ಸಾರಾಂಶ
ಕನ್ನಡಪ್ರಭ ವಾರ್ತೆ ಸರಗೂರುಪಟ್ಟಣದ ಅಂಚೆ ಕಚೇರಿಯಲ್ಲಿ ಸಿಬ್ಬಂದಿಯೊಬ್ಬರು ಖಾತೆದಾರರ ನಕಲಿ ಸಹಿ ಬಳಸಿ, ಸುಮಾರು ಒಂದು ಕೋಟಿಗೂ ಹೆಚ್ಚು ರು. ಗಳ ಅಧಿಕ ಮೊತ್ತದ ಹಣವನ್ನು ಲಪಟಾಯಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಜಿಲ್ಲಾ ಅಂಚೆ ಕಚೇರಿಯ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.ಪಟ್ಟಣದ ಒಂದನೇ ಮುಖ್ಯರಸ್ತೆಯ ಎಸ್.ಬಿಐ ಬ್ಯಾಂಕ್ ಕಚೇರಿ ಪಕ್ಕದಲ್ಲಿರುವ ಅಂಚೆ ಕಚೇರಿಯಲ್ಲಿನ ಅಂಚೆ ಶಾಖಾ ಪಾಲಕ (ಪೋಸ್ಟಲ್ ಆಸಿಸ್ಟೆಂಟ್) ಬಿ.ಎಸ್ ದೀಪಕ್ ಎಂಬವರು ಹಣ ಲಪಟಾಯಿಸಿದವರು ಎನ್ನಲಾಗುತ್ತಿದೆ. ಇವರು ಅಂಚೆ ಕಚೇರಿಯ ವಿವಿಧ ಖಾತೆಗಳಿಂದ ನಕಲಿ ಸಹಿ ಬಳಸಿ, ಲಕ್ಷಾಂತರ ರು. ಗುಳುಂ ಮಾಡಿದ್ದಾರೆ ಎಂದು ಖಾತೆದಾರರು ಆರೋಪಿಸಿದ್ದಾರೆ.ಮೈಸೂರಿನ ಜಿಲ್ಲಾ ಅಂಚೆ ಕಚೇರಿ ನಿರೀಕ್ಷಕರಿಗೆ ಖಾತೆದಾರರು ದೂರು ನೀಡಿದ ಹಿನ್ನೆಲೆ ಅಂಚೆ ಕಚೇರಿಯ ನಿರೀಕ್ಷಕ ಚೇತನ್ ಹಾಗೂ ತಂಡ ಬುಧವಾರ, ಗುರುವಾರ ಕಚೇರಿಗೆ ಭೇಟಿ ನೀಡಿ ಎಲ್ಲ ಖಾತೆದಾರರ ಖಾತೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 100 ಖಾತೆದಾರರ ಪರಿಶೀಲನೆ ನಡೆಸುತ್ತಿದ್ದಾಗ ಸುಮಾರು 45 ಲಕ್ಷ ರು. ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಂಚೆ ಶಾಖಾ ಪಾಲಕ ದೀಪಕ್ ಅಂಚೆ ಕಚೇರಿಯ ಉಳಿತಾಯ ಖಾತೆಯಿಂದ ಹಣ ಹಿಂಪಾವತಿಯ ಮೇಲೆ ಖಾತೆದಾರರ ನಕಲಿ ಸಹಿ ಮಾಡಿ ಹಣ ಪಡೆದಿದ್ದಾನೆ. ಅದಲ್ಲದೆ ಇನ್ನೂ ಇತರೆ ಗ್ಯಾರಂಟಿ ಯೋಜನೆ ಹಣವನ್ನು ಖಾತೆದಾರರಿಂದ ಹಣ ಜಮಾ ಮಾಡಲು ತೆಗೆದುಕೊಂಡು ಅದನ್ನು ಸ್ವಂತಕ್ಕೆ ಬಳಸಿಕೊಂಡು ಖಾತೆದಾರರ ಪುಸ್ತಕದಲ್ಲಿ ಮುದ್ರೆ ಹಾಕಿ ಸಹಿ ಮಾಡಿ ಕೊಟ್ಟಿದ್ದಾನೆ ಎನ್ನಲಾಗುತ್ತಿದೆ. ಆದರೆ, ಈ ಕುರಿತು ಕಚೇರಿಯ ಪುಸ್ತಕದಲ್ಲಿ ಯಾವುದೇ ವಿವರ ನಮೂದು ಮಾಡಿಲ್ಲ ಎಂದು ಖಾತೆದಾರರು ದೂರಿದ್ದಾರೆ.ನಮ್ಮ ಕಚೇರಿ ಶಾಖಾದಲ್ಲಿ ಒಟ್ಟು 5 ಸಾವಿರಕ್ಕೂ ಖಾತೆದಾರರು ಇದ್ದಾರೆ. ನಾವು ಎಲ್ಲ ಖಾತೆಯನ್ನು ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ನಮ್ಮ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದು, ಮುಂದುವರಿಯಲಿದೆ. ಆದರೆ ದೀಪಕ್ ಲಪಟಾಯಿಸಿರುವ ಹಣ ಮೊತ್ತ ಮತ್ತಷ್ಟು ಏರಿಕೆಯಾಗಬಹುದು, ತನಿಖೆಗೆ ಖಾತೆದಾರರು ಸ್ಪಂದಿಸಬೇಕು, ಖಾತೆದಾರರ ಹಣದಲ್ಲಿ ಯಾವುದೇ ಮೋಸವಿರುವುದಿಲ್ಲ. ಕಳೆದುಕೊಂಡ ಹಣ ಮತ್ತೆ ವಾಪಸ್ ಪಡೆಯಲು ಸೂಕ್ತ ಕ್ರಮವಹಿಸಲಾಗುವುದು. ಈ ಕುರಿತು ಖಾತೆದಾರರು ಭಯಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.ಅಂಚೆ ಕಚೇರಿಯ ಅಧಿಕಾರಿಗಳು ಕೆಲವೊಂದು ಫಾರಂಗೆ ಸಹಿ ಮಾಡಿಸಿಕೊಂಡು ವಾರ ಬಿಟ್ಟು ಬನ್ನಿ ಎಂದು ಸಾಬೂಬು ಹೇಳುತ್ತಿದ್ದರು. ಇದಲ್ಲದೆ ಸರ್ವರ್ ಬಿಸಿ ನಾಳೆ ಬನ್ನಿ ಎಂದು ಹಣ ಲಪಟಾಯಿಸಿದ್ದಾರೆ ಎಂದು ಖಾತೆದಾರರು ತಿಳಿಸಿದರು.ಖಾತೆದಾರರು ಶಾಖೆಗೆ ಹೋಗಿ ಖಾತೆ ಅಕೌಂಟ್ ಚೆಕ್ ಮಾಡಿಸಿಕೊಂಡ ಬಳಿಕ ವಿಚಾರ ಬೆಳಕಿಗೆ ಬಂದಿದ್ದು, ಈ ಕುರಿತು ಮೈಸೂರಿನ ಜಿಲ್ಲಾ ಅಂಚೆ ಕಚೇರಿಗೆ ದೂರು ದಾಖಲಿಸಲಾಗಿತ್ತು. ಅದರಂತೆ ಸಾರ್ವಜನಿಕರಿಗೆ ವಿಷಯ ತಿಳಿದು ಖಾತೆದಾರರು ಅಕೌಂಟ್ ಚೆಕ್ ಮಾಡಿಸಿಕೊಳ್ಳಲು ಮುಗಿ ಬಿದ್ದರು. ವಿಚಾರ ಗಮನಕ್ಕೆ ಬಂದ ಕೂಡಲೇ ಸಿಬ್ಬಂದಿ ದೀಪಕ್ ಎಂಬಾತ ಪರಾರಿಯಾಗಿದ್ದಾನೆ ಎನ್ನಲಾಗಿದೆ.ಮೈಸೂರಿನ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಹರೀಶ್ ಅವರೊಂದಿಗೆ ಖಾತೆದಾರರು ಕರೆ ಮಾಡಿ ವಿಷಯ ತಿಳಿಸಿದ್ದು, ದೀಪಕ್ ವಿರುದ್ಧ ಶಿಸ್ತು ಕ್ರಮಕ್ಕಾಗಿ ಮನವಿ ಮಾಡಿದರು. ಪ್ರತಿ ಖಾತೆದಾರರ ಅಕೌಂಟ್ ಚೆಕ್ ಮಾಡಿ, ನಂತರ ಎಷ್ಟು ಹಣ ಪೋಲಾಗಿದೆ ಎಂಬುದು ಖಚಿತ ಮಾಹಿತಿ ದೊರಕಲಿದೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರ ವಿರುದ್ಧ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.ಈ ಕುರಿತು ಪೊಲೀಸ್ ಠಾಣೆಗೆ ದೂರುದಾರರು ದೂರು ನೀಡಲು ಹೋದಾಗ ಕೇಂದ್ರ ಕಚೇರಿಯಾದರಿಂದ ನಾವು ದೂರು ದಾಖಲಿಸುವುದಕ್ಕೆ ನಮಗೆ ಬರುವುದಿಲ್ಲ ಎಂದು ದೂರು ದಾಖಲಾಗಿಲ್ಲ. ಈ ಸಂಬಂಧ ಹಣ ಖಾತೆಯಲ್ಲಿ ಇಲ್ಲದೆ ಇರುವುದರಿಂದ ಅಳುತ್ತಿರುವ ದೃಶ್ಯ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂತು,ತನಿಖೆ ವೇಳೆ ಅಂಚೆ ಕಚೇರಿಯ ಇನ್ ಸ್ಪೆಕ್ಟರ್ ಕುಮಾರ್ ಅಬಿನಿತ್, ಅಂಚೆ ಮೇಲ್ವಿಚಾರಕ ಲೊಕೇಶ್ ಹಾಗೂ ಸಿಬ್ಬಂದಿ ವರ್ಗ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು