ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಜಿಲ್ಲೆಯಲ್ಲಿ ಶನಿವಾರ ಸುಮಾರು 500ಕ್ಕೂ ಅಧಿಕ ಕಡೆಗಳಲ್ಲಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ವಿವಿಧ ಸಂಘ ಸಂಸ್ಥೆಗಳು ಸಕಲ ಸಿದ್ಧತೆ ಮಾಡಿಕೊಂಡಿದೆ. ಪೊಲೀಸ್ ಇಲಾಖೆ ಕೂಡ ಹಬ್ಬದ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಿದೆ.ಹಬ್ಬದ ಅಂಗವಾಗಿ ಗೌರಿ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದರೊಂದಿಗೆ ನಿತ್ಯ ಪೂಜೆಗಳು ನಡೆಯಲಿದೆ. ಕೆಲವು ಸಮಿತಿಗಳು ಪ್ರತಿಷ್ಠಾಪನೆ ಮಾಡಿದ ದಿನವೇ ವಿಸರ್ಜನೆ ಮಾಡುತ್ತವೆ. ಕೆಲವರು ಹಲವು ದಿನ ಪ್ರತಿಷ್ಠಾಪಿಸಿ ನಂತರ ವೈಭವದ ಮೆರವಣಿಗೆ ನಡೆಸಿ ದೇವರ ಮೂರ್ತಿಗಳನ್ನು ವಿಸರ್ಜಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅನ್ನದಾನ, ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಗೌರಿ- ಗಣೇಶ ಹಬ್ಬದ ಸಂದರ್ಭದಲ್ಲಿ ನಾಗರಿಕರು ಪಿ.ಓ.ಪಿ.ಗಣೇಶ ತಯಾರಿಕೆ ಹಾಗೂ ರಾಸಾಯನಿಕ ಬಣ್ಣ ಮುಕ್ತ ಪರಿಸರ ಸ್ನೇಹಿ ನೈಸರ್ಗಿಕವಾದ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಸಂರಕ್ಷಣೆ ಮುಂದಾಗಬೇಕೆಂಬ ಜಾಗೃತಿಯೂ ಜಿಲ್ಲೆಯಲ್ಲಿ ನಡೆದಿದೆ.
ದೇಗುಲಗಳಲ್ಲಿ ವಿಶೇಷ ಪೂಜೆ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಶನಿವಾರ ಕೊಡಗಿನ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಲಿದೆ. ಮಡಿಕೇರಿಯ ಇತಿಹಾಸ ಪ್ರಸಿದ್ಧ ಕೋಟೆ ಶ್ರೀಮಹಾಗಣಪತಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ಅಭಿಷೇಕ, ಅಲಂಕಾರ, ಅರ್ಚನೆ, ಹೋಮ ಹವನಾದಿ ವಿಶೇಷ ಪೂಜೆಗಳು ನಡೆಯಲಿದೆ. ಭಕ್ತರು ಸಾವಿರಾರು ಈಡುಗಾಯಿ ಸೇವೆ ಅರ್ಪಿಸಲಿದ್ದಾರೆ. ನಗರದ ಹೊಸ ಬಡಾವಣೆಯ ಪ್ರಸನ್ನ ಗಣಪತಿ ದೇವಾಲಯ, ದೇಚೂರು ಶ್ರೀವಿದ್ಯಾಗಣಪತಿ, ಕನ್ನಂಡಬಾಣೆಯ ದೃಷ್ಟಿ ಗಣಪತಿ, ಕಾಲೇಜು ರಸ್ತೆಯ ವಿಜಯವಿನಾಯಕ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ಗಣೇಶನ ಆರಾಧನೆ ನಡೆಯಲಿದೆ. ಮಡಿಕೇರಿ ನಗರದಲ್ಲಿ 25 ಕ್ಕೂ ಹೆಚ್ಚಿನ ಗಣೇಶೋತ್ಸವ ಸಮಿತಿಗಳು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಿವೆ. ಅಯೋಧ್ಯೆ ರಾಮ ಮಾದರಿ ಗಣಪ : ಪ್ರತಿ ವರ್ಷ ವಿಭಿನ್ನ ಪ್ರಯತ್ನಗಳ ಮೂಲಕವೇ ಗಣೇಶೋತ್ಸವದ ಆಕರ್ಷಣೆಯನ್ನು ಹೆಚ್ಚಿಸುತ್ತಿರುವ ಮಡಿಕೇರಿ ನಗರದ ಶಾಂತಿನಿಕೇತನ ಯುವಕ ಸಂಘ, ಪ್ರಸ್ತುತ ಅಯೋಧ್ಯೆಯ ಶ್ರೀರಾಮ ಮಂದಿರದ ಒಳಾಂಗಣದ ಮಾದರಿಯನ್ನು ಸೃಷ್ಟಿಸಿದೆ. ಈ ಮಾದರಿಯಲ್ಲಿ ವಿಘ್ನ ನಿವಾರಕ ಗಣಪ ಶ್ರೀರಾಮನ ರೂಪದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿದ್ದಾನೆ.ಶಾಂತಿನಿಕೇತನ ಯುವಕ ಸಂಘ 46 ನೇ ವರ್ಷದ ಅದ್ಧೂರಿ ಗಣೇಶೋತ್ಸವದ ಸಂಭ್ರಮದಲ್ಲಿದೆ. ಜನವರಿ ತಿಂಗಳಿನಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯ ಕ್ಷಣವನ್ನು ಇಡೀ ಭಾರತ ಸೇರಿ ವಿಶ್ವ ಸಂಭ್ರಮಿಸಿತ್ತು. ಶ್ರೀರಾಮನಿರುವ ಪವಿತ್ರ ಮಂದಿರವನ್ನೇ ಮುಖ್ಯ ಆಕರ್ಷಣೆ ಮಾಡುವ ಸಲುವಾಗಿ ಈ ಬಾರಿ ಶಾಂತಿನಿಕೇತನದಲ್ಲಿ ಅಯೋಧ್ಯೆ ರಾಮನ ಮಾದರಿಯ ಗಣೇಶನ ಮೂರ್ತಿ ಹಾಗೂ ರಾಮ ಮಂದಿರದ ಒಳಾಂಗಣವನ್ನು ಹೋಲುವ ಮಾದರಿಯನ್ನು ಸುಂದರವಾಗಿ ವಿನ್ಯಾಸ ಮಾಡಲಾಗಿದೆ.
ಶುಕ್ರವಾರ ಬೆಳಗ್ಗೆ ಗಣಪತಿ ಹೋಮದೊಂದಿಗೆ ಶ್ರೀಮಹಾಗಣಪತಿಯ ಪ್ರತಿಷ್ಠಾಪನೆ ಮತ್ತು ಮಹಾಪೂಜೆ ನಡೆಯಲಿದೆ. ಸೆ.19 ರಂದು ಸಂಜೆ 7 ಗಂಟೆಗೆ ಸಾಮೂಹಿಕ ರಂಗಪೂಜೆ, ಸೆ.21 ರಂದು ಮಹಾಪೂಜೆಯ ನಂತರ ನಗರದಲ್ಲಿ ಶ್ರೀಮಹಾಗಣಪತಿ ಮೂರ್ತಿಯ ಶೋಭಾಯಾತ್ರೆ ಸಾಗಲಿದೆ. ಈ ಬಾರಿ ಲೋಕ ಕಲ್ಯಾಣಕ್ಕಾಗಿ ಮಯೂರೇಶನಿಂದ ಸಿಂಧು ದೈತ್ಯ ರಾಜನ ಸಂಹಾರ ಎಂಬ ಕಥಾವಸ್ತುವನ್ನು ಅಳವಡಿಸಿಕೊಳ್ಳಲಾಗುತ್ತಿದೆ...........................
ವಿರಾಜಪೇಟೆಯಲ್ಲಿ ಅದ್ಧೂರಿ ಗೌರಿ, ಗಣೇಶೋತ್ಸವಇತಿಹಾಸ ಪ್ರಸಿದ್ಧ ವಿರಾಜಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ಆಶ್ರಯದಲ್ಲಿ ಈ ಬಾರಿಯೂ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿನ ಗಣೇಶೋತ್ಸವಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಈ ಬಾರಿ ಸುಮಾರು 22 ಸಮಿತಿಗಳು ಗೌರಿ, ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದೆ. ಶುಕ್ರವಾರದಿಂದಲೇ ಹಬ್ಬದ ವಾತಾವರಣ ಕಂಡುಬಂದಿದೆ. 22 ಸಮಿತಿಗಳೂ ಕೂಡ ದೇವರ ಮೂರ್ತಿಗಳನ್ನು ಭವ್ಯ ಮಂಟಪದಲ್ಲಿ ಇರಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸೆ.17ರಂದು ರಾತ್ರಿ ಒಟ್ಟಾಗಿ ಶೋಭಾಯಾತ್ರೆ ನಡೆಸಲಿವೆ. ಸೆ.8ರಿಂದ ನಿತ್ಯ ಪೂಜೆಯ ಕಾರ್ಯಕ್ರಮ ಹಾಗೂ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ವಿವಿಧ ಕಾರ್ಯಕ್ರಮ ಕೂಡ ನಡೆಯಲಿದೆ.
.................ಜಿಲ್ಲೆಯಲ್ಲಿ 500ಕ್ಕೂ ಅಧಿಕ ಸ್ಥಳಗಳಲ್ಲಿ ಈ ಬಾರಿ ಗೌರಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಇಲಾಖೆಯಿಂದ ಸಮತಿಗಳೊಂದಿಗೆ ಸಭೆ ನಡೆಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಮದ್ಯ ಮಾರಾಟ ಕೂಡ ನಿಷೇಧ ಮಾಡಲಾಗುತ್ತಿದೆ. ಶೋಭಾಯಾತ್ರೆಯಲ್ಲಿ ಡಿ.ಜೆ ಸೌಂಡ್ಸ್ ಬಳಕೆ ಸಂಬಂಧ ಸಮಿತಿಗಳು ಕಾನೂನಿನ ನಿಯಮ ಪಾಲನೆ ಮಾಡಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು
- ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಶಾಂತಿನಿಕೇತನ ಯುವಕ ಸಂಘ 46 ನೇ ವರ್ಷದ ಅದ್ಧರಿಯ ಗಣೇಶೋತ್ಸವ ಆಚರಿಸಲಾಗುತ್ತಿದೆ. ಶ್ರೀರಾಮನಿರುವ ಪವಿತ್ರ ಮಂದಿರವನ್ನೇ ಮುಖ್ಯ ಆಕರ್ಷಣೆ ಮಾಡುವ ಸಲುವಾಗಿ ಈ ಬಾರಿ ಶಾಂತಿನಿಕೇತನದಲ್ಲಿ ಅಯೋಧ್ಯೆ ರಾಮನ ಮಾದರಿಯಲ್ಲಿ ಗಣೇಶನ ಮೂರ್ತಿ ಹಾಗೂ ರಾಮ ಮಂದಿರದ ಒಳಾಂಗಣವನ್ನು ಹೋಲುವ ಮಾದರಿಯನ್ನು ನಿರ್ಮಿಸಲಾಗಿದೆ
- ಕೆ.ಎಚ್. ಚೇತನ್, ಅಧ್ಯಕ್ಷರು, ಶಾಂತಿನಿಕೇತನ ಯುವಕ ಸಂಘ ಮಡಿಕೇರಿ --- ಇತಿಹಾಸ ಪ್ರಸಿದ್ಧ ವಿರಾಜಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಆಶ್ರಯದಲ್ಲಿ ಈ ಬಾರಿ ವೈಭವದಿಂದ ಗೌರಿ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಸೆ.17ರಂದು ಶೋಭಾಯಾತ್ರೆ ಜರುಗಲಿದೆ. 22 ಸಮಿತಿಗಳು ಗೌರಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸಲಿದೆ. ಗಣೇಶೋತ್ಸವ ಹಿನ್ನೆಲೆಯಲ್ಲಿ ಪ್ರತಿ ದಿನವೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ- ಎನ್. ಗೋಪಾಲಕೃಷ್ಣ ಕಾಮತ್, ಅಧ್ಯಕ್ಷರು, ಗೌರಿ ಗಣೇಶ ಉತ್ಸವ ಸಮಿತಿ ವಿರಾಜಪೇಟೆ