ಸಾರಾಂಶ
ಹುಬ್ಬಳ್ಳಿ:
ಭಾರತವು ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವುದರಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.ವೆಂಕಟೇಶ ಅಶೋಕ ಕಾಟವೆ(ವಿಎಕೆ) ಫೌಂಡೇಶನ್ ವತಿಯಿಂದ ಇಲ್ಲಿನ ವಿದ್ಯಾನಗರ ಕೆಎಲ್ಇ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕೌಶಲ್ಯಭರಿತ ಕೆಲಸಗಾರರು ಸಿಗುತ್ತಿಲ್ಲ ಎಂಬ ಅಳಲು ಉದ್ಯೋಗದಾತರಿಂದ ವ್ಯಕ್ತವಾಗುತ್ತಿದೆ. ಈ ಮಧ್ಯೆಯ ಸರ್ಕಾರಿ ಉದ್ಯೋಗವನ್ನೇ ಬಯಸುವವರ ಸಂಖ್ಯೆಯೂ ಹೆಚ್ಚಿದೆ. ಅಲ್ಲದೇ, ಉದ್ಯೋಗ ಹುಡುಕುವ ಸಂಖ್ಯೆಯೂ ಅಷ್ಟೇ ಪ್ರಮಾಣದಲ್ಲಿ ಬೆಳೆಯುತ್ತಿದೆ. ಹೀಗಾಗಿ ಕೌಶಲ್ಯಭರಿತ ಶಿಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಒತ್ತು ನೀಡುತ್ತಿದ್ದು, ಹತ್ತಾರು ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಅವುಗಳನ್ನು ಯುವಜನತೆ ಸದುಪಯೋಗ ಪಡಿಸಿಕೊಂಡು ಉದ್ಯೋಗದಾತರಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ವಾಗ್ದಾಳಿ ಮಾಡುವವರಿದ್ದಾರೆ. ಬಿಹಾರ ಚುನಾವಣೆಯಲ್ಲಿ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಕೊಡುವ ಭರವಸೆಯನ್ನು ಕಾಂಗ್ರೆಸ್ ನೀಡಿತ್ತು. ಹಾಗಿದ್ದರೆ, ಬಿಹಾರನಲ್ಲಿ 2 ಕೋಟಿ ಉದ್ಯೋಗ ಒದಗಿಸಬೇಕಾಗಿತ್ತು. ಆದರೆ, ಇದು ಸಾಧ್ಯವಿಲ್ಲ ಎಂಬುದನ್ನು ಅರಿತ ಮತದಾರರು ಎನ್‌ಡಿಎ ಬೆಂಬಲಿಸಿದ್ದಾರೆ. ಇನ್ನೊಂದೆಡೆ ಪ್ರತಿ ಎರಡು ತಿಂಗಳಿಗೊಮ್ಮೆ ರೋಜಗಾರ ಮೇಳದ ಮೂಲಕ 1 ಲಕ್ಷ ಜನರಿಗೆ ಉದ್ಯೋಗ ನೀಡುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ ಎಂದರು.
ವಿಎಕೆ ಫೌಂಡೇಶನ್ ಮೂಲಕ ವೆಂಕಟೇಶ ಕಾಟವೆ ಅವರು ಉದ್ಯೋಗದಾತರು ಹಾಗೂ ಆಕಾಂಕ್ಷಿಗಳನ್ನು ಒಂದೇ ವೇದಿಕೆಗೆ ತರುವ ಕೆಲಸ ಮಾಡಿದ್ದಾರೆ. ಅವರು ಉತ್ಸಾಹಿ ಯುವಕರು, ಅವರಿಂದ ಇನ್ನಷ್ಟು ಸಮಾಜಸೇವೆ ಮುಂದುವರಿಯಲಿ ಎಂದು ಹೇಳಿದರು.ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಹುಬ್ಬಳ್ಳಿ-ಧಾರವಾಡವು ಉತ್ತರ ಕರ್ನಾಟಕದ ಶೈಕ್ಷಣಿಕ ಹಬ್ ಆಗಿ ಬೆಳೆದಿದೆ. ಅನೇಕ ವಿದ್ಯಾಥಿರ್ಗಳಿಗೆ ಶಿಕ್ಷಣ ಪಡೆದ ನಂತರ ಮುಂದೇನು ಎಂಬ ಪ್ರಶ್ನೆ ಇರುತ್ತದೆ. ಅಂಥವರಿಗೆ ಉದ್ಯೋಗ ಮೇಳಗಳು ಬಹಳ ಅನುಕೂಲವಾಗುತ್ತವೆ. ಈ ಭಾಗದಲ್ಲಿ ಇನ್ನಷ್ಟು ಕಂಪನಿಗಳು ಬರಬೇಕಾಗಿದೆ. ಆಗ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗೀಂದ್ರ ಶ್ರೀ, ದುಡಿಮೆ ಮನುಷ್ಯನ ಆಜನ್ಮಸಿದ್ಧ ಹಕ್ಕು, ವಿದ್ಯಾರ್ಜನೆ ಪೂರೈಸಿದ ಮೇಲೆ ಒಂದು ಉದ್ಯೋಗ ಇರಬೇಕು. ಈ ದಿಸೆಯಲ್ಲಿ ವಿಎಕೆ ಫೌಂಡೇಶನ್ ಈ ಭಾಗದ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗಲು ವೇದಿಕೆ ಸೃಷ್ಟಿಸಿದೆ ಎಂದರು.ಮೇಯರ್ ಜ್ಯೋತಿ ಪಾಟೀಲ ಮಾತನಾಡಿ, ಮೊದಲೆಲ್ಲ ಕಂಪನಿ ಇದ್ದಲ್ಲಿಗೆ ಹೋಗಿ ಕೆಲಸ ಕೇಳಲಾಗುತ್ತಿತ್ತು. ಈಗ ಕಂಪನಿಗಳೇ ಅಭ್ಯರ್ಥಿಗಳ ಬಳಿ ಬಂದು ಸಂದರ್ಶನ ಮಾಡಿ ಕೆಲಸ ಕೊಡುವ ಕಾರ್ಯ ನಡೆಯುತ್ತಿದೆ. ಇದೇ ಬದಲಾವಣೆ. ಇಂತಹ ಕಾರ್ಯಕ್ಕೆ ವಿಎಕೆ ಫೌಂಡೇಶನ್ ಸಾಥ್ ನೀಡಿರುವುದು ಶ್ಲಾಘನೀಯ ಎಂದು ಹೇಳಿದರು.
ಸ್ಥಳದಲ್ಲಿಯೇ ಕೆಲವರಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಲಾಯಿತು. ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಅಶೋಕ ಕಾಟವೆ, ಉಪಮೇಯರ್ ಸಂತೋಷ ಚೌಹಾಣ, ಉದ್ಯಮಿ ವೀರೇಶ ಉಂಡಿ, ಮಂಜುನಾಥ, ರಾಜು ಕಾಳೆ, ಡಾ. ಸುಪ್ರಿತಾ, ರಾಜು ಪಾಟೀಲ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಸವಿತಾ ಅಮರಶೆಟ್ಟಿ, ವಿರೂಪಾಕ್ಷಪ್ಪ ಯಮಕನಮರಡಿ ಸೇರಿದಂತೆ ಹಲವರಿದ್ದರು.;Resize=(128,128))
;Resize=(128,128))
;Resize=(128,128))