನಸಾಗಿದೆ. ನನಗೂ ಫುಟ್‌ಬಾಲ್ ಆಡಬೇಕು ಎನಿಸುತ್ತಿದೆ. ಕ್ರೀಡೆಗೆ ಮೂಲಸೌಕರ್ಯ ಒದಗಿಸುವ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳು ಇಲ್ಲಿ ಸಿಗುವಂತಾಗಬೇಕು. ಫ್ಲಡ್‌ಲೈಟ್, ಪೆವಿಲಿಯನ್ ರಚನೆಗೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.ದ.ಕ.ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ಎಂ.ಡಿ.ಅಸ್ಲಂ ಇದ್ದರು.