ಸಾರಾಂಶ
ಕನ್ನಡಪ್ರಭ ವಾರ್ತೆ ಧಾರವಾಡ
ರಾಜ್ಯ ಮಾನವ ಹಕ್ಕುಗಳ ಆಯೋಗದ ಎದುರು ಧಾರವಾಡ ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ 63 ಪ್ರಕರಣಗಳು ಸೇರಿ ರಾಜ್ಯಾದ್ಯಂತ ಐದು ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಆದಷ್ಟು ಶೀಘ್ರ ಅವುಗಳನ್ನು ಪರಿಶೀಲಿಸಿ ಇತ್ಯರ್ಥಗೊಳಿಸಲಾಗುವುದು ಎಂದು ಆಯೋಗದ ಸದಸ್ಯ, ನಿವೃತ್ತ ನ್ಯಾಯಾಧೀಶ ಎಸ್.ಕೆ. ವಂಟಿಗೋಡಿ ಹೇಳಿದರು.ಆಯೋಗದ ಅಧ್ಯಕ್ಷ, ಸದಸ್ಯ ಹುದ್ದೆಗಳು ಇತ್ತೀಚೆಗೆ ಭರ್ತಿಯಾದ ಕಾರಣ ಇಷ್ಟೊಂದು ಪ್ರಕರಣಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಬರುವ ಜನವರಿ ತಿಂಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಪ್ರವಾಸ ಮಾಡಿ ಅಲ್ಲಿನ ಪ್ರಕರಣಗಳನ್ನು ಸ್ಥಳದಲ್ಲಿಯೇ ವಿಚಾರಣೆ ನಡೆಸಿ ಇತ್ಯರ್ಥಗೊಳಿಸುವುದು ಜೊತೆಗೆ ಹೊಸ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಯೋಜನೆ ರೂಪಿಸಲಾಗಿದೆ ಎಂದರು.
ಕಳೆದೆರಡು ದಿನಗಳಿಂದ ತಾವು ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು, ಧಾರವಾಡದ ವಿವಿಧ ಹಾಸ್ಟೇಲ್‌ಗಳಿಗೆ, ಬಂಧಿಖಾನೆ ಹಾಗೂ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸ್ಥಿತಿಗತಿಗಳನ್ನು ಪರಿಶೀಲಿಸಿದ್ದೇನೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿಯೂ ಹೇಳಿದ ಅವರು, ಮಾನವ ಹಕ್ಕುಗಳ ಉಲ್ಲಂಘನೆಯಾದಲ್ಲಿ ಹಾಗೂ ಹಕ್ಕುಗಳ ಸಂರಕ್ಷಣೆ ನಿಟ್ಟಿನಲ್ಲಿ ಆಯೋಗವು ಸದಾ ಕರ್ತವ್ಯನಿರತವಾಗಿದೆ. ಧಾರವಾಡದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಪರಿಶಿಷ್ಟ ಜಾತಿ, ಪಂಗಡಗಳ ಹಾಸ್ಟೇಲ್‌ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ತಾವು ಸಂವಾದ ನಡೆಸಿದ್ದು, ಉತ್ತಮ ನಿರ್ವಹಣೆ ಕಂಡು ಬಂದಿದೆ. ಆದರೆ ಹೆಚ್ಚಿನ ಕಟ್ಟಡಗಳ ಅವಶ್ಯಕತೆ ಇದ್ದು, ಅನುದಾನದ ಕೊರತೆ ಇರುವುದಾಗಿ ಗೊತ್ತಾಯಿತು. ಧಾರವಾಡ ಇಡೀ ಉತ್ತರ ಕರ್ನಾಟಕಕ್ಕೆ ವಿದ್ಯಾಕೇಂದ್ರವಾಗಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಹಾಸ್ಟೇಲ್ ಕಟ್ಟಡಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದರು.ವಿವಿಧ ಕಾಮಗಾರಿ ನಡೆಯುತ್ತಿರುವ ಕಟ್ಟಡ ಕಾರ್ಮಿಕರೊಂದಿಗೆ ಚರ್ಚಿಸಿ, ಕಾರ್ಮಿಕರ ಹಾಗೂ ಅವರ ಮಕ್ಕಳ ಸ್ಥಿತಿಗತಿ ಸೂಕ್ತ ಸೌಲಭ್ಯಗಳನ್ನು ವಿತರಿಸುತ್ತಿರುವ ಬಗ್ಗೆಯೂ ಪರಿಶೀಲಿಸಲಾಯಿತು. ಬಂಧಿಖಾನೆಯಲ್ಲಿ ಸಜಾ ಬಂಧಿಗಳು ಹಾಗೂ ವಿಚಾರಣೆ ಎದುರಿಸುತ್ತಿರುವ ಬಂಧಿಗಳ ಜೊತೆ ಚರ್ಚಿಸಲಾಯಿತು. ಅಲ್ಲಿಯ ಅಡುಗೆ ಮನೆ, ಗ್ರಂಥಾಲಯ ಶಿಕ್ಷಣ ಸೌಲಭ್ಯಗಳ ಬಗ್ಗೆ ಪರಿಶೀಲಿಸಲಾಯಿತು. ಬಂಧಿಗಳಿಂದ ಕೃಷಿ ಕಾರ್ಯ ಚಟುವಟಿಕೆಯೂ ನಡೆಯುತ್ತಿದೆ ಎಂದ ಅವರು, ಜಿಲ್ಲಾ ಆಸ್ಪತ್ರೆಗೆ ತೆರಳಿ ಒಳರೋಗಿಗಳ ಸ್ಥಿತಿಗತಿ, ಹೊರರೋಗಿಗಳು, ಬ್ಲಡ್‌ಬ್ಯಾಂಕ್, ಲ್ಯಾಬ್ ಪರಿಶೀಲಿಸಲಾಯಿತು. ಅಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಲಾಯಿತು. ಗರ್ಭಿಣಿ ಹಾಗೂ ತಾಯಂದಿರ, ಮಕ್ಕಳ ವಾರ್ಡ್ ತೀರ ಕಿಕ್ಕಿರಿದು ಕಂಡು ಬಂದಿತು. ನೂತನ ಕಟ್ಟಡಗಳ ಅಗತ್ಯವಿದೆ. ವಿಶೇಷ ವೈದ್ಯಾಧಿಕಾರಿಗಳ ಕೊರತೆಯಿದೆ ಎಂದರು. ಜಿಲ್ಲಾಸ್ಪತ್ರೆಯನ್ನು ಬೇರೆಡೆ ಸ್ಥಳಾಂತರಕ್ಕೆ ಚರ್ಚೆ ನಡೆದಿರುವ ಬಗ್ಗೆ ಶಸ್ತ್ರಚಿಕಿತ್ಸಕ ಡಾ. ಗಾಬಿ ಗಮನಕ್ಕೆ ತಂದರು. ಜೊತೆಗೆ ಒಳರಸ್ತೆಗಳ ಸುಧಾರಣೆಯ ಬಗ್ಗೆಯೂ ಅವರಿಗೆ ಸೂಚನೆ ನೀಡಲಾಗಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾನವ ಹಕ್ಕುಗಳ ರಕ್ಷಣೆ, ಭ್ರಷ್ಟಾಚಾರ ನಿರ್ಮೂಲನೆ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಸರ್ಕಾರಿ ಅಧಿಕಾರಿಗಳನ್ನು ಹೆದರಿಸುವುದು ಅಥವಾ ಇನ್ನಾವುದೇ ಈ ರೀತಿ ಅಕ್ರಮ ಕಂಡು ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.ಸ್ಪಯಂಪ್ರೇರಿತ ಪ್ರಕರಣ
ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿದ ಪ್ರಕರಣದ ಕುರಿತಂತೆ ಆಯೋಗದ ಅಧ್ಯಕ್ಷರು ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿಕೊಂಡಿದ್ದಾರೆ. ಜೊತೆಗೆ ಈ ಕುರಿತು ಪತ್ರಿಕಾ ವರದಿಗಳನ್ನು ಸಹ ಪೂರಕವಾಗಿ ಇಟ್ಟುಕೊಂಡಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿದೆ.