ಬೆಂಗಳೂರಿನ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ಮೈಸೂರಿನಿಂದ 5 ಸಾವಿರಕ್ಕೂ ಹೆಚ್ಚು ವಿಪ್ರರು ಭಾಗಿ

| Published : Jan 18 2025, 12:48 AM IST / Updated: Jan 18 2025, 11:55 AM IST

ಬೆಂಗಳೂರಿನ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ಮೈಸೂರಿನಿಂದ 5 ಸಾವಿರಕ್ಕೂ ಹೆಚ್ಚು ವಿಪ್ರರು ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.18 ಹಾಗೂ 19 ರಂದು ಬ್ರಾಹ್ಮಣ ಮಹಾ ಸಮ್ಮೇಳನ ಜರಗಲಿದ್ದು, ಮೈಸೂರು ಜಿಲ್ಲೆಯಿಂದ ಸುಮಾರು 5 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಮ.ವಿ.ರಾಮಪ್ರಸಾದ್ ಹೇಳಿದರು.

  ಮೈಸೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.18 ಹಾಗೂ 19 ರಂದು ಬ್ರಾಹ್ಮಣ ಮಹಾ ಸಮ್ಮೇಳನ ಜರಗಲಿದ್ದು, ಮೈಸೂರು ಜಿಲ್ಲೆಯಿಂದ ಸುಮಾರು 5 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಮ.ವಿ.ರಾಮಪ್ರಸಾದ್ ಹೇಳಿದರು.

ನಗರದ ಕಾಳಿದಾಸ ರಸ್ತೆಯಲ್ಲಿರುವ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಅರ್ಚಕರು ಹಾಗೂ ಪುರೋಹಿತರಿಗೆ ಸಮಾವೇಶಕ್ಕೆ ಆಹ್ವಾನಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ 25 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಬುದ್ದಿವಂತ, ವಿದ್ಯಾವಂತ ಸಮಾಜ ಎಂದು ಗುರುತಿಸಿಕೊಂಡಿದ್ದರು ಸಾಕಷ್ಟು ಸಂಕಷ್ಟಗಳು ಎದುರಿಸುತ್ತಿದ್ದಾರೆ. ಶಿಕ್ಷಣದಲ್ಲಿ ಉನ್ನತ ವ್ಯಾಸಂಗ ಪಡೆಯಲು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಮತ್ತು ಸಮರ್ಪಕ ಉದ್ಯೋಗ ಸಿಗುತ್ತಿಲ್ಲ, ಹಾಗೂ ಅರ್ಚಕರು, ಅಡುಗೆ ಕೆಲಸ ಮಾಡುವವರ ಸ್ಥಿತಿ ಶೋಚನಿಯವಾಗಿದೆ. ಬ್ರಾಹ್ಮಣರು ಸಂಘಟಿತರಾಗಬೇಕು, ನಮ್ಮ ಹಕ್ಕು ಹೋರಾಟಗಳಿಗೆ ನಾವೆಲ್ಲರು ಒಂದೇ ಎಂದು ಮುಂದೆ ಸಾಗಬೇಕು ಆಗ ಮಾತ್ರ ಬ್ರಾಹ್ಮಣ ಸಮುದಾಯ ಅಭಿವೃದ್ಧಿ ಸಾಧ್ಯ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 50 ವರ್ಷ ತುಂಬಿದ ಶುಭಾ ಸಂದರ್ಭದಲ್ಲಿ ಸುವರ್ಣ ಸಂಭ್ರಮ ಮತ್ತು ಮಹಾಸಮ್ಮೇಳನವನ್ನು ಜ. 18, 19 ರಂದು ಎರಡು ದಿನಗಳ ಮಹಾ ಸಮಾವೇಶವನ್ನು ಅರಮನೆ ಮೈದಾನ ತ್ರಿಪುರವಾಸಿನಿ ಸಭಾಂಗಣದಲ್ಲಿ ಆಯೋಜಿಸಿದ್ದಾರೆ.

ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದವರು ಭಾಗವಹಿಸಿ ಯಶ್ವಸಿಗೊಳಿಸಬೇಕಾಗಿ ವಿನಂತಿ, ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಸಂಘಟಿತರಾಗಿ ಹೋರಾಟ ಮಾಡೋಣ ಎಂದರು.

ಯೋಗ ನರಸಿಂಹ, ನಗರಪಾಲಿಕೆಯ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಮಿರ್ಲೆ ಪನಿಷ್, ಸುಚಿಂದ್ರ, ದೇವಸ್ಥಾನದ ಪ್ರಧಾನ ಅರ್ಚಕರಾದ ವಿಜಯರಾಘವನ್, ರಾಘವ, ಸುಬ್ಬಣ್ಣ, ಸೂರ್ಯನಾರಾಯಣ ಭಟ್, ಕಣ್ಣನ್, ಪ್ರಸನ್ನ, ಆನಂದ್ ಹಾಗೂ ವಿಪ್ರ ಮಹಿಳಾ ಸಂಘಟಕರು ಇದ್ದರು.

ಡಾ.ಬಿ.ಆರ್ ಅಂಬೇಡ್ಕರ್ ಓದು ಕಾರ್ಯಕ್ರಮ: ಕವನ ವಾಚನ ಸ್ಪರ್ಧೆ

 ಮೈಸೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2024- 25ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ನಿಮಿತ್ತ ಡಾ.ಬಿ.ಆರ್. ಅಂಬೇಡ್ಕರ್ ಅವರ ಬದುಕು ಬರಹ ಮತ್ತು ಸಾಧನೆ ಕುರಿತು ಕವನ ವಾಚನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಮೈಸೂರು ಜಿಲ್ಲೆಯ ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜಿನ ವಿದ್ಯಾರ್ಥಿಗಳು ಈ ಕವನ ವಾಚನ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಆಸಕ್ತ ವಿದ್ಯಾರ್ಥಿಗಳು ತಮ್ಮ ಸ್ವ-ವಿವರ ಹಾಗೂ ಕಾಲೇಜಿನ ಗುರುತಿನ ಚೀಟಿಯೊಂದಿಗೆ ಜ.25 ರೊಳಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಕಚೇರಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು.

ಡಾ.ಬಿ.ಆರ್. ಅಂಬೇಡ್ಕರ್‌ ರವರ ಬದುಕು, ಬರಹ ಮತ್ತು ಸಾಧನೆ ವಿಷಯ ಬಿಟ್ಟು ಬೇರೆ ವಿಷಯಾಧಾರಿತ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ, ಕವಿತೆಯು ಕನಿಷ್ಠ 60 ರಿಂದ ಗರಿಷ್ಟ 100 ಪದಗಳು ಹೊಂದಿರಬೇಕು (ಸುಮಾರು 12 ರಿಂದ 20 ಸಾಲುಗಳು). ಕವನವು ಸ್ವರಚಿತವಾಗಿರಬೇಕು ಹಾಗೂ ಕನ್ನಡ ಭಾಷೆಯಲ್ಲಿ ಇರಬೇಕು, ಕವನ ವಾಚನದಲ್ಲಿ ಭಾಗವಹಿಸಲು ಅಪೇಕ್ಷಿಸುವ ಮೈಸೂರು ಜಿಲ್ಲೆಯ ಪದವಿ ಪೂರ್ವ/ ಪದವಿ/ ಸ್ನಾತಕೋತ್ತರ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಾಲೇಜಿನ ಗುರುತಿನ ಚೀಟಿಯನ್ನು ಲಗತ್ತಿಸತಕ್ಕದ್ದು, ಒಬ್ಬರು ಒಂದು ಕವಿತೆಯನ್ನು ಮಾತ್ರ ವಾಚಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂ. 0821- 2513225 ಸಂಪರ್ಕಿಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಡಾ.ಎಂ.ಡಿ. ಸುದರ್ಶನ್ ತಿಳಿಸಿದ್ದಾರೆ.