ಸಾರಾಂಶ
ಸುಮಾರು 15 ಲಕ್ಷ ಮರಿಗಳನ್ನು ಬಿಟ್ಟಿದ್ದು, ಪ್ರಸ್ತುತ ಕಟಾವಿಗೆ ಬಂದಿದ್ದ ಆರು ಲಕ್ಷಕ್ಕೂ ಹೆಚ್ಚು ಮೀನುಗಳು ಮೃತಪಟ್ಟಿವೆ. ಈ ನಷ್ಟವನ್ನು ಜಿಲ್ಲಾಡಳಿತ ಹಾಗೂ ಮೈಷುಗರ್ ಕಾರ್ಖಾನೆ ಭರಿಸಬೇಕು ಎಂದು ಸಂಘದ ಅಧ್ಯಕ್ಷ ತೊರೆಬೊಮ್ಮನಹಳ್ಳಿ ಚಿಕ್ಕಯ್ಯ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ಮುಟ್ಟನಹಳ್ಳಿ- ಮಾದರಹಳ್ಳಿ ಸೂಳೆಕೆರೆಯಲ್ಲಿ ವಿಷಪೂರಿತ ನೀರು ಸೇವಿಸಿ, 6 ಲಕ್ಷಕ್ಕೂ ಹೆಚ್ಚು ಮೀನುಗಳು ಮೃತಪಟ್ಟು ಲಕ್ಷಾಂತರ ರು. ನಷ್ಟವಾಗಿರುವ ಘಟನೆ ಜರುಗಿದೆ.ಸೂಳೆಕೆರೆಗೆ ಶ್ರೀ ಜಲದರ್ಶಿನಿ ಮೀನುಗಾರರ ಸಹಕಾರ ಸಂಘದ ವತಿಯಿಂದ 15 ಲಕ್ಷ ಮೀನು ಮರಿಗಳನ್ನು ಕೆರೆಗೆ ಬೀಡಲಾಗಿತ್ತು. ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಕಾಕಂಬಿ(ಮೊಲಸಿಸ್) ಘಟಕದಲ್ಲಿ ದೋಷ ಉಂಟಾಗಿ ಒಡೆದು ಸಹಸ್ರಾರು ಲೀಟರ್ ಕಾಕಂಬಿ(ಮೊಲಸಿಸ್) ಹೆಬ್ಬಾಳಕ್ಕೆ ಹರಿದು ನೀರಿನ ಮೂಲಕ ರಾಜ್ಯದ ಪ್ರಮುಖ ಕೆರೆಗಳಲ್ಲಿ ಒಂದಾದ ಸೂಳೆಕೆರೆ ನೀರಿನ ಜೊತೆ ಭಾನುವಾರ ರಾತ್ರಿ ಮಿಶ್ರಣವಾಗಿದೆ.
ಕಾಕಂಬಿ(ಮೊಲಸಿಸ್) ಮಿಶ್ರಿತ ನೀರಿನಿಂದಾಗಿ ಸೋಮವಾರ ಬೆಳಗ್ಗೆ ಸಹಸ್ರಾರು ಮೀನುಗಳು ಕೆರೆ ದಂಡೆ ಬಳಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದವು. ಇದನ್ನು ಗಮನಿಸಿದ ಮಾದರಹಳ್ಳಿ, ಶಿಂಗಟಗೆರೆ, ಹರಳಹಳ್ಳಿ, ಹೆಮ್ಮಿಗೆ, ಅಂಬರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನತೆ ಆಗಮಿಸಿ ಒಬ್ಬೊಬ್ಬರು 5 ರಿಂದ 20 ಕೆಜಿ ಮೀನು ಹಿಡಿದುಕೊಂಡು ಹೋದರು.ಹಲವರು ಬೇರೆ ಬೇರೆ ಊರುಗಳಲ್ಲಿ ಇರುವ ತಮ್ಮ ಬಂಧು, ಬಳಗ, ಮಿತ್ರರ ಮನೆಗಳಿಗೂ ಕೆಜಿ ಗಟ್ಟಲೆ ಮೀನುಗಳನ್ನು ಕೊಟ್ಟರು. ಸಹಸ್ರಾರು ಮೀನುಗಳು ಮೃತಪಟ್ಟು ಕೆರೆ ಬದಿಯಲ್ಲಿ ತೇಲಾಡುತ್ತಿದ್ದವು.
ಮೀನುಗಳ ಮಾರಣ ಹೋಮ ನಡೆದು ಕೆರೆಯನ್ನು ಗುತ್ತಿಗೆಗೆ ಪಡೆದು ಮೀನು ಸಾಕಾಣಿಕೆ ಮಾಡಿದ್ದ ಕೆ.ಎಂ.ದೊಡ್ಡಿ ಶ್ರೀ ಜಲದರ್ಶಿನಿ ಮೀನುಗಾರರ ಸಹಕಾರ ಸಂಘದ ಪದಾಧಿಕಾರಿಗಳು ಹಾಗೂ ಕಾಯಂ ಮೀನು ಖರೀದಿ ಮಾಡುತ್ತಿದ್ದವರಿಗೆ ಇದರಿಂದ ಸಾಕಷ್ಟು ನಷ್ಟ ಉಂಟಾಗಿದೆ.ಸುಮಾರು 15 ಲಕ್ಷ ಮರಿಗಳನ್ನು ಬಿಟ್ಟಿದ್ದು, ಪ್ರಸ್ತುತ ಕಟಾವಿಗೆ ಬಂದಿದ್ದ ಆರು ಲಕ್ಷಕ್ಕೂ ಹೆಚ್ಚು ಮೀನುಗಳು ಮೃತಪಟ್ಟಿವೆ. ಈ ನಷ್ಟವನ್ನು ಜಿಲ್ಲಾಡಳಿತ ಹಾಗೂ ಮೈಷುಗರ್ ಕಾರ್ಖಾನೆ ಭರಿಸಬೇಕು ಎಂದು ಸಂಘದ ಅಧ್ಯಕ್ಷ ತೊರೆಬೊಮ್ಮನಹಳ್ಳಿ ಚಿಕ್ಕಯ್ಯ ಮನವಿ ಮಾಡಿದರು.
ಸ್ಥಳಕ್ಕೆ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಬಾಬಾಸಾಬ್ ತಂಡ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಮೃತ ಮೀನುಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.