ಭಟ್ಕಳ ತಾಲೂಕಿನ ಬೆಳಕೆ ಗ್ರಾಪಂ ವ್ಯಾಪ್ತಿಯ ಭಂಟಗೊಂಡ ಮಹಾಸತಿ ದೇವಸ್ಥಾನದ ಆವರಣದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾದ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.

ಭಟ್ಕಳ: ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾದ ಅಂಗವಾಗಿ ಕಾರವಾರದಲ್ಲಿ ನಡೆಯಲಿರುವ ಬೃಹತ್ ಅರಣ್ಯವಾಸಿಗಳ ಸಮಾವೇಶದಲ್ಲಿ ಜಿಲ್ಲಾಧಿಕಾರಿಗೆ ಅರಣ್ಯವಾಸಿಗಳಿಂದ ಮೂವತ್ತು ಸಾವಿರಕ್ಕೂ ಮಿಕ್ಕಿ ಆಕ್ಷೇಪಣಾ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ತಾಲೂಕಿನ ಬೆಳಕೆ ಗ್ರಾಪಂ ವ್ಯಾಪ್ತಿಯ ಭಂಟಗೊಂಡ ಮಹಾಸತಿ ದೇವಸ್ಥಾನದ ಆವರಣದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾದ ಕಾನೂನು ಅರಿವು ಕಾರ್ಯಕ್ರಮ ಬಗ್ಗೆ ಅವರು ಇತ್ತೀಚೆಗೆ ಮಾಹಿತಿ ನೀಡಿದರು. ಅರಣ್ಯ ಹಕ್ಕು ಕಾಯಿದೆ ಅನುಷ್ಠಾನದ ವೈಫಲ್ಯದಿಂದ ನೈಜ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ. ಅರಣ್ಯವಾಸಿಗಳಿಗೆ ಕಾನೂನು ಜ್ಞಾನ ವೃದ್ಧಿಸುವ ಉದ್ದೇಶದಿಂದ ಕಾನೂನು ಜಾಗೃತಿ ಅಭಿಯಾನ ಸಂಘಟಿಸಲಾಗಿದೆ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ನಿರ್ದೇಶನ ನಿರ್ಲಕ್ಷಿಸಿ ಅರಣ್ಯ ಹಕ್ಕು ಸಮಿತಿಯು ಅರಣ್ಯವಾಸಿಗಳ ಅರ್ಜಿ ತಿರಸ್ಕರಿಸುತ್ತಿರುವುದು ವಿಷಾದಕರ ಹಾಗೂ ಅರಣ್ಯ ಹಕ್ಕು ಕಾಯಿದೆಯ ಅರ್ಜಿ ಪುನರ್ ಪರಿಶೀಲಿಸುವ ಪೂರ್ವದಲ್ಲಿ ಅರಣ್ಯ ಇಲಾಖೆಯು ಅರಣ್ಯವಾಸಿಗಳ ಅರ್ಜಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ಪ್ರಾರಂಭಿಸಿರುವುದು ಖಂಡನಾರ್ಹ ಎಂದು ಅವರು ಹೇಳಿದರು. ಕಾನೂನಿಗೆ ವ್ಯತಿರಿಕ್ತವಾಗಿ ಮೂರು ತಲೆಮಾರಿನ ದಾಖಲೆ ಭೂಮಿ ಹಕ್ಕು ಸಮಿತಿಗಳೂ ಆಪೇಕ್ಷಿಸುವುದು ಕಾನೂನುಬಾಹಿರ ಮತ್ತು ಅವೈಜ್ಞಾನಿಕ ಕ್ರಮ. ಮೂರು ತಲೆಮಾರಿನ ದಾಖಲೆ ಷರತ್ತು ಕೈ ಬಿಟ್ಟು ಪೂರಕವಾದ ಕಾನೂನಿನ ಅಂಶಗಳಂತೆ ಸಾಂದರ್ಭಿಕ ದಾಖಲೆ ಅಡಿಯಲ್ಲಿ ಅರಣ್ಯ ಭೂಮಿ ಹಕ್ಕು ನೀಡುವಂತೆ ಆಗ್ರಹಿಸಿ ಡಿ. ೬ರಂದು ಕಾರವಾರದಲ್ಲಿ ನಡೆಯುವ ಮಹಾ ಸಮ್ಮೇಳನದಲ್ಲಿ ಒತ್ತಾಯಿಸಲಾಗುವುದು ಎಂದರು.

ತಾಲೂಕಿನ ಯಲ್ವಡಿಕವೂರು, ಮುಟ್ಟಳ್ಳಿ, ಕೋಣಾರ, ಹಾಡುವಳ್ಳಿ ಮತ್ತು ಮಾರುಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಜಾಗೃತಿ ಜಾಥಾ ಜರುಗಿದವು.

ಸಂಚಾಲಕರಾದ ಪಾಂಡು ನಾಯ್ಕ ಬೆಳಕೆ ಮಾತನಾಡಿದರು. ಇನ್ನೋರ್ವ ಸಂಚಾಲಕ ದೇವರಾಜ ಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರ ನಾಯ್ಕ, ರಾಮ ನಾಯ್ಕ ಶಿರಜ್ಜಿಮನೆ, ಶಂಕರ ನಾಯ್ಕ ಭಟ್ಕಳ, ಗಿರಿಜಾ ಮೊಗೇರ ಬೆಳಕೆ, ವಿಮಲಾ ಮೊಗೇರ, ನಾಗಮ್ಮ ಮೊಗೇರ, ನಾರಾಯಣ ಗೊರಟೆ, ಲಕ್ಷ್ಮೀ ಶಿರಜ್ಜಿಮನೆ, ನಾರಾಯಣ ಶನಿಯಾರ, ಕುಪ್ಪಯ್ಯ ನಾಯ್ಕ, ಮಂಜಪ್ಪ ಮುಡಗಾರಮನೆ, ವೆಂಕಟ, ಸುಬ್ರಾಯ ಕಟಗೇರಿ, ಜೋಗಿ ಶಿರಜ್ಜಿಮನೆ, ಚಂದ್ರು ಸೊಮಪ್ಪ ನಾಯ್ಕ, ರತ್ನಾ ನಾಯ್ಕ ಉಪಸ್ಥಿತರಿದ್ದರು.