ಯುವಜನರು ಕಲಿತಷ್ಟೂ ಆಧುನೀಕರಣದ ಜಗತ್ತಿನಲ್ಲಿ ಉತ್ತಮವಾಗಿ ಬದುಕಬಹುದು. ಬದುಕಿನಲ್ಲಿ ಶಿಸ್ತು, ಸಂಯಮ, ತಾಳ್ಮೆ, ಸೇವಾ ಮನೋಭಾವನೆ ಮತ್ತು ಮೌಲ್ಯಧಾರಿತ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಅನುಸರಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಜಾಗತಿಕ ಯುಗದಲ್ಲಿ ಯುವಕರಿಗೆ ಹಲವಾರು ಅವಕಾಶಗಳಿವೆ. ಯುವಕರು ಬದುಕಿನ ದಾರಿಯನ್ನು ಹುಡುಕುವ ಪ್ರಯತ್ನ ಮಾಡಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆ ಆಗಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಮಂಡ್ಯ ಜಿಲ್ಲಾ ಶಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಯೂತ್ ರೆಡ್ ಕ್ರಾಸ್ ಘಟಕದಡಿ ಮೈಸೂರು ವಿಭಾಗದ ಕಾಲೇಜು ವಿದ್ಯಾರ್ಥಿಗಳಿಗೆ ಮೂರು ದಿನಗಳ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಜನರು ಕಲಿತಷ್ಟೂ ಆಧುನೀಕರಣದ ಜಗತ್ತಿನಲ್ಲಿ ಉತ್ತಮವಾಗಿ ಬದುಕಬಹುದು. ಬದುಕಿನಲ್ಲಿ ಶಿಸ್ತು, ಸಂಯಮ, ತಾಳ್ಮೆ, ಸೇವಾ ಮನೋಭಾವನೆ ಮತ್ತು ಮೌಲ್ಯಧಾರಿತ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಅನುಸರಿಸಬೇಕು ಎಂದರು.ಯುವಕರು ಇತಿಹಾಸವನ್ನು ಅರ್ಥೈಸಿಕೊಳ್ಳುವುದು ಅವಶ್ಯಕ. ಸ್ವಾತಂತ್ರ್ಯಪೂರ್ವದ ಇತಿಹಾಸ ಸಂಸ್ಕಾರವನ್ನು ಕಲಿಸಿದರೆ, ಸ್ವಾತಂತ್ರ್ಯದ ನಂತರದ ಇತಿಹಾಸ ಹೋರಾಟದ ಮಹತ್ವವನ್ನು ತಿಳಿಸುತ್ತದೆ. ಸ್ವಾತಂತ್ರ್ಯಕ್ಕಾಗಿ ಅನೇಕ ಬಲಿದಾನಗಳೇ ಭಾರತದಲ್ಲಿ ನಡೆದುಹೋಗಿದೆ. ನಮ್ಮ ದೇಶದಲ್ಲಿ ಮಾತ್ರ ಅನೇಕ ಕವಿಗಳು, ಮಹಾನ್ ನಾಯಕರು, ದಾರ್ಶನಿಕರು ಮತ್ತು ಸಂತರು ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತೆ ಎನ್.ಮಂಜುಶ್ರೀ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಆದರೂ ಅತ್ಯಂತ ಸಂತೋಷದಿಂದ ಭಾಗವಹಿಸುತ್ತೇನೆ. ಮಂಡ್ಯದ ಗಂಡು ನಟಿ ಅಂಬರೀಶ್ ರವರಾದರೆ ನಾನು ಮಂಡ್ಯದ ಹೆಣ್ಣು ಏಕೆಂದರೆ ಮಂಡ್ಯ ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿ ನಾನು ಅಧಿಕಾರ ಸ್ವೀಕರಿಸಿದ್ದು ನನ್ನ ಹೆಮ್ಮೆ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಯುವಜನತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಸ್ಥಾನ ಅಲಂಕರಿಸಬೇಕು ಅದಕ್ಕಾಗಿ ನಾವು ‘ವಿಜಯೀಭವ’ ಎಂಬ ಯೂಟ್ಯೂಬ್ ಚಾನೆಲ್ ತೆರೆದಿದ್ದೇವೆ. ಇದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಶಿಕ್ಷಣ ನೀಡಲಾಗುವುದು. ಐಎಎಸ್ ಐಪಿಎಸ್ ನಂತಹ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಯಶೋಗಾಥೆಯನ್ನು ಸ್ಪರ್ಧಾರ್ಥಿಗಳಿಗೆ ಪೂರ್ತಿ ತುಂಬಲು ಪ್ರಸಾರ ಮಾಡಲಾಗುತ್ತದೆ ಎಂದರು.
ಯೂತ್ ರೆಡ್ ಕ್ರಾಸ್ ಶಿಬಿರಗಳಲ್ಲಿ ಜೀವ ಉಳಿಸಬಹುದಾದ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳಬಹುದು, ಇದರಿಂದ ಎಷ್ಟೋ ಸಂದರ್ಭದಲ್ಲಿ ಪ್ರಾಣ ಹಾನಿಯನ್ನು ತಪ್ಪಿಸಬಹುದು. ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಕ್ಕೆ ಬಂದಿರುವ ಶಿಬಿರಾರ್ಥಿಗಳು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದರು.ನಂತರ ಯೂತ್ ರೆಡ್ ಕ್ರಾಸ್ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಬಸ್ರೂರು ರಾಜೀವ್ ಶೆಟ್ಟಿ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ ಇತರರಿದ್ದರು.