ಸಾರಾಂಶ
ಹೊಸಪೇಟೆ: ವಿಜಯನಗರ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಹರಪನಹಳ್ಳಿ ತಾಲೂಕಿನಲ್ಲಿ ಓರ್ವ ವ್ಯಕ್ತಿ ಮೃತಪಟ್ಟರೆ, ಹೊಸಪೇಟೆ ಹೋಬಳಿ ಹಾಗೂ ಕಮಲಾಪುರ ಹೋಬಳಿ ಮಾಗಣಿ ಪ್ರದೇಶದಲ್ಲಿ ಅಂದಾಜು 230ಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಬಾಳೆ ಹಾಗೂ ಭತ್ತ ನೆಲಕಚ್ಚಿದ್ದು, ಲಕ್ಷಾಂತರ ರು. ಹಾನಿಯಾಗಿದೆ. ಭಾರಿ ಸಿಡಿಲು, ಗಾಳಿ-ಮಳೆಯೊಂದಿಗೆ ಸುರಿದ ಆಲಿಕಲ್ಲು ಮಳೆಗೆ ಜನಜೀವನ ತತ್ತರಿಸಿದೆ.
ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಹೋಬಳಿಯ ಅಡವಿ ಮಲ್ಲಾಪುರ ಗ್ರಾಮದ ನಿವಾಸಿ ಚೌಡಪ್ಪ ಅಲಿಯಾಸ್ ಮಲ್ಲಪ್ಪ (31) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹೊಸಪೇಟೆ ಹೋಬಳಿಯ ಹೊಸೂರು 126 ಎಕರೆ, ಚಿತ್ತವಾಡ್ಗಿ 34.33 ಎಕರೆ, ನರಸಾಪುರ 20.15 ಎಕರೆ, ಕಳ್ಳಿರಾಂಪುರ 8.96 ಎಕರೆ, ಬೆಳಗೋಡು 7 ಎಕರೆ, 88 ಮುದ್ಲಾಪುರ 2.70 ಎಕರೆ, ನಾಗೇನಹಳ್ಳಿ 1.64 ಎಕರೆ ಸೇರಿದಂತೆ ಎರೆಬೈಲು, ನೀಲಮ್ಮನ ಗುಡಿ, ಇಪ್ಪಿತೇರಿ ಮಾಗಾಣಿ, ಕರೆಕಲ್ಲು ಮಾಗಾಣಿ, ಜಗೀರ್‌ದಾರ್ ಬಂಡೆ ಇತರೆ ಮಾಗಾಣಿ ಪ್ರದೇಶದಲ್ಲಿ ಹಾನಿಯಾಗಿದೆ. ಜಿಲ್ಲೆಯಲ್ಲಿ 230ಕ್ಕೂ ಅಧಿಕ ಎಕರೆಯ ಬಾಳೆ, ಭತ್ತ ಹಾನಿಯಾಗಿದೆ.200ಕ್ಕೂ ಹೆಚ್ಚು ರೈತರ ಗದ್ದೆಗೆ ಹಾನಿ:
ಜಿ.ಕೆ.ಹನುಮಂತಪ್ಪ 7 ಎಕರೆ, ರಾಂಪುರ ಮೂರ್ತಿ-1.5 ಎಕರೆ, ನಿಶ್ಯಾನಿ ತಾಯಪ್ಪ 2, ನಿಶ್ಯಾನಿ ಕಣಿಮೆಪ್ಪ 2, ಮಹರಾಜ ತಾಯಪ್ಪ 6, ಬೆಳಗೋಡ್ ಪರಮೇಶ್ವರಪ್ಪ 1 ಎಕರೆ, ವಿರೂಪಾಕ್ಷಪ್ಪ 3ಎಕರೆ, ಬೆಳಗೋಡ್ ಮಂಜುನಾಥ್ 3 ಎಕರೆ, ಮಗಿ ಮಾವೀನಹಳ್ಳಿ ಕಲ್ಲಮ್ಮ 2 ಎಕರೆ, ಮಹಾರಾಜ ಲಕ್ಷ್ಮೀ ಒಂದು ಎಕರೆ, ಬಾಣದ ಜಂಬಣ್ಣ, ಬೆಳಗೋಡ್ ತಿಮ್ಮಪ್ಪ 2ಎಕರೆ, ಗುಡುಗಂಟಿ ಮರಿಕಣಿಮೆಪ್ಪ 7 ಎಕರೆ, ಪಂಪಣ್ಣ 1 ಎಕರೆ, ಅಂಜಿನಪ್ಪ 4 ಎಕರೆ, ಜಿ.ಅಶೋಕ್ 3ಎಕರೆ, ಡೊಮ್ಮಿ ಹನುಮಂತಪ್ಪ 1 ಎಕರೆ, ಮಹಮ್ಮದ್ ಗೌಸ್ 4ಎಕರೆ, ಗಂಗಮ್ಮ 75 ಸೆಂಟ್ಸ್, ತಳವಾರ್ ಹುಲಗಪ್ಪ 2 ಎಕರೆ, ಕಲ್ಗುಡಿ ಮಂಜುನಾಥ, ರಾಮಪ್ಪ 3 ಎಕರೆ, ಮಹಾರಾಜ ಈರಣ್ಣ 3 ಎಕರೆ ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ರೈತರಿಗೆ ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿದೆ.ಮನೆ ಹಾನಿ:
ಹೊಸೂರು ಗ್ರಾಮದ ಎರಬಯಲು ಮಾಗಾಣಿ ಪ್ರದೇಶದ ಸುತ್ತಮುತ್ತ ೮ ಕಚ್ಚಾ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ನಗರದ ಎಂ.ಜೆ. ನಗರ 3ನೇ ಕ್ರಾಸ್‌ನಲ್ಲಿರುವ ಬಿಜೆಪಿ ಮಂಡಲ ಉಪಾಧ್ಯಕ್ಷ ಕೆ.ಮಧುಸೂದನ್ ಅವರ ಮನೆಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.ಸ್ಥಳೀಯ ಐಎಸ್‌ಆರ್ ಸಕ್ಕರೆ ಕಾರ್ಖಾನೆ ನೆಚ್ಚಿಕೊಂಡು ಕಬ್ಬನ್ನು ಮುಖ್ಯ ಬೆಳೆಯನ್ನಾಗಿ ಬೆಳೆಯುತ್ತಿದ್ದ ಈ ಭಾಗದ ಅನೇಕ ರೈತರು ಐಎಸ್‌ಆರ್ ಕಾರ್ಖಾನೆ ಬಾಗಿಲು ಮುಚ್ಚಿದ ಬಳಿಕ ಬಾಳೆ ಬೆಳೆಯಲು ಮುಂದಾಗಿದ್ದರು. ಈ ಬಾರಿ ಭೀಕರ ಬರಗಾಲಕ್ಕೆ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ತಳ ಸೇರಿದೆ. ಈ ನಡುವೆಯೂ ಪುರಾತನ ವಿಜಯನಗರ ಕಾಲುವೆಗಳ ಜರಿ ನೀರಿನಲ್ಲಿ ಸುಗಂಧಿ, ಏಲಕ್ಕಿ, ಸಕ್ಕರೆ ಬಾಳೆ ಬೆಳೆದಿದ್ದರು. ಇನ್ನೊಂದು ತಿಂಗಳಲ್ಲಿ ಬಾಳೆ ಕಟಾವು ಮಾಡಿ, ಫಸಲಿಗೆ ಕಾದು ಕುಳಿತಿದ್ದ ರೈತರಿಗೆ ಕೈ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಕಮಲಾಪುರ, ವೆಂಕಟಾಪುರ ಹಾಗೂ ಬುಕ್ಕಸಾಗರ ಗ್ರಾಮದಲ್ಲಿ 200ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆ ಹಾನಿಯಾಗಿತ್ತು.ವಿದ್ಯುತ್ ಕಂಬ ಧರಾಶಾಹಿ:
ಭಾರೀ ಗಾಳಿ-ಮಳೆಗೆ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿವೆ. ನಗರದ ನೂರು ಹಾಸಿಗೆ ಆಸ್ಪತ್ರೆ ಬಳಿ 3, ಚಪ್ಪರದಹಳ್ಳಿ 2, ಚಿತ್ತವಾಡ್ಗಿ 2, ಸಂಕ್ಲಾಪುರ 1, ವಿನಾಯಕ ನಗರ 1, ಎಂ.ಜೆ.ನಗರ 1, ನಾಗಪ್ಪನ ಕಟ್ಟೆ ಬಳಿ (33 ಕೆವಿ) ಘಟಕ ಸೇರಿದಂತೆ ಇತರೆ ಕಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಈ ಹಿನ್ನೆಲೆಯಲ್ಲಿ ತಡರಾತ್ರಿಯಿಂದ ನಗರದ ವಿವಿಧೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಸಾರ್ವಜನಿಕರು ಭಾನುವಾರ ಮಧ್ಯಾಹ್ನದವರೆಗೆ ಪರದಾಡಿದರು.ಶಾಸಕರ ಭೇಟಿ, ಪರಿಶೀಲನೆ:
ಮಳೆಯಿಂದ ಹಾನಿಗೊಳಗಾದ ರೈತರ ಜಮೀನುಗಳಿಗೆ ಶಾಸಕ ಎಚ್.ಆರ್. ಗವಿಯಪ್ಪ ಭೇಟಿ ನೀಡಿ, ಹಾನಿಗೊಳಗಾದ ಬಾಳೆ ಬೆಳೆ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಶನಿವಾರ ಸುರಿದ ಗಾಳಿ-ಮಳೆಗೆ ನೂರಾರು ಎಕರೆ ಪ್ರದೇಶದಲ್ಲಿ ಬಾಳೆ ನೆಲಕಚ್ಚಿದೆ. ರೈತರಿಗೆ ಲಕ್ಷಾಂತರ ರುಪಾಯಿ ಹಾನಿ ಸಂಭವಿಸಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು, ರೈತರಿಗೆ ಶೀಘ್ರ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.