ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಿಂದ ಅನೇಕ ಕಡೆ ಭಕ್ತರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಯಿತು
ಮುನಿರಾಬಾದ್: ದೊಡ್ಡ ಹುಣ್ಣಿಮೆಯಂದು ಖ್ಯಾತಿ ಪಡೆದ ಭರತ ಹುಣ್ಣಿಮೆ ಪ್ರಯುಕ್ತ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ 8 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ, ದೇವಿಯ ದರ್ಶನ ಪಡೆದರು.
ಶನಿವಾರ ರಾತ್ರಿಯಿಂದಲೇ ದೇವಸ್ಥಾನಕ್ಕೆ ಭಕ್ತರು ಬರಲಾರಂಭಿಸಿದ್ದರು. ಶನಿವಾರ ರಾತ್ರಿ ದೇವಸ್ಥಾನದ ಆವರಣದಲ್ಲಿ 75,000ಕ್ಕಿಂತ ಅಧಿಕ ಜನರು ಮಲಗಿ, ಬೆಳಗ್ಗೆ ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಅಮ್ಮನವರ ದರ್ಶನ ಪಡೆದರು.ಬೆಳಗ್ಗೆ 8 ಗಂಟೆ ವೇಳೆಗೆ ಸುಮಾರು 1.5 ಲಕ್ಷ ಜನರು ಅಮ್ಮನವರ ದರ್ಶನ ಪಡೆದರು. 10 ಗಂಟೆಗೆ ದರ್ಶನ ಪಡೆದ ಭಕ್ತರ ಸಂಖ್ಯೆ 2 ಲಕ್ಷ ತಲುಪಿತು. ಮಧ್ಯಾಹ್ನ 12ರ ವೇಳೆಗೆ ದರ್ಶನ ಪಡೆದ ಭಕ್ತರ ಸಂಖ್ಯೆ 3 ಲಕ್ಷ ತಲುಪಿತು. ಮಧ್ಯಾಹ್ನ 3 ಗಂಟೆ ವೇಳೆಗೆ 5 ಲಕ್ಷ ಭಕ್ತಾದಿಗಳು ಅಮ್ಮನ ದರ್ಶನ ಪಡೆದಿದ್ದರು. ಹುಲಿಗೆಮ್ಮ ದೇವಸ್ಥಾನಕ್ಕೆ ಸಂಜೆಯ ವರೆಗೂ ಭಕ್ತರು ಆಗಮಿಸುತ್ತಲೇ ಇದ್ದರು, ಸಂಜೆಯ ವೇಳೆಗೆ 8 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಅಮ್ಮನವರ ದರ್ಶನ ಪಡೆದರು.
ಪೋಲಿಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ನಂದಿವೃತ್ತದಿಂದ ದೇವಸ್ಥಾನದ ವರೆಗೆ 120 ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಇದಲ್ಲದೆ 100ಕ್ಕೂ ಅಧಿಕ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದಿಂದ ಅನೇಕ ಕಡೆ ಭಕ್ತರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಯಿತು. ಇದಲ್ಲದೆ ಮಧ್ಯಾಹ್ನ 12ರಿಂದ ಸಂಜೆ 5ರ ವರೆಗೆ ಭಕ್ತರಿಗಾಗಿ ದಾಸೋಹದ ವ್ಯವಸ್ಥೆ ಮಾಡಲಾಯಿತು.
ವಿಶೇಷ ಬಸ್: ರಾಜ್ಯ ರಸ್ತೆ ಸಾರಿಗೆ ನಿಗಮ ಭಕ್ತರ ಅನುಕೂಲಕ್ಕೆ ಕೊಪ್ಪಳ, ಕುಷ್ಟಗಿ, ಗಂಗಾವತಿ ಹಾಗೂ ಹೊಸಪೇಟೆಯಿಂದ ಹುಲಿಗಿ ಗ್ರಾಮಕ್ಕೆ 30ಕ್ಕೂ ಅಧಿಕ ವಿಶೇಷ ಬಸ್ ಓಡಿಸಿತು.ಆಮೆಗತಿಯಲ್ಲಿ ರೈಲ್ವೆ ಫ್ಲೈಒವರ್ ಕಾಮಗಾರಿ: ಹುಲಿಗೆಮ್ಮದೇವಿ ಭಕ್ತರು ಹಾಗೂ ಹುಲಿಗಿ ಗ್ರಾಮದ ಸುತ್ತಮುತ್ತಲಿನ ಜನರ ಅನುಕೂಲಕ್ಕೆ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದರಿಂದ ಹುಲಿಗೆಮ್ಮದೇವಿ ಭಕ್ತರು ಪದೇ ಪದೇ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕು ತೊಂದರೆ ಅನುಭವಿಸಿದರು. ರೈಲ್ವೆ ಮೇಲ್ಸೇತುವೆ ಕಾಮಗಾರಿ ಆದಷ್ಟು ಬೇಗನೆ ಮುಗಿಸಬೇಕೆಂದು ಹುಲಿಗಿ ಗ್ರಾಮಸ್ಥ ವಿಜಯಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.