ಹುಲಿಗಿ ಗ್ರಾಮದ ರಾಜಬೀದಿಯಲ್ಲಿ ವಾಹನ ಹಾಗೂ ಅತಿಕ್ರಮಣಕಾರರಿಂದ ಮುಕ್ತಗೊಳಿಸಿ ಅಮ್ಮನ ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನುಕೂಲ ಮಾಡಿ ಕೊಡಲಾಗಿತ್ತು.
ಮುನಿರಾಬಾದ್: ಹೊಸ್ತಿಲ ಹುಣ್ಣಿಮೆ ಹಿನ್ನೆಲೆ ಸುಮಾರು 4 ಲಕ್ಷಕ್ಕೂ ಅಧಿಕ ಭಕ್ತರು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು.
ದೇವಸ್ಥಾನದ ಬಾಗಿಲು ಬೆಳಗ್ಗಿನ ಜಾವ 6 ಗಂಟೆಗೆ ತೆರೆಯುತ್ತಿದ್ದಂತೆ ರಾತ್ರಿಯಿಂದ ಸಾಲುಗಟ್ಟಿ ನಿಂತ ಭಕ್ತಾದಿಗಳು ದೇವಿಯ ದರ್ಶನ ಪಡೆಯಲು ಪ್ರಾರಂಭಿಸಿದರು. ಇದೇ ವೇಳೆ ಕೆಲ ಕಾಲ ತುಂತುರು ಮಳೆ ಆರಂಭವಾಗಿದ್ದು, ಇದು ಶುಭ ಸಂಕೇತ ಎಂದು ಭಕ್ತರೊಬ್ಬರು ತಿಳಿಸಿದ್ದಾರೆ.ಬೆಳಗ್ಗೆ 8 ಗಂಟೆಗೆ 50 ಸಾವಿರ, 10 ಗಂಟೆಗೆ ಒಂದು ಲಕ್ಷ ಭಕ್ತರು ದೇವಿ ದರ್ಶನ ಪಡೆದರು. ಮಧ್ಯಾಹ್ನ 12 ಗಂಟೆಗೆ 2 ಲಕ್ಷಕ್ಕೂ ಅಧಿಕ, ಮೂರು ಗಂಟೆಗೆ 3 ಲಕ್ಷ ಭಕ್ತರು ಅಮ್ಮನವರ ದರ್ಶನ ಭಾಗ್ಯ ಪಡೆದರು. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕಗೊಳ್ಳುತ್ತಿದ್ದು, ಸಂಜೆ 5 ಗಂಟೆಯ ವೇಳೆಗೆ 4ಲಕ್ಷಕ್ಕೂ ಅಧಿಕ ಜನ ಭಕ್ತರು ಅಮ್ಮನವರ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ್ ರಾವ್ ತಿಳಿಸಿದ್ದಾರೆ.
ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆ ಹಾಗೂ ಹೊಸ್ತಿಲ ಹುಣ್ಣಿಮೆ ಏಕಕಾಲಕ್ಕೆ ಬಂದ ಹಿನ್ನೆಲೆ ಎರಡು ಕಡೆ ಲಕ್ಷಾಂತರ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇತ್ತು. ಪೊಲೀಸ್ ಇಲಾಖೆಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು. ಹುಲಿಗಿ ಗ್ರಾಮದ ರಾಜಬೀದಿಯಲ್ಲಿ ವಾಹನ ಹಾಗೂ ಅತಿಕ್ರಮಣಕಾರರಿಂದ ಮುಕ್ತಗೊಳಿಸಿ ಅಮ್ಮನ ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನುಕೂಲ ಮಾಡಿ ಕೊಡಲಾಗಿತ್ತು.ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಗಂಗಾವತಿ, ಕೊಪ್ಪಳ ಹಾಗೂ ಹೊಸಪೇಟೆ ಘಟಕದಿಂದ ಹೊಸ್ತಿಲ ಹುಣ್ಣಿಮೆ ಪ್ರಯುಕ್ತ ಹುಲಿಗಿ ಗ್ರಾಮಕ್ಕೆ ಹೋಗುವ ಭಕ್ತರಿಗಾಗಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಯಿತು.
ದೇವಸ್ಥಾನದಿಂದ ಸುಮಾರು 40 ಸಾವಿರ ಜನ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಯಿತು.