ಮೊದಲ ದಿನ 22 ಕ್ವಿಂಟಲ್‌ಗೂ ಅಧಿಕ ಮೆಣಸಿನಕಾಯಿ ಮಾರಾಟ

| Published : Feb 03 2024, 01:52 AM IST

ಸಾರಾಂಶ

ಇಲ್ಲಿನ ಮೂರುಸಾವಿರ ಮಠದ ಹೈಸ್ಕೂಲ್‌ ಮೈದಾನದಲ್ಲಿ 12ನೇ ಒಣಮೆಣಸಿನಕಾಯಿ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಚಾಲನೆ ನೀಡಿದರು.

ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಹೈಸ್ಕೂಲ್‌ ಮೈದಾನದಲ್ಲಿ 12ನೇ ಒಣಮೆಣಸಿನಕಾಯಿ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಚಾಲನೆ ನೀಡಿದರು. 3 ದಿನ ನಡೆಯಲಿರುವ ಮೇಳದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿರುವ ರೈತರು ಪಾಲ್ಗೊಂಡಿದ್ದಾರೆ.

ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ಲಾಡ್‌, ಮೇಳದಿಂದ ಜನರು ಹಾಗೂ ರೈತರ ನಡುವೆ ನೇರ ಸಂಪರ್ಕ ಸಾಧಿಸಿದಂತಾಗುತ್ತದೆ. ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಬಹುದಾಗಿದೆ. ಮೇಳ ಆಯೋಜನೆ ಮಾಡಿರುವುದು ಖುಷಿ ನೀಡಿದೆ ಎಂದರು.

ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ 140ಕ್ಕೂ ಹೆಚ್ಚು ರೈತರು ಮೇಳದಲ್ಲಿ ಪಾಲ್ಗೊಳ್ಳುವುದಾಗಿ ಹೆಸರು ನೋಂದಾಯಿಸಿದ್ದಾರೆ. ಮೊದಲ ದಿನವಾದ ಶುಕ್ರವಾರ 93 ಜನ ರೈತರು ಭಾಗವಹಿಸಿದ್ದರು. ಸುಮಾರು 22 ಕ್ವಿಂಟಲ್‌ಗೂ ಅಧಿಕ ಮಾರಾಟವಾಗಿದೆ ಎಂದು ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್‌. ಗಿರೀಶ ತಿಳಿಸಿದರು.

ಶನಿವಾರ ಹಾಗೂ ಭಾನುವಾರ ಇನ್ನೂ ಹೆಚ್ಚಿನ ರೈತರು ಭಾಗವಹಿಸುವ ನಿರೀಕ್ಷೆಯಿದೆ. ಬ್ಯಾಡಗಿ ಕಡ್ಡಿ, ಡಬ್ಬಿ, ಗುಂಟೂರು ಸೇರಿದಂತೆ ವಿವಿಧ ಬಗೆಯ ಮೆಣಸಿನಕಾಯಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ.

ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ತೋಟಗಾರಿಕೆ ಇಲಾಖೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಅಮರ ಶಿವ ರೈತ ಉತ್ಪಾದಕ ಸಂಸ್ಥೆ ಸಂಶಿ ಹಾಗೂ ಉಳುವಾಯೋಗಿ ರೈತ ಉತ್ಪಾದಕ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮೇಳ ಆಯೋಜಿಸಲಾಗಿದೆ.

ಮೇಳದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ, ಸಾಂಬಾರು ಪದಾರ್ಥಗಳ ಅಭಿವೃದ್ದಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್. ಗಿರೀಶ, ಪ್ರಧಾನ ವ್ಯವಸ್ಥಾಪಕ ಸಿದ್ದರಾಮಯ್ಯ ಮು. ಬರಗಿಮಠ, ತೋಟಗಾರಿಕೆ ಇಲಾಖೆಯ ಅಧಿಕಾರಿ ಯೋಗೇಶ ಕಿಲಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.