ಭೂತನಾಳ ಕೆರೆಗೆ ಬರಲಿದೆ ಮತ್ತಷ್ಟು ನೀರು

| Published : Mar 02 2024, 01:49 AM IST

ಸಾರಾಂಶ

ವಿಜಯಪುರ: ನಗರಕ್ಕೆ ನೀರು ಪೂರೈಸುವ ಭೂತನಾಳ ಕೆರೆಗೆ ಮತ್ತಷ್ಟು ನೀರು ಹರಿಸಲಾಗುತ್ತಿದ್ದು, ಅರಕೇರಿ ಏತ ನೀರಾವರಿ ಮೂಲಕವೂ ಇಂದಿನಿಂದ ನೀರು ಬಿಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ವಿಜಯಪುರ: ನಗರಕ್ಕೆ ನೀರು ಪೂರೈಸುವ ಭೂತನಾಳ ಕೆರೆಗೆ ಮತ್ತಷ್ಟು ನೀರು ಹರಿಸಲಾಗುತ್ತಿದ್ದು, ಅರಕೇರಿ ಏತ ನೀರಾವರಿ ಮೂಲಕವೂ ಇಂದಿನಿಂದ ನೀರು ಬಿಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರದ ಜೀವನಾಡಿ ಭೂತನಾಳ ಕೆರೆಯು ಬರಗಾಲದಿಂದ ಬತ್ತಿ ಹೋಗುತ್ತಿದ್ದು, ನಗರದಲ್ಲಿ ಕುಡಿಯುವ ನೀರಿನ ತೊಂದರೆ ಎದುರಾಗಿತ್ತು. ಈ ಸಮಸ್ಯೆ ನಿವಾರಿಸುವ ಸಲುವಾಗಿ ಮುಳವಾಡ ಏತ ನೀರಾವರಿ ಯೋಜನೆಯಡಿ ನಿರ್ಮಾಣವಾದ ತಿಡಗುಂದಿ ಆಕ್ವಾಡಕ್ಟ್ ಮೂಲಕ ಭೂತನಾಳ ಕೆರೆಗೆ ಕೃಷ್ಣಾನದಿ ನೀರು ತುಂಬಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದು, ಅಧಿಕಾರಿಗಳು ಈಗಾಗಲೇ ನೀರು ಹರಿಸುತ್ತಿದ್ದಾರೆ.

ಈಗ ಪೂರ್ಣ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ದೃಷ್ಟಿಯಿಂದ ಅರಕೇರಿ ಏತ ನೀರಾವರಿ ಮೂಲಕ ನೀರು ಹರಿಸುವಂತೆ ಸೂಚಿಸಿದ್ದೇನೆ. ಅದರಂತೆ, ಕೆರೆಯ ಮತ್ತೊಂದು ಭಾಗಕ್ಕೆ ಇಂದಿನಿಂದ ನೀರು ಹರಿಸಲಾಗುತ್ತಿದೆ. ವಿದ್ಯುತ್ ಮೋಟಾರ್‌ಗಳನ್ನು ಬಳಸದೆ ನೈಸರ್ಗಿಕವಾಗಿ ನೀರು ಹರಿದು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಭೂತನಾಳ ಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಾಗಲಿದೆ. ಹೀಗಾಗಿ ಈ ಬಾರಿಯ ಬೇಸಿಗೆಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದೆಂಬ ವಿಶ್ವಾಸ ನನಗಿದೆ.

ಈಗ ಭೂತನಾಳ ಕೆರೆಗೆ ನೀರು ತುಂಬಿಸುತ್ತಿರುವುದರಿಂದ ಮುಂದಿನ ಮೂರು ತಿಂಗಳು ಬೇಸಿಗೆಯಲ್ಲಿ ಕುಡಿಯಲು ನೀರಿನ ಸಮಸ್ಯೆ ಆಗುವುದಿಲ್ಲ ಎಂದು ಸಚಿವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.