ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್) ಕೃಷಿ ಮತ್ತು ತೋಟಗಾರಿಕಾ ಸಂಸ್ಕರಣೆಯಲ್ಲಿ ನಾವೀನ್ಯತೆ, ಸಂಶೋಧನೆಯ ಶಕ್ತಿ ಪ್ರದರ್ಶನಕ್ಕೆಂದು 16 ಮಳಿಗೆಗಳಲ್ಲಿ ವಿವಿಧ ಸಂಸ್ಥೆಗಳು ಆವಿಷ್ಕರಿಸಿದ ಮೌಲ್ಯವರ್ಧನೆಯ ತಂತ್ರಜ್ಞಾನಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿತ್ತು.
ಕನ್ನಡಪ್ರಭ ವಾರ್ತೆ ಬೆಂಗಳೂರುಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್) ಕೃಷಿ ಮತ್ತು ತೋಟಗಾರಿಕಾ ಸಂಸ್ಕರಣೆಯಲ್ಲಿ ನಾವೀನ್ಯತೆ, ಸಂಶೋಧನೆಯ ಶಕ್ತಿ ಪ್ರದರ್ಶನಕ್ಕೆಂದು 16 ಮಳಿಗೆಗಳಲ್ಲಿ ವಿವಿಧ ಸಂಸ್ಥೆಗಳು ಆವಿಷ್ಕರಿಸಿದ ಮೌಲ್ಯವರ್ಧನೆಯ ತಂತ್ರಜ್ಞಾನಗಳನ್ನು ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿತ್ತು. ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ, ಹೈದ್ರಾಬಾದ್‌ನ ಐಐಎಂಆರ್, ತಂಜಾವೂರಿನ ಎನ್‌ಐಎಫ್‌ಟಿಇಎಂ, ಬೆಂಗಳೂರಿನ ಭಾರತೀಯ ತೋಟಗಾರಿಕೆ ಮತ್ತು ಸಂಶೋಧನಾ ಸಂಸ್ಥೆ (ಐಐಎಚ್‌ಆರ್), ಧಾರವಾಡ ಕೃಷಿ ವಿವಿ, ಮೈಸೂರಿನ ಸಿಎಫ್‌ಟಿಆರ್‌ಐ, ಬೆಂಗಳೂರು ಕೃಷಿ ವಿವಿ ಮತ್ತು ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯಗಳು ಆವಿಷ್ಕರಿಸಿದ ಮೌಲ್ಯವರ್ಧನೆಯ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಾಗಿದೆ ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು. ನವೋದ್ಯಮಿಗಳ ಉತ್ಪನ್ನ ಮಾರಾಟ:40 ರೈತ ಉತ್ಪಾದಕ ಸಹಕಾರ ಗುಂಪುಗಳಿಗೆ ಪ್ರತ್ಯೇಕವಾಗಿ 40 ಮಳಿಗೆಗಳನ್ನು ನೀಡಲಾಗಿತ್ತು. ರೈತ ಉತ್ಪಾದಕ ಸಹಕಾರ ಗುಂಪುಗಳು, ನವೋದ್ಯಮಿಗಳು ತಯಾರಿಸಿದ ವಿವಿಧ ಆಹಾರ ಉತ್ಪನ್ನಗಳು ಕೆಪೆಕ್‌ನ 40ಕ್ಕೂ ಹೆಚ್ಚು ಮಳಿಗೆಯಲ್ಲಿ ಪ್ರದರ್ಶನ ಹಾಗೂ ಮಾರಾಟಗೊಂಡವು. ವಿಶೇಷವಾಗಿ ಸಾವಯವ ಸಿರಿಧಾನ್ಯಗಳು, ಮಾವು, ನೇರಳೆ ಮೊದಲಾದ ಹಣ್ಣುಗಳಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳು, ತೆಂಗಿನ ಸಿಪ್ಪೆಯಿಂದ ತಯಾರಿಸಿದ ಮ್ಯಾಟ್, ಚಿಪ್ಪಿನಿಂದ ತಯಾರಾದ ಗೃಹಪಯೋಗಿ ಅಲಂಕಾರಿಕ ವಸ್ತುಗಳು, ಕೈಮಗ್ಗದಿಂದ ತಯಾರಿಸಿದ ಆಕರ್ಷಕ ಉಡುಪುಗಳು ಗ್ರಾಹಕರನ್ನು ಆಕರ್ಷಿಸಿದವು.ವಾಣಿಜ್ಯ ಮೇಳಕ್ಕೆ ಭಾರೀ ಜನ
ಸಂಸ್ಕರಿತ ಹಾಗೂ ಮೌಲ್ಯವರ್ಧಿತ ಪರಿಕಲ್ಪನೆಯೊಂದಿಗೆ ರಾಜ್ಯದ ರೈತರನ್ನು ಉದ್ಯಮಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅರಮನೆ ಮೈದಾನದಲ್ಲಿ ಕೃಷಿ ಇಲಾಖೆ ಆಯೋಜಿಸಿರುವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಮೊದಲ ದಿನವೇ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.ರೈತರು ಉತ್ಪಾದಕರು ಮಾತ್ರವಲ್ಲ ಉದ್ಯಮಿಗಳು, ನವೋತ್ಸಾಹಿಗಳು ಮತ್ತು ಗ್ರಾಮೀಣ ಸಮೃದ್ದಿಯ ನಿರ್ಮಾಪಕರು ಎಂಬುದಕ್ಕೆ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಸಾಕ್ಷಿಯಾಯಿತು. ಮೇಳದಲ್ಲಿ ಸುಮಾರು 300ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಉಪಕರಣಗಳು, ಸಾವಯವ ಸಿರಿಧಾನ್ಯ, ಸೇರಿದಂತೆ ಸಂಸ್ಕರಿತ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.
ರೈತ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ತಯಾರಿಸಿ ಬ್ರ್ಯಾಂಡಿಂಗ್ ಒಳಗೊಂಡ ಮೌಲ್ಯವರ್ಧಿತ ಸಾವಯವ ಆಹಾರ ಉತ್ಪನ್ನಗಳು, ಸುಧಾರಿತ ಯಂತ್ರೋಪಕರಣ, ದೇಸಿ ಆಹಾರ ತಳಿಗಳು, ಕೈಮಗ್ಗದ ಉಡುಪು ಮತ್ತಿತರ ಸಾವಯವ ಉತ್ಪನ್ನಗಳು ರೈತರು, ಕೃಷಿಕರನ್ನು ಆಕರ್ಷಿಸುತ್ತಿದ್ದವು.ಜೋಯಿಡಾ ಸಾವಯವ ತಾಲೂಕು: ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಜೋಯಿಡಾ ತಾಲೂಕಿನ ಕೃಷಿ ಮಾದರಿ ಮೇಳದ ಮತ್ತೊಂದು ವಿಶೇಷ. ಸಾವಯವ ಪ್ರಮಾಣೀಕರಣ ವ್ಯವಸ್ಥೆಯಡಿ ಜೋಯಿಡಾದಲ್ಲಿ ರೈತರು ಈಗಾಗಲೇ ಭತ್ತ ಬೆಳೆಯುತ್ತಿದ್ದು, ಮುಂದಿನ ಮೂರು ವರ್ಷಗಳಲ್ಲಿ ಸಂಪೂರ್ಣ ಸಾವಯವ ತಾಲೂಕಾಗಿ ಪರಿವರ್ತಿಸುವ ಮಾದರಿಯನ್ನು ಕೃಷಿ ಇಲಾಖೆ ಅಧಿಕಾರಿಗಳು ಪ್ರದರ್ಶಿಸಿದರು.
1750ಕ್ಕೂ ಹೆಚ್ಚು ತಳಿಯ ಭತ್ತ:ಮೇಳದಲ್ಲಿ ಸಾಂಪ್ರಾದಾಯಿಕ, ಸ್ಥಳೀಯ ಬೆಳೆಯ ಸಂರಕ್ಷಣೆ ಭಾಗವಾಗಿ ಮಂಡ್ಯ ಮೂಲದ ರೈತರೊಬ್ಬರು ಬೆಳೆದ 1750 ಕ್ಕೂ ವಿವಿಧ ಪ್ರಬೇಧದ ಅಕ್ಕಿ ಪ್ರದರ್ಶನ ರೈತರ ಗಮನ ಸೆಳೆಯಿತು. ರಕ್ತಸಾಲಿ, ಬರ್ಮಾ ಬ್ಲಾಕ್, ಗ್ರೀನ್ ರೈಸ್, ಜಾಸ್ಮಿನ್ ರೆಡ್, ಜೀರಿಗೆ ಸಣ್ಣ, ಮುಂಡುಗ, ಗಂಧಸಾಲೆ, ಬಾಸುಮತಿ ಸೇರಿ 1750 ಕ್ಕೂ ವಿವಿಧ ತಳಿಯ ಅಕ್ಕಿಯನ್ನು ರೈತ ಸೈಯಿದ್ ಘನಿಖಾನ್ ಮೇಳದಲ್ಲಿ ಪ್ರದರ್ಶಿಸಿದರು.