ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುತಾಲೂಕಿನಲ್ಲಿ ಮೈಕ್ರೋಫೈನಾನ್ಸ್ ಹಾವಳಿಯಿಂದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಗ್ರಾಮವನ್ನು ತೊರೆದು, ಇಬ್ಬರು ಆತ್ಮಹತ್ಯೆ ಮಾಡಿಕೊಂಡರೂ ಸಹ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಸಾಂತ್ವನ ಹೇಳಲು, ಮುಂದಾಗಲಿಲ್ಲ, ಜೊತೆಗೆ ಒಂದು ಕೆಡಿಪಿ ಸಭೆ ನಡೆಸದೆ, ಕ್ಷೇತ್ರದ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ ಎಂದು ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ ಆರೋಪಿಸಿದರು.ಕಾಡಂಚಿನ ಗ್ರಾಮಗಳಾದ ಯಡಿಯಾಲ, ಬಳ್ಳೂರುಹುಂಡಿ, ದೇವರಾಯಶೆಟ್ಟಿಪುರ, ಮಾಕನಪುರ, ದೇಪೇಗೌಡನಪುರ ಸೇರಿದಂತೆ ತಾಲೂಕಿನ ಹಲವಾರು ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ರೈತರ ಬೆಳೆ ನಷ್ಟವಾಗಿ ರೈತರು ಸಂಕಷ್ಟದಲ್ಲಿದ್ದಾರೆ, ಅಲ್ಲದೆ ಈ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿ ಮುಖ್ಯರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದ್ದು, ಸಾರ್ವಜನಿಕರು ಯಾವ ಸಮಯದಲ್ಲಿ ಏನಾಗುವುದು ಎಂಬ ಭೀತಿಯಲ್ಲಿದ್ದಾರೆ. ಓಂಕಾರ್ ಮತ್ತು ಯಡಿಯಾಲ ವಲಯದ ಅರಣ್ಯಾಧಿಕಾರಿಗಳು ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಒಬ್ಬರ ಮೇಲೆ ಮತ್ತೊಬ್ಬರು ಸಬೂಬು ಹೇಳುತ್ತಾ ಹೊಣೆಯಿಂದ ನುಣಿಚಿಕೊಳ್ಳುತ್ತಿದ್ದು, ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲು ವಿಫಲರಾಗಿದ್ದಾರೆ, ಅಲ್ಲದೆ ರೈತರು ಬೆಳೆ ನಷ್ಟವಾಗಿ ಅರಣ್ಯ ಇಲಾಖೆಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಎಕರೆಗೆ ಎರಡು ಸಾವಿರ ಪರಿಹಾರ ನೀಡಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಇಬ್ಬರು ವಲಯ ಅರಣ್ಯಾಧಿಕಾರಿಗಳ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಿ ಕಾಡು ಪ್ರಾಣಿಗಳ ಹಾವಳಿಯ ತಡೆಗೆ ಮುಂದಾಗಬೇಕಿದೆ ಎಂದರು.ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದಾಗಿ ಶಿರಮಳ್ಳಿ ಗ್ರಾಮದಲ್ಲಿ 20, ಹುರ ಗ್ರಾಮದಲ್ಲಿ 7, ಕಗ್ಗಲೂರು ಗ್ರಾಮದಲ್ಲಿ 4, ರಾಂಪುರ ಗ್ರಾಮದಲ್ಲಿ 15 ಸೇರಿದಂತೆ ತಾಲೂಕಿನಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ಗ್ರಾಮವನ್ನು ತೊರೆದಿದ್ದಾರೆ. ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿದ್ದರೂ ಸಹ ಸರ್ಕಾರದ ಆದೇಶ ಬರುವವರೆಗೆ ಈ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಗೂಂಡಾ ರೀತಿ ವರ್ತಿಸಿ ಜನರನ್ನು ಸುಲಿಗೆ ಮಾಡುತ್ತಿದ್ದಾರೆ.ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದ ಆದೇಶ ಬರುವವರೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ವಸೂಲಾತಿ ಮಾಡದಂತೆ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಸೂಚನೆ ನೀಡಬೇಕು ಎಂದು ಅವರು ಆಗ್ರಹಿಸಿದರು.ಮುಖ್ಯವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಕೆಡಿಪಿ ಸಭೆ ನಡೆಸದೆ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ, ಅವರು ಕೆಡಿಪಿ ಸಭೆ ನಡೆಸಿದಲ್ಲಿ ಜನರ ಕಷ್ಟ ಅರಿವಾಗಲಿದೆ, ದೀಪಂ ಮತ್ತು ತಾಪಂ ಪ್ರತಿನಿಧಿಗಳು ಇಲ್ಲದೆ ಇರುವುದರಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಭಯವಿಲ್ಲದೆ ಸಾರ್ವಜನಿಕರ ಕೆಲಸ ಮಾಡಲು ಮುಂದಾಗುತ್ತಿಲ್ಲ, ಜೊತೆಗೆ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ, ಈ ಎಲ್ಲ ಸಮಸ್ಯೆಗಳನ್ನು ಈ ಕೂಡಲೇ ಕಟ್ಟುನಿಟ್ಟನ ಕ್ರಮವಹಿಸಿ ಬಗೆಹರಿಸಲು ಮುಂದಾಗಬೇಕು, ರೈತರ ಸಂಕಷ್ಟವನ್ನು ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಜಿಪಂ ಮಾಜಿ ಸದಸ್ಯ ಎಸ್.ಎಂ. ಕೆಂಪಣ್ಣ, ತಾಪಂ ಮಾಜಿ ಸದಸ್ಯ ರವೀಂದ್ರ, ಕಸುವಿನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ವೃಷವೇಂದ್ರಪ್ಪ, ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ತಾಲೂಕು ಅಧ್ಯಕ್ಷ ಉಮೇಶ್ ಮೋದಿ ಇದ್ದರು.