ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಮನ್ನಣೆ

| Published : Mar 20 2024, 01:15 AM IST

ಸಾರಾಂಶ

ಜಗತ್ತಿನ ದೊಡ್ಡ ಪಕ್ಷವಾಗಿರುವ ಬಿಜೆಪಿ ತತ್ವಾಧಾರಿತ ಪಕ್ಷವಾಗಿದೆ. ನರೇಂದ್ರ ಮೋದಿ ದೂರದೃಷ್ಟಿಯ ನಾಯಕತ್ವದಿಂದ ಭಾರತವು ವಿಶ್ವದಲ್ಲಿಯೇ ಬಲಶಾಲಿ ರಾಷ್ಟವಾಗಿದೆ

ಶಿರಹಟ್ಟಿ: ಬಿಜೆಪಿಯಲ್ಲಿ ಮಾತ್ರ ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಲಾಗುತ್ತದೆ. ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷವೇ ಮುಖ್ಯ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಈ ಪಕ್ಷದಲ್ಲಿ ಕಾರ್ಯಕರ್ತರಿಗಿರುವ ಗೌರವ, ಮನ್ನಣೆ ಯಾವ ಪಕ್ಷದಲ್ಲೂ ಇಲ್ಲ ಎಂದು ಶಿರಹಟ್ಟಿ ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಹೇಳಿದರು.

ಸೋಮವಾರ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಲಕ್ಷ್ಮೇಶ್ವರ ನಗರಕ್ಕೆ ಆಗಮಿಸಿದ ವೇಳೆ ಪಕ್ಷದ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಜಿಲ್ಲಾಧ್ಯಕ್ಷ ರಾಜು ಕುರಡಗಿ ಸೂಚನೆಯಂತೆ ಬಿಜೆಪಿ ಶಿರಹಟ್ಟಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾಗಿ ನೇಮಕಗೊಂಡು ಮಾತನಾಡಿದರು.

ಕಾರ್ಯಕರ್ತರು ಪಕ್ಷದಲ್ಲಿ ಸಂಘಟಾನಾತ್ಮಕವಾಗಿ ದುಡಿದು ಕೇಂದ್ರ ಮತ್ತು ಹಿಂದಿನ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಜತೆಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರ ವರ್ಚಸ್ಸು ಕುಂದದಂತೆ ರಾಜ್ಯದಲ್ಲಿ ಅಭೂತಪೂರ್ವ ಗೆಲವು ಸಾಧಿಸಲು ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.

ಬಿಜೆಪಿ ವಿಶ್ವದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷವಾಗಿದೆ. ಈ ಪಕ್ಷವು ಇತರೇ ಪಕ್ಷಗಳಿಗಿಂತ ಭಿನ್ನವಾಗಿದ್ದು, ಕಾರ್ಯಕರ್ತರಿಗೆ ಮನ್ನಣೆ ನೀಡುವ ಏಕೈಕ ಪಕ್ಷವಾಗಿದೆ. ಜಗತ್ತಿನ ದೊಡ್ಡ ಪಕ್ಷವಾಗಿರುವ ಬಿಜೆಪಿ ತತ್ವಾಧಾರಿತ ಪಕ್ಷವಾಗಿದೆ. ನರೇಂದ್ರ ಮೋದಿ ದೂರದೃಷ್ಟಿಯ ನಾಯಕತ್ವದಿಂದ ಭಾರತವು ವಿಶ್ವದಲ್ಲಿಯೇ ಬಲಶಾಲಿ ರಾಷ್ಟವಾಗಿದೆ ಎಂದರು.

ಪಕ್ಷದ ನಿಷ್ಟಾವಂತ ಕಾರ್ಯಕರ್ತರು ಎದೆಗುಂದದೆ ಸಕ್ರೀಯವಾಗಿ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ದೇಶವಾಸಿಗಳ ಪರವಾಗಿರುವ ಪ್ರಧಾನಿ ಮೋದಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಜನಪರ ಕಾರ್ಯಕ್ರಮಗಳಿಂದ ದೇಶದ ಜನರು ಬಹುಪಾಲು ಬಿಜೆಪಿ ಪರವಾಗಿದ್ದಾರೆ. ಹಾಗಾಗಿಯೇ ಸ್ಥಳೀಯ ಚುನಾವಣೆಯಿಂದ ಸಂಸತ್ ಚುನಾವಣೆಯವರೆಗೂ ಬಿಜೆಪಿ ಗೆಲವು ಸಾಧಿಸುತ್ತಿದೆ ಎಂದು ಹೇಳಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನದಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಈಗಾಗಲೇ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಸಳಿಸಲು ಹಾಗೂ ಅವರನ್ನು ಗೆಲ್ಲಿಸಲು ತಂತ್ರ ರೂಪಿಸಲಾಗುತ್ತಿದೆ. ಕೊರೋನಾ ಸಂಕಷ್ಟದ ದಿನಗಳಲ್ಲಿಯೂ ದೇಶದ ಜನರಿಗೆ ಅನೇಕ ರೀತಿಯಲ್ಲಿ ನೆರವು ನೀಡಿದೆಯಲ್ಲದೇ ಕೋವಿಡ್ ಲಸಿಕೆ ನೀಡಿ ದೇಶದ ಜನರ ಪ್ರಾಣ ಉಳಿಸುವ ಕೆಲಸ ಪಕ್ಷದ ನಾಯಕರು ಮಾಡಿದ್ದಾರೆ. ಜನ ಇದನ್ನೆಂದು ಮರೆಯುವುದಿಲ್ಲ ಎಂದರು.

ಕೇಂದ್ರ ಮತ್ತು ಹಿಂದಿನ ರಾಜ್ಯ ಸರ್ಕಾರಗಳು ಮಾಡಿರುವ ಜನಪರ ಕಾರ್ಯಗಳೆ ಬಿಜೆಪಿ ಪಕ್ಷದ ಗೆಲುವಿಗೆ ಸಹಕಾರಿಯಾಗಲಿವೆ. ಪಕ್ಷದ ಅಭಿವೃದ್ಧಿ ಕಾರ್ಯಗಳೆ ನಮಗೆ ಬೆನ್ನೆಲುಬಾಗಲಿವೆ. ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿ ಪಕ್ಷವನ್ನು ಪ್ರತಿ ಬೂತ್ ಮಟ್ಟದಿಂದ ಸಂಘಟಿಸಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

ಕಳೆದ ೨೦೨೩ರ ಮೇ ತಿಂಗಳಲ್ಲಿ ಈಗಿನ ಹಾವೇರಿ ಮತಕ್ಷೇತ್ರದ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿ ಡಾ. ಚಂದ್ರು ಲಮಾಣಿ ಅವರ ಪ್ರಚಾರಾರ್ಥವಾಗಿ ಶಿರಹಟ್ಟಿಗೆ ಅಗಮಿಸಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ವೇಳೆ ಕಾರ್ಯಕರ್ತರಿಗೆ ನೀಡಿದ ಭರವಸೆಯಂತೆ ನಡೆದುಕೊಂಡಿದ್ದು, ಅವರ ಗೆಲುವು ನೂರಕ್ಕೆ ನೂರು ಸತ್ಯ ಎಂದು ತಿಳಿಸಿದರು.

ಹಾವೇರಿ ಲೋಕಸಭಾ ಮತಕ್ಷೇತ್ರದ ಅಭ್ಯರ್ಥಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಡಾ. ಚಂದ್ರು ಲಮಾಣಿ, ಲಕ್ಷ್ಮೇಶ್ವರ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ಶಂಕರ ಮರಾಠೆ ಸೇರಿ ಅನೇಕರು ಉಪಸ್ಥಿತರಿದ್ದರು.