ಕಸಾಪಗೆ ಹೆಚ್ಚಿನ ಅನುದಾನ: ಶಾಸಕ ಜ್ಯೋತಿ ಗಣೇಶ್

| Published : Jan 18 2025, 12:48 AM IST

ಸಾರಾಂಶ

ಕನ್ನಡ ಭಾಷೆ ಮತ್ತು ಸಂಸ್ಕೃತಿ ಪರವಾದ ಹೆಚ್ಚಿನ ಕಾರ್ಯಾಕ್ರಮಗಳನ್ನು ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ ಗೆ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದು ತುಮಕೂರು ನಗರದ ಶಾಸಕ ಜೆ.ಬಿ. ಜ್ಯೋತಿಗಣೇಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಕನ್ನಡ ಭಾಷೆ ಮತ್ತು ಸಂಸ್ಕೃತಿ ಪರವಾದ ಹೆಚ್ಚಿನ ಕಾರ್ಯಾಕ್ರಮಗಳನ್ನು ಆಯೋಜಿಸಲು ಕನ್ನಡ ಸಾಹಿತ್ಯ ಪರಿಷತ್ ಗೆ ಶಾಸಕರ ನಿಧಿಯಿಂದ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದು ತುಮಕೂರು ನಗರದ ಶಾಸಕ ಜೆ.ಬಿ. ಜ್ಯೋತಿಗಣೇಶ್ ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ದತ್ತಿಪ್ರಶಸ್ತಿ ಪ್ರದಾನ ಮತ್ತು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದುಡಿದ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದರು.ಸಾವಿರದ ಐದುನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಸಾಹಿತ್ಯಕ್ಕೆ ಪಂಪ, ರನ್ನರಂತಹ ಕವಿಗಳ ಜೊತೆಗೆ ಹನ್ನೆರಡನೇ ಶತಮಾನದ ಶರಣರು ಸಂತರು ದಾಸರು ಅದ್ಭುತವಾದ ಅಡಿಪಾಯ ಹಾಕಿದ್ದಾರೆ. ಆದರೆ ಇಂದು ಇಂಗ್ಲೀಷ್ ಭಾಷೆಯ ವ್ಯಾಮೋಹದಿಂದಾಗಿ ಕನ್ನಡ ಭಾಷೆಗೆ ಸ್ವಲ್ಪಮಟ್ಟಿಗೆ ಹಿನ್ನೆಡೆ ಆಗಿದ್ದರೂ ಕನ್ನಡ ಸಾಹಿತ್ಯ ರಚನೆ ಮಾಡುವವರ ಸಂಖ್ಯೆ ಹೆಚ್ಚಾಗಿರುವುದು ಹೆಮ್ಮೆಯ ವಿಷಯ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ ಹದಿನಾರನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು 30 ಲಕ್ಷ ರು.ಗಳು ಖರ್ಚಾಗಿದ್ದು ಅದರಲ್ಲಿ ವಸ್ತುರೂಪದಲ್ಲಿ ಹದಿನೈದು ಲಕ್ಷವನ್ನು ದಾನಿಗಳು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಗೆ ಈ ಜಿಲ್ಲೆಯ ಎಲ್ಲ ಮುಖಂಡರ ಮತ್ತು ಕನ್ನಡಿಗರೆಲ್ಲರ ಸಹಕಾರದಿಂದ ಜಿಲ್ಲೆಗೆ ಮತ್ತೊಮ್ಮೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ರಾಜ್ಯ ಕಾರ್ಯಿಕಾರಿ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ಲಕ್ಷ್ಮಣದಾಸ್ ಮಾತನಾಡಿ ಇಂದು ಜನರಲ್ಲಿನ ಇಂಗ್ಲೀಷ್ ವ್ಯಾಮೋಹದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನೆದುರಿಸುತ್ತಿದೆ. ಜನರು ತಮ್ಮ ಭಾಷೆಯ ಬಗ್ಗೆ ಕೀಳರಿಮೆ ಮನೋಭಾವವನ್ನು ಬಿಡಬೇಕು. ಅಭಿಮಾನವನ್ನು ಬೆಳೆಸಿಕೊಂಡು ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಪ್ರಯತ್ನಿಸಬೇಕು ಎಂದರು.

ಆಶಯ ನುಡಿಗಳನ್ನಾಡಿದ ಕಾರ್ಯದರ್ಶಿ ಡಾ. ಡಿ.ಎನ್. ಯೋಗೀಶ್ವರಪ್ಪ ಮಾತನಾಡಿ, ಈ ಜಿಲ್ಲೆಯಲ್ಲಿ ದಾನಿಗಳಿಂದ 35 ದತ್ತಿಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ತನ್ನ ಹೆಸರಿನಲ್ಲಿ ದತ್ತಿ ಸ್ಥಾಪಿಸಿರುವುದು ಒಂದು ವಿಶೇಷವಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಒಟ್ಟು 35 ದತ್ತಿ ಉಪನ್ಯಾಸಗಳ ಜೊತೆಗೆ ಪ್ರತಿ ವರ್ಷ ಹತ್ತು ದತ್ತಿ ಪ್ರಶಸ್ತಿಗಳನ್ನು ಈ ಜಿಲ್ಲೆಯ ಸಾಧಕ ಸಾಹಿತಿಗಳಿಗೆ ನೀಡುತ್ತಿದೆ ಎಂದರು.ಎಸ್.ಆರ್. ದೇವಪ್ರಕಾಶ್ ಮತ್ತು ಭಾಗೀರಥಮ್ಮ ಶಾಂಪೂರ್‌ರವರ ನೆನಪಿನ ದತ್ತಿ ಪ್ರಶಸ್ತಿಯನ್ನು ಮಕ್ಕಳ ಸಾಹಿತ್ಯಕ್ಕೆ ಬ್ಯಾಡನೂರು ನಾಗಭೂಷಣ; ಹಾಸ್ಯ ಸಾಹಿತ್ಯಕ್ಕೆ ತುರುವೇಕೆರೆ ಪ್ರಸಾದ್‌ರವರಿಗೆ ಸಂಶೋಧನಾ ಸಾಹಿತ್ಯ ವಿಭಾಗದಲ್ಲಿ ಡಾ. ಏ.ಓ. ನರಸಿಂಹಮೂರ್ತಿಯವರಿಗೆ ಪ್ರದಾನ ಮಾಡಲಾಯಿತು. ಜಿ.ರಾಜನ್ ಮತ್ತು ರತ್ನಮ್ಮ ನೆನಪಿನ ದತ್ತಿ ಪ್ರಶಸ್ತಿಯನ್ನು ಶ್ರಮಿಕ ವಿಭಾಗದಲ್ಲಿ ಪಿ.ಉಮಾದೇವಿ ಅವರಿಗೆ ಪ್ರದಾನ ಮಾಡಲಾಯಿತು.ವೇದಿಕೆಯಲ್ಲಿ ಶಾಲಾ ಶಿಕ್ಷಣ ಉಪನಿರ್ದೇಶಕರಾದ ಎಚ್.ಕೆ. ಮನಮೋಹನ್, ಬಿಇಒ ಹನುಮಂತರಾಯಪ್ಪ ಆರೋಗ್ಯಾಧಿಕಾರಿ ಡಾ. ದಿನೇಶ್ ಹಾಜರಿದ್ದರು. ಸಂಘಟನಾ ಕಾರ್ಯಮದರ್ಶಿ ಯೋಗಾನಂದ್ ಸ್ವಾಗತಿಸಿದರು. ತೇಜಸ್ವಿ ನಿರೂಪಿಸಿದರು ಉಮಾಮಹೇಶ್ ವಂದಿಸಿದರು.