ದಸರಾ ವಸ್ತುಪ್ರದರ್ಶನದಲ್ಲಿ ವೃತ್ತಿಪರ ಕಲಾವಿದರಿಗೆ ಅನ್ಯಾಯ

| Published : Nov 14 2025, 01:00 AM IST

ಸಾರಾಂಶ

ವಸ್ತುಪ್ರದರ್ಶನ ಇನ್ನೇನು ಎರಡು ತಿಂಗಳಲ್ಲಿ ಮುಗಿಯುತ್ತಿದೆ. ಇಲ್ಲಿಯವರೆಗೂ ಒಂದೇ ಒಂದು ಸಾಮಾಜಿಕ ಪೌರಾಣಿಕ ನಾಟಕ, ಜಾನಪದ ನೃತ್ಯ ಹಾಡುಗಾರಿಕೆ, ಸುಗಮ ಸಂಗೀತ, ಭಜನೆ, ರಂಗಗೀತೆಗಳು, ಭರತನಾಟ್ಯ ಸೇರಿದಂತೆ ವೃತ್ತಿಪರ ವಾದ್ಯಗೋಷ್ಠಿ ಪಕ್ಕವಾದ್ಯ ಕಲಾವಿದರಿಗೆ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಅವಕಾಶ ಕೊಟ್ಟಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ದಸರಾ ವಸ್ತುಪ್ರದರ್ಶನದಲ್ಲಿ ವೃತ್ತಿಪರ ಕಲಾವಿದರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ, ಸಂಗೀತ, ಜಾನಪದ, ರಂಗಭೂಮಿ ನಾಟಕ, ಸುಗಮ ಸಂಗೀತ, ನೃತ್ಯರೂಪಕ, ಪಕ್ಕವಾದ್ಯ ವೃತ್ತಿಪರ ಕಲಾವಿದರಿಗೆ ಅವಕಾಶ ಕಲ್ಪಿಸಲು ಆಗ್ರಹಿಸಿ ಶ್ರೀ ಮಲೆ ಮಹದೇಶ್ವರ ಕಲಾ ಬಳಗದವರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ದಸರಾ ವಸ್ತುಪ್ರದರ್ಶನದ ಪಿ‌. ಕಾಳಿಂಗರಾವ್ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರತಿದಿನ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ವರ್ಷ ಕಲಾವಿದರಿಗೆ ಅರ್ಜಿಯನ್ನೇ ಕರೆಯದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರವು, ಗುಣಮಟ್ಟವಿಲ್ಲದ ಕರೋಕೆ ಹಾಡುಗಳಿಗೆ ಮಾತ್ರ ಅವಕಾಶ ಕೊಟ್ಟು ದಸರಾ ಸಾಂಸ್ಕೃತಿಕ ಪ್ರದರ್ಶನ ಆಯೋಜನೆಯ ಪದ್ಧತಿಗೆ ಕಳಂಕ ತಂದಿದೆ ಎಂದು ಅವರು ಆರೋಪಿಸಿದರು.

ಮೈಸೂರಿನಲ್ಲಿ 5 ಸಾವಿರಕ್ಕೂ ಹೆಚ್ಚು ವೃತ್ತಿಪರ ಕಲಾವಿದರು, ಸಾಂಸ್ಕೃತಿಕ ಸಂಗೀತ ಜಾನಪದ ರಂಗಭೂಮಿ ಕಲೆಯ ಪ್ರದರ್ಶನವನ್ನೇ ನಂಬಿಕೊಂಡು ಬದುಕುತ್ತಿದ್ದಾರೆ. ಕಳೆದ ವರ್ಷ ಅತ್ಯುತ್ತಮ ಆಯೋಜನೆಯೊಂದಿಗೆ ಕಳೆಕಟ್ಟಿದ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮಗಳು, ಈ ಬಾರಿ ಯಾರದ್ದೋ ಕಪಿಮುಷ್ಟಿಗೆ ಸಿಲುಕಿ ಕಲಾವಿದರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದರು.

ವಸ್ತುಪ್ರದರ್ಶನ ಇನ್ನೇನು ಎರಡು ತಿಂಗಳಲ್ಲಿ ಮುಗಿಯುತ್ತಿದೆ. ಇಲ್ಲಿಯವರೆಗೂ ಒಂದೇ ಒಂದು ಸಾಮಾಜಿಕ ಪೌರಾಣಿಕ ನಾಟಕ, ಜಾನಪದ ನೃತ್ಯ ಹಾಡುಗಾರಿಕೆ, ಸುಗಮ ಸಂಗೀತ, ಭಜನೆ, ರಂಗಗೀತೆಗಳು, ಭರತನಾಟ್ಯ ಸೇರಿದಂತೆ ವೃತ್ತಿಪರ ವಾದ್ಯಗೋಷ್ಠಿ ಪಕ್ಕವಾದ್ಯ ಕಲಾವಿದರಿಗೆ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಅವಕಾಶ ಕೊಟ್ಟಿಲ್ಲ ಎಂದು ಅವರು ಆರೋಪಿಸಿದರು.

ಈ ಕೂಡಲೇ ಹಿಂದಿನ ಪದ್ಧತಿಯಂತೆ ಪ್ರತಿದಿನ ಮೂರು ಕಲಾಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿ, ನಿಗದಿತ ಸಂಭಾವನೆಯೊಂದಿಗೆ ವೇಳಾಪಟ್ಟಿ ಪ್ರಕಟಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನ ನೇಮಿಸಿ ಆಯೋಜಿಸಿ, ಮೈಸೂರಿನ ವೃತ್ತಿಪರ ಕಲಾವಿದರಿಗೆ ನ್ಯಾಯ ಒದಗಿಸಲು ವಸ್ತುಪ್ರದರ್ಶನದ ಅಧಿಕಾರಿಗಳಿಗೆ ಜಿಲ್ಲಾಡಳಿತ ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು.

ಶ್ರೀ ಮಲೆ ಮಹದೇಶ್ವರ ಕಲಾ ಬಳಗದ ಸಂಚಾಲಕರಾದ ಎಚ್.ಪಿ. ದೇವಪ್ಪ, ಡಿ. ಲೋಹಿತ್, ಎಚ್.ಪಿ. ಶ್ರೀಕಂಠಮೂರ್ತಿ, ಶ್ರೀಶೈಲ ಕುಂಬಾರ ಮೊದಲಾದವರು ಇದ್ದರು.