ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಅನ್ಯಾಯದಿಂದ ರೈತರ ಜಮೀನುಗಳ ಭೂಸ್ವಾಧೀನ ವಿರೋಧಿಸಿ ಜೂ.25ರ ಬುಧವಾರ ಆಯೋಜಿಸಿರುವ ದೇವನಹಳ್ಳಿ ಚಲೋಗೆ ಜಿಲ್ಲೆಯಿಂದ 500ಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಸಾಮೂಹಿಕ ನಾಯಕತ್ವದ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ ಸುಮಾರು 1177ಎಕರೆ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಇದನ್ನು ವಿರೋಧಿಸಿ ರೈತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಚಲೋಗೆ ಮುಂದಾಗಿವೆ ಎಂದರು. ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ವಿದ್ಯಾರ್ಥಿ ಚಳವಳಿಗಾರರು ಅಲ್ಲದೇ ಪ್ರಗತಿ ಪರ ಹೋರಾಟಗಾರರು. ಸಾಹಿತಿ ಕಲಾವಿದರು ರಾಜ್ಯದ ಮೂಲೆ ಮೂಲೆಗಳಿಂದಲೂ ದೇವನಹಳ್ಳಿಗೆ ಬಂದು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ ಎಂದರು.ಬಿಜೆಪಿ ಸರ್ಕಾರವಿದ್ದಾಗ ಭೂಸ್ವಾಧೀನಕ್ಕೆ ಅಧಿಸೂಚನೆ ಮಾಡಿದಾಗ ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಇದನ್ನು ವಿರೋಧಿಸಿತ್ತು. ಜೊತೆಗೆ ನಾವು ಅಧಿಕಾರಕ್ಕೆ ಬಂದರೆ ಇದನ್ನು ನಿಲ್ಲಿಸುವುದಾಗಿ ಹೇಳಿದ್ದರು, ಆದರೆ ಅಧಿಕಾರ ಬಂದ ನಂತರ ತಮ್ಮ ಮಾತನ್ನು ಮರೆತು ಭೂಸ್ವಾಧೀನಕ್ಕೆ ಮುಂದಾಗಿದ್ದಾರೆ, ಮೂರು ಪಕ್ಷಗಳು ಅಷ್ಟೇ ಅಧಿಕಾರ ಇದ್ದಾಗ ಒಂದು ರೀತಿ ಅಧಿಕಾರ ಇಲ್ಲದಿದ್ದಾಗ ಒಂದು ರೀತಿ ನಡೆದುಕೊಳ್ಳುತ್ತಾರೆ ಎಂದರು. ಸಿದ್ದರಾಮಯ್ಯ ಸರ್ಕಾರ ರೈತ ವಿರೋಧಿ ನೀತಿಗಳನ್ನೇ ಅನುಸರಿಸಿಕೊಂಡು ಬರುತ್ತಿದೆ, ಇದನ್ನು ಖಂಡಿಸಲು ಜೂ.೨೫ರ ಬುಧವಾರ ಆಯೋಜಿಸಿರುವ ದೇವನಹಳ್ಳಿ ಚಲೋಗೆ ಜಿಲ್ಲೆಯಿಂದ ಹೆಚ್ಚು ಜನರು ಭಾಗವಹಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಭುಸ್ವಾಮಿ, ಪಾಪಣ್ಣ, ಚನ್ನಮಲ್ಲಪ್ಪ. ಪ್ರಸಾದ್ ಇದ್ದರು.