ಕಾಂಗ್ರೆಸ್‌ಗೆ ಬುದ್ಧಿ ಕಲಿಸಲು ಮೈತ್ರಿ ಅಭ್ಯರ್ಥಿಗೆ ಹೆಚ್ಚು ಮತ: ವಿಪಕ್ಷ ನಾಯಕ ಆರ್.ಅಶೋಕ್

| Published : Oct 28 2024, 01:00 AM IST / Updated: Oct 28 2024, 01:29 PM IST

ಕಾಂಗ್ರೆಸ್‌ಗೆ ಬುದ್ಧಿ ಕಲಿಸಲು ಮೈತ್ರಿ ಅಭ್ಯರ್ಥಿಗೆ ಹೆಚ್ಚು ಮತ: ವಿಪಕ್ಷ ನಾಯಕ ಆರ್.ಅಶೋಕ್
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಕಲಿಸಲು ಜನರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಹೆಚ್ಚು ಮತ ಹಾಕಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು. ಹಾಸನದಲ್ಲಿ ಹಾಸನಾಂಬೆ ದೇವಿ ದರ್ಶನದ ನಂತರ ಮಾತನಾಡಿದರು.

 ಹಾಸನ : ಚನ್ನಪಟ್ಟಣದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬುದ್ಧಿ ಕಲಿಸಲು ಜನರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ಹೆಚ್ಚು ಮತ ಹಾಕಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಭಾನುವಾರ ಅಧಿದೇವತೆ ಹಾಸನಾಂಬೆ ದೇವಿ ದರ್ಶನ ಪಡೆದು ನಂತರ ದೇವಾಲಯದ ಹೊರಗೆ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹದಿನಾರು ತಿಂಗಳಿನಿಂದ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿ ದಿನ ಸರ್ಕಾರದ ಹಣವನ್ನು ಲೂಟಿ, ದುರುಪಯೋಗ ಮಾಡುವುದರಲ್ಲಿ ನಿರತರಾಗಿದ್ದಾರೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ದಲಿತರ ಹಣ ನುಂಗಿದ್ದಾರೆ. ಮೈನಿಂಗ್ ಹಗರಣದಲ್ಲಿ ಕಾಂಗ್ರೆಸ್ ಶಾಸಕ ಶಿಕ್ಷೆಗೆ ಒಳಗಾಗಿದ್ದಾರೆ. ಇದೆಲ್ಲಾ ನೋಡುತ್ತಿದ್ದರೆ ಜನ ಈ ಬೈಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠವನ್ನು ಕಲಿಸುತ್ತಾರೆ ಅನಿಸುತ್ತದೆ ಎಂದು ಹೇಳಿದರು.

ಮೂರಕ್ಕೆ ಮೂರು ಬೈ ಎಲೆಕ್ಷನ್ ನಾವೇ ಗೆಲ್ಲುತ್ತೇವೆ. ಕಳೆದ ಹದಿನಾರು ತಿಂಗಳಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು, ನೀರಾವರಿ ಯೋಜನೆ ಯಾವುದು ಪ್ರಾರಂಭವಾಗಿಲ್ಲ. ಎಲ್ಲಾ ಕಡೆ ರಸ್ತೆಗಳು ಹಳ್ಳ ಬಿದ್ದಿದ್ದರೂ ಅದಕ್ಕೆ ಗಮನ ಕೊಡುತ್ತಿಲ್ಲ. ಮಳೆ ಬಂದು ಬೆಳೆ ಹಾನಿ ಆಗಿ ರೈತರು ಕಂಗಾಲಾಗಿದ್ದರೂ ಅದರ ಬಗ್ಗೆ ಏನು ಗಮನವೇ ಇರುವುದಿಲ್ಲ. ಲೂಟಿಯಲ್ಲೇ ಮುಳುಗಿದೆ. ಇದನ್ನೆಲ್ಲಾ ಗಮನಿಸುತ್ತಿರುವ ಜನರು ಬೈ ಎಲೆಕ್ಷನ್‌ನಲ್ಲಿ ಬುದ್ದಿ ಕಲಿಸುತ್ತಾರೆ. ಚನ್ನಪಟ್ಟಣ ಬೈ ಎಲೆಕ್ಷನ್ ನಾಮಪತ್ರ ಸಲ್ಲಿಕೆಗೆ ನಾನು ಹೋಗಿದ್ದಾಗ ಅಲ್ಲಿರುವ ಕಾರ್ಯಕರ್ತರ ಹುಮ್ಮಸ್ಸು, ನಾಮಪತ್ರ ಸಲ್ಲಿಕೆಗೆ ಮೂವತ್ತು ಸಾವಿರ ಜನ ಸೇರಿದ್ದಾರೆ. ಜನರಲ್ಲಿ ಉತ್ಸಾಹ ಇದೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಕಲಿಸಬೇಕು. ಜನ ಈ ಬಾರಿ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿಗೆ ಓಟು ಮಾಡುತ್ತಾರೆ ಎಂದರು.

ಯೋಗೇಶ್ವರ್ ಅವರು ಪ್ರತಿ ಚುನಾವಣೆಗೂ ಪಕ್ಷಾಂತರ ಮಾಡಿದ್ದು, ಏಳು ಬಾರಿ ಪಕ್ಷಾಂತರ ಮಾಡಿದ್ದಾರೆ. ಯಾವ ಪಾರ್ಟಿ ಆಡಳಿತದಲ್ಲಿ ಇರುತ್ತೋ ಅದಕ್ಕೆ ಪಲಾಯನ ಮಾಡುತ್ತಾರೆ. ಹಿಂದೆ ಬಿಜೆಪಿ ರೂಲಿಂಗ್‌ನಲ್ಲಿ ಇದ್ದಾಗ ಅಲ್ಲಿಗೆ ಬಂದಿದ್ದರು. ಅದರ ಹಿಂದೆ ಕಾಂಗ್ರೆಸ್ ರೂಲಿಂಗ್‌ನಲ್ಲಿ ಇತ್ತು ಅಲ್ಲಿಗೆ ಹೋಗಿದ್ದರು. ಈಗ ಕಾಂಗ್ರೆಸ್ ಸರ್ಕಾರವಿದ್ದು, ಅಲ್ಲಿಗೆ ಈಗ ಹೋಗಿದ್ದಾರೆ. ಅವರು ಪ್ರತಿ ಚುನಾವಣೆಗೂ ಒಂದೊಂದು ಪಾರ್ಟಿ, ಸಿಂಬಲ್‌ನ್ನ ಆಯ್ಕೆ ಮಾಡ್ತಾರೆ. ಶಾಶ್ವತ ಕೆಲಸ ಮಾಡುವವರನ್ನು ಜನ ಆಯ್ಕೆ ಮಾಡ್ತಾರೆ. ಅಲ್ಲಿನ ನೀರಾವರಿ ಯೋಜನೆಗೆ ಸುಮಾರು ೧೫೦ ಕೋಟಿ ರು. ಬಿಜೆಪಿ ಸರ್ಕಾರ ಕೊಟ್ಟಿದೆ. ಅದನ್ನು ನೆನಪಿಟ್ಟುಕೊಂಡು ಬಿಜೆಪಿಗೆ, ನರೇಂದ್ರ ಮೋದಿಗೆ, ದೇವೇಗೌಡರ ಪರವಾಗಿ ನಿಂತಿರುವ ನಿಖಿಲ್ ಕುಮಾರಸ್ವಾಮಿಗೆ ಓಟು ಮಾಡ್ತಾರೆ ಎನ್ನುವ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯೋಗೇಶ್ವರ್‌ಗೆ ಟಿಕೆಟ್ ಕೊಡಿಸಲು ನಾನು ಸೀರಿಯಸ್ ಆಗಿ ಟ್ರೈ ಮಾಡಿದ್ವಿ. ನಮ್ಮ ಎಲ್ಲಾ ಲೀಡರ್‌ಗಳು ಟ್ರೈ ಮಾಡಿದ್ರು, ಅವರು ದೆಹಲಿಗೆ ಹೋಗಿದ್ದರು. ಟಿಕೆಟ್ ಕೊಡ್ತೀವಿ ಅಂದ್ರೂ ಬೇಡ ಎಂದು ಹೊರಟು ಹೋದರು. ಮೂರು ತಿಂಗಳ ಹಿಂದೆಯೇ ಇವೆಲ್ಲಾ ಪ್ಲಾನ್ ಮಾಡಿದ್ದರು. ಮೂರು ತಿಂಗಳ ಹಿಂದೆ ಡಿ.ಕೆ.ಶಿವಕುಮಾರ್ ಜತೆ ಮಾತನಾಡಿದ್ದರು. ಪದೇ, ಪದೇ ಡಿ.ಕೆ.ಸುರೇಶ್ ಅವರು ಸಪ್ರೈಸ್ ಅಭ್ಯರ್ಥಿ ನಿಲ್ಲುಸ್ತೀವಿ ಅಂತಾರೆ, ಇದೇ ಸಪ್ರೈಸ್! ಡಿ.ಕೆ.ಸುರೇಶ್ ಅವರು ನಿಲ್ಲಬೇಕಿತ್ತು, ನಿಲ್ಲಲಿಲ್ಲ. ಮುಂಚೆನೇ ಫ್ರೀ ಪ್ಲಾನ್ ಮಾಡಿಕೊಂಡಿದ್ದರು. ಜೆಡಿಎಸ್, ಬಿಜೆಪಿಯವರು ಟಿಕೆಟ್ ಕೊಟ್ಟಿಲ್ಲ ಎಂದು ಸಿಂಪತಿ ಕ್ರಿಯೆಟ್ ಮಾಡಿಕೊಳ್ಳುವುದಕ್ಕೋಸ್ಕರ ಈ ನಾಟಕವನ್ನು ಆಡಿದ್ದಾರೆ. ಜನ ಬುದ್ಧಿ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ನಿಖಿಲ್ ಅವರು ಎರಡು ಬಾರಿ ಸೋತಿದ್ದಾರೆ. ಮೂರನೇ ಬಾರಿ ಚಕ್ರವ್ಯೂಹವನ್ನು ಭೇದಿಸುತ್ತಾರೆ. ಅರ್ಜುನನ ರೀತಿ ಹೋರಾಟ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ. ಅಭಿಮನ್ಯು ಪಾತ್ರ ಬಿಟ್ಟು ಅರ್ಜುನನ ಪಾತ್ರ ಕೊಟ್ಟಿದ್ದೇವೆ. ಅರ್ಜುನ ಇದನ್ನೆಲ್ಲಾ ಭೇದಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಬಿಜೆಪಿ ಎಲ್ಲಾ ನಾಯಕರು ಪೂರ್ತಿ ಪ್ರಚಾರಕ್ಕೆ ಹೋಗುತ್ತಾರೆ. ಯಡಿಯೂರಪ್ಪ ಅವರು ಮೂರು ದಿನ ಟೈಂ ಕೊಟ್ಟಿದ್ದಾರೆ. ನಾನು, ಅಶ್ವಥ್ ನಾರಾಯಣ್, ಸದಾನಂದಗೌಡರು, ಲಿಂಗಾಯಿತ, ದಲಿತ, ಹಿಂದುಳಿದ ನಾಯಕರು ಹೋಗುತ್ತಿದ್ದೇವೆ. ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ನಮ್ಮ ಪೂರ್ತಿ ಶಕ್ತಿ ಹಾಕಲಾಗಿದ್ದು, ಜಯ ನಮಗೆ ಸಿಗಲಿದೆ ಎಂದರು.