ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರಿಗೆ ಬಂಧನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಸತತ 48 ತಾಸುಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಇಬ್ಬರ ನಿವಾಸ ಮತ್ತು ನಿಗಮದ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅಕ್ರಮ ವರ್ಗಾವಣೆ ಪ್ರಕರಣ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರಿಗೆ ಬಂಧನ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಸತತ 48 ತಾಸುಗಳ ಕಾಲ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಇಬ್ಬರ ನಿವಾಸ ಮತ್ತು ನಿಗಮದ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

ಇಬ್ಬರ ನಿವಾಸಗಳಲ್ಲಿ ಶೋಧ ಕಾರ್ಯವನ್ನು ಎರಡನೇ ದಿನವಾದ ಗುರುವಾರವೂ ಮುಂದುವರಿಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತಷ್ಟು ಮಾಹಿತಿಯನ್ನು ಕ್ರೋಡೀಕರಿಸಿದ್ದಾರೆ. ನಿಗಮದ ಕಚೇರಿಯಲ್ಲೂ ಶೋಧ ಕಾರ್ಯ ನಡೆಸಿ ಅಕ್ರಮ ವರ್ಗಾವಣೆ ಸಂಬಂಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆಗಳಲ್ಲಿ ಅಕ್ರಮದ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.

ನಾಗೇಂದ್ರ ಮತ್ತು ದದ್ದಲ್‌ ಆಪ್ತರ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಮತ್ತು ನಿಗಮದ ಕಚೇರಿಯಲ್ಲಿ ಸಿಕ್ಕ ದಾಖಲೆಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಇ.ಡಿ. ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ನಾಗೇಂದ್ರ ಮತ್ತು ದದ್ದಲ್‌ ಅವರನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.

ಇಡೀ ದಿನ ವಿಚಾರಣೆ, ಶೋಧ:

ಗುರುವಾರ ಇ.ಡಿ. ಅಧಿಕಾರಿಗಳು ತಂಡೋಪತಂಡವಾಗಿ ಶೋಧ ಕಾರ್ಯ ಮತ್ತು ಲಭ್ಯವಾಗಿರುವ ಮಾಹಿತಿ ಆಧಾರದ ಮೇಲೆ ವಿಚಾರಣೆಗೊಳಪಡಿಸಿದ್ದಾರೆ. ಡಾಲರ್ಸ್‌ ಕಾಲೋನಿಯಲ್ಲಿನ ನಾಗೇಂದ್ರ ನಿವಾಸ ಮತ್ತು ಯಲಹಂಕ ಬಳಿ ಇರುವ ಬನಸಗೌಡ ದದ್ದಲ್‌ ನಿವಾಸದಲ್ಲಿ ತೀವ್ರ ವಿಚಾರಣೆಗೊಳಪಡಿಸಿ ಮತ್ತಷ್ಟು ಮಾಹಿತಿಯನ್ನು ಕ್ರೋಡೀಕರಿಸಲಾಗಿದೆ. ಇನ್ನು, ಬಸನಗೌಡ ದದ್ದಲ್‌ ಅವರ ಆಪ್ತ ಎನ್ನಲಾದ ಪಂಪಣ್ಣ ಎಂಬಾತನನ್ನು ಸಹ ರಾಯಚೂರಿನಲ್ಲಿ ತೀವ್ರ ವಿಚಾರಣೆಗೊಳಪಡಿಸಿ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ನಡುವೆ, ವಸಂತ ನಗರದಲ್ಲಿನ ವಾಲ್ಮೀಕಿ ಅಭಿವೃದ್ಧಿ ನಿಗಮ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಲಾಯಿತು. ಈ ವೇಳೆ ಲೆಕ್ಕ ಪರಿಶೋಧನಾ ಅಧಿಕಾರಿಗಳನ್ನು ಕಚೇರಿಗೆ ಕರೆಸಿ ನಿಗಮದ ಆರ್ಥಿಕ ವ್ಯವಹಾರವನ್ನು ಪರಿಶೀಲಿಸಲಾಗಿದೆ. ನಿಗಮದಲ್ಲಿನ ಒಟ್ಟಾರೆ ಮೊತ್ತ ಮತ್ತು ಯೂನಿಯನ್‌ ಬ್ಯಾಂಕ್‌ಗೆ ಯಾವ ಖಾತೆಯಿಂದ ಮತ್ತು ಯಾವ ದಿನಾಂಕದಲ್ಲಿ ಎಷ್ಟು ಹಣ ವರ್ಗಾವಣೆ ಮಾಡಲಾಗಿದೆ ಎಂಬುದರ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಅಲ್ಲದೇ, ನಿಗಮಕ್ಕೆ ಕೀ ಮೇಕರ್ಸ್‌ರನ್ನು ಕರೆಸಿ ಲಾಕರ್‌ ತೆಗೆದು ಪರಿಶೀಲನೆ ನಡೆಸಲಾಗಿದ್ದು, ಈ ಬಗ್ಗೆ ವಿಡಿಯೋ ರೆಕಾರ್ಡ್‌ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ನಿಗಮದ ಸಿಬ್ಬಂದಿಯ ಕಾರ್ಯವ್ಯಾಪ್ತಿಯ ಕುರಿತು ಇ.ಡಿ. ಅಧಿಕಾರಿಗಳು ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಸರ್ಕಾರದಿಂದ ಕಳೆದ 5 ವರ್ಷದಲ್ಲಿ ನಿಗಮಕ್ಕೆ ಎಷ್ಟು ಹಣ ನಿಗಮಕ್ಕೆ ಬಂದಿದೆ ಮತ್ತು 187 ಕೋಟಿ ರು. ಹಣ ಒಮ್ಮೆಲೇ ಖಾತೆಗೆ ಬರಲು ಕಾರಣವೇನು? ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಯಾವಾಗ ಸಲ್ಲಿಕೆಯಾಗಿತ್ತು? ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಳ್ಳಲಾಗಿದೆ. ನಿಗಮದ ಕಚೇರಿಯಲ್ಲಿ ಎಲ್ಲಾ ಪರಿಶೀಲನೆ ಕಾರ್ಯ ಮುಗಿಸಿ ವಿಚರಣಾ ಪತ್ರಕ್ಕೆ ಹಿರಿಯ ಅಧಿಕಾರಿಗಳ ಸಹಿ ಪಡೆದು ಇ.ಡಿ. ಅಧಿಕಾರಿಗಳು ತೆರಳಿದರು ಎಂದು ಹೇಳಲಾಗಿದೆ.

ಬುಧವಾರವಷ್ಟೇ ನಾಗೇಂದ್ರ ಆಪ್ತ ಸಹಾಯಕ ಹರೀಶ್‌ನನ್ನು ಇ.ಡಿ. ಅಧಿಕಾರಿಗಳು ವಿಚಾರಣೆಗೊಳಿಸಿದ್ದರು. ಹೆಚ್ಚಿನ ಮಾಹಿತಿಗಾಗಿ ಗುರುವಾರವೂ ಸಹ ಇಡಿ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದರು. ಈ ವೇಳೆ ಹವಾಲಾ ಹಣದ ಬಗ್ಗೆ ಸೇರಿದಂತೆ ನಿಗಮದ ಹಣ ಅಕ್ರಮ ಕುರಿತು ಪ್ರಶ್ನಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ.

ಶೇಷಾದ್ರಿಪುರ ಬಳಿಯ ಹೊಟೇಲ್‌ವೊಂದರಲ್ಲಿ 25 ಲಕ್ಷ ರು.ನಂತೆ 2 ಬ್ಯಾಗ್‌ಗಳಲ್ಲಿ ಆರೋಪಿಗಳಾದ ಪದ್ಮನಾಭ ಮತ್ತು ಪರಶುರಾಮ್‌ ಅವರಿಂದ ಹರೀಶ್‌ ಹಣ ಪಡೆದಿದ್ದ ಎನ್ನಲಾಗಿದೆ. ಈ ಬಗ್ಗೆಯೂ ಬಗ್ಗೆ ಇ.ಡಿ. ಅಧಿಕಾರಿಗಳು ಪ್ರಶ್ನಿಸಿ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೇ, ದದ್ದಲ್‌ ಆಪ್ತ ಪಂಪಣ್ಣನಿಗೂ 5 ಲಕ್ಷ ನೀಡಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ರಾಯಚೂರಿನಲ್ಲಿ ಇ.ಡಿ. ಅಧಿಕಾರಿಗಳು ಪಂಪಣ್ಣನನ್ನು ವಿಚಾರಣೆ ನಡೆಸಲಿ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

ಇದೇ ವೇಳೆ ಬಸನಗೌಡ ದದ್ದಲ್‌ ಸಂಬಂಧಿ ಎನ್ನಲಾದ ಕಾರ್ತಿಕ್‌ ಎಂಬಾತನನ್ನು ಸಹ ವಿಚಾರಣೆಗೊಳಪಡಿಸಲಾಗಿದೆ. ಇ.ಡಿ. ಕಚೇರಿಯಲ್ಲಿಯೇ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಬ್ಯಾಂಕ್‌ ಅಧಿಕಾರಿಗಳ ಮುಂದೆ ನಾಗೇಂದ್ರ ವಿಚಾರಣೆ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ನಾಗೇಂದ್ರ ಅವರನ್ನು ಇ.ಡಿ. ಅಧಿಕಾರಿಗಳು ಬ್ಯಾಂಕ್‌ ಅಧಿಕಾರಿಗಳ ಮುಂದೆ ದಾಖಲೆಯನ್ನಿಟ್ಟು ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ.

ಬುಧವಾರ ಬ್ಯಾಂಕ್‌ ದಾಖಲೆಗಳ ಸಮೇತ ಪ್ರಶ್ನಿಸಿದರೂ ಸರಿಯಾದ ಉತ್ತರ ನೀಡದ ಕಾರಣ ಗುರುವಾರ ಬ್ಯಾಂಕ್‌ನ ಅಧಿಕಾರಿಗಳನ್ನು ಕರೆಸಿ ಅವರ ಸಮ್ಮುಖದಲ್ಲಿ ವಿಚಾರಣೆಗೊಳಪಡಿಸಿದ್ದಾರೆ. ವ್ಯವಹಾರಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌ ಅವರ ವಿಚಾರಣೆಯನ್ನು ಸಹ ಅವರ ಮನೆಯಲ್ಲಿಯೇ ನಡೆಸಲಾಯಿತು. ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಸತ್ಯನಾರಾಯಣ ವರ್ಮಾ ಅವರಿಂದ ದದ್ದಲ್‌ ಆಪ್ತ ಸಹಾಯಕ ಪಂಪಣ್ಣ 50 ಲಕ್ಷ ರು. ಪಡೆದಿರುವ ಆರೋಪ ಇದೆ. ಈ ಬಗ್ಗೆ ದದ್ದಲ್‌ ಅವರನ್ನು ಪ್ರಶ್ನಿಸಲಾಗಿದೆ. ಅಲ್ಲದೇ, ನಿಗಮದ ಅಧ್ಯಕ್ಷರಾದ ಮೇಲೆ ಕೈಗೊಂಡ ಕಾರ್ಯಗಳ ಬಗ್ಗೆ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.