ಸಾರಾಂಶ
ಮುಂಡಗೋಡ:ಕಾಡು ಹಂದಿ ದಾಳಿಗೆ ೨೦೦ಕ್ಕೂ ಅಧಿಕ ಅಡಕೆ ಗಿಡಗಳು ನಾಶವಾಗಿದ್ದು, ಲಕ್ಷಾಂತರ ರುಪಾಯಿ ಹಾನಿಯಾದ ಘಟನೆ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.ದಿವಾಕರ ಬಸವಂತ ರಾವ್ ಎಂಬವರಿಗೆ ಸೇರಿದ ಅಡಕೆ ತೋಟದಲ್ಲಿ ಬೆಳೆಯಲಾದ ಸುಮಾರು ೪ ವರ್ಷದ ಅಡಕೆ ಗಿಡಗಳನ್ನು ಮುರಿದು ತುಳಿದು ಹಾನಿ ಮಾಡಿವೆ. ಇದರಿಂದ ಕಂಗೆಟ್ಟು ಹೋಗಿರುವ ರೈತ ದಿವಾಕರ ರಾವ್, ಕಳೆದ ವರ್ಷ ಕೂಡ ಸುಮಾರು ೪೦೦ ಗಿಡಗಳನ್ನು ನಾಶಪಡಿಸಿದ್ದವು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆಯವರು ಆನೆ ಅಗಳ ಹೊಡೆದು ಬೇಲಿ ಹಾಕುವ ಭರವಸೆ ನೀಡಿದ್ದರು. ಆದರೆ ಏನು ಮಾಡಿಲ್ಲ ಎಂದು ಆರೋಪಿಸಿದರು. ಈ ವರ್ಷ ಮತ್ತೆ ೨೦೦ ಗಿಡಗಳು ನಾಶವಾಗಿವೆ. ಇದನ್ನು ಯಾರಿಗೆ ಹೇಳಬೇಕು? ಲಕ್ಷಾಂತರ ರುಪಾಯಿ ಸಾಲ ಮಾಡಿಕೊಂಡು ಬೆಳೆದ ಬೆಳೆ ಪ್ರತಿ ವರ್ಷ ಇದೇ ರೀತಿ ನಾಶವಾಗುತ್ತ ಹೋದರೆ ಸಂಬಂಧಪಟ್ಟ ಇಲಾಖೆ ಕಚೇರಿಯ ಎದುರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ರೈತ ದಿವಾಕರ ರಾವ್ ಅಳಲು ತೋಡಿಕೊಂಡರು.ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಆನೆ ಕಾಲುವೆ ಹೊಡೆದು, ಬೇಲಿ ನಿರ್ಮಾಣ ಮಾಡಿ, ರೈತರ ಬೆಳೆಗೆ ರಕ್ಷಣೆ ಒದಗಿಸುವ ಕ್ರಮ ಕೈಗೊಳ್ಳಬೇಕು. ಅಲ್ಲದೆ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಮುಖಂಡ ರಾಜು ಗುಬ್ಬಕ್ಕನವರ ಆಗ್ರಹಿಸಿದ್ದಾರೆ.