ರೋಟರಿಯಿಂದ ಶವ ಶೈತ್ಯಾಗಾರದ ಪೆಟ್ಟಿಗೆ ಹಸ್ತಾಂತರ

| Published : Jul 31 2024, 01:04 AM IST

ಸಾರಾಂಶ

ರೋಟರಿ ಸಂಸ್ಥೆ ವತಿಯಿಂದ ಸೋಮವಾರಪೇಟೆ ರೋಟರಿ ಭವನದಲ್ಲಿ ಶವ ಶ್ಶೆತ್ಯಾಗಾರದ ಪೆಟ್ಟಿಗೆಯ ಹಸ್ತಾಂತರವನ್ನು ಮಂಗಳವಾರ ಶಾಸಕ ಡಾ. ಮಂತರ್ ಗೌಡ ನೆರವೇರಿಸಿದರು. ನಂತರ ಮಾತನಾಡಿದ ಅವರು, ಇಂದು ಮೃತದೇಹವನ್ನು ಒಂದೆರಡು ದಿನಗಳ ಕಾಲ ಸಂರಕ್ಷಿಸಿ ಇಡಲು ಶ್ಶೆತ್ಯಾಗಾರದ ಅವಶ್ಯಕತೆ ಹೆಚ್ಚಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ರೋಟರಿ ಸಂಸ್ಥೆ ವತಿಯಿಂದ ಇಲ್ಲಿನ ರೋಟರಿ ಭವನದಲ್ಲಿ ಶವ ಶ್ಶೆತ್ಯಾಗಾರದ ಪೆಟ್ಟಿಗೆಯ ಹಸ್ತಾಂತರವನ್ನು ಮಂಗಳವಾರ ಶಾಸಕ ಡಾ. ಮಂತರ್ ಗೌಡ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಇಂದು ಮೃತದೇಹವನ್ನು ಒಂದೆರಡು ದಿನಗಳ ಕಾಲ ಸಂರಕ್ಷಿಸಿ ಇಡಲು ಶ್ಶೆತ್ಯಾಗಾರದ ಅವಶ್ಯಕತೆ ಹೆಚ್ಚಾಗಿದೆ. ಉಳ್ಳವರು ಹೆಚ್ಚು ಹಣ ನೀಡಿ ನಗರ ಪ್ರದೇಶದಿಂದ ತಂದು ಇಟ್ಟುಕೊಳ್ಳುತ್ತಾರೆ. ಆದರೆ, ಬಡವರಿಗೆ ಕಷ್ಟವಾಗುವುದನ್ನು ಮನಗಂಡ ರೋಟರಿ ಸಂಸ್ಥೆಯ ಸದಸ್ಯರು ಮತ್ತು ದಾನಿಗಳ ನೆರವಿನಿಂದ ಶ್ಶೆತ್ಯಾಗಾರ ನೀಡಲು ಮುಂದೆ ಬಂದಿರುವುದು ಶ್ಲಾಘನೀಯ ಎಂದರು.

ಜನರ ಸಂತೊಷಕ್ಕಿಂತಲೂ ಕಷ್ಟದ ಸಮಯದಲ್ಲಿ ಅವರ ನೆರವಿಗೆ ನಿಲ್ಲಬೇಕಿದೆ. ಅಂತಹ ಕೆಲಸವನ್ನು ರೋಟರಿ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಶವ ಶೈತ್ಯಾಗಾರದ ಪೆಟ್ಟಿಗೆ ದೀರ್ಘಕಾಲ ಬಳಕೆಗೆ ಬರಬೇಕಾದರೆ, ಅದರ ನಿರ್ವಹಣೆ ಮುಖ್ಯವಾಗಿರುತ್ತದೆ. ಅದನ್ನು ಮೋಟಾರು ಚಾಲಕರು ಮತ್ತು ಮಾಲೀಕರ ಸಂಘದವರು ಮಾಡಬೇಕಿದೆ ಎಂದರು.

ಮೈಸೂರಿನ ಗೋಪಾಲ್ ಗೌಡ ಆಸ್ಪತ್ರೆಯ ಮಾಲೀಕ ಸುಶ್ರೂತ್‌ ಗೌಡ ಮಾತನಾಡಿ, ರೋಟರಿ ಸಂಸ್ಥೆಯ ಸೇವೆಗಳು ಸಾವಿರಾರು ಬಡ ಕುಟುಂಬಗಳಿಗೆ ತಲುಪುತ್ತಿವೆ. ಯಾವುದೇ ಚಿಕ್ಕ ಕೆಲಸವನ್ನಾದರೂ, ಅದು ಹೆಚ್ಚಿನವರಿಗೆ ತಲುಪುವಂತೆ ಮಾಡುವುದು ಮಹತ್ಕಾರ್ಯವಾಗಿರುತ್ತದೆ ಎಂದರು.

ಶವ ಶೈತ್ಯಾಗಾರದ ಪೆಟ್ಟಿಗೆಯನ್ನು ಮೋಟಾರು ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಅವರಿಗೆ ಶಾಸಕರು ಹಸ್ತಾಂತರಿಸಿದರು. ರೋಟರಿ ಸಂಸ್ಥೆ ಅಧ್ಯಕ್ಷ ಜೆ.ಕೆ. ಪೊನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯದರ್ಶಿ ಕೆ.ಡಿ. ಬಿದ್ದಪ್ಪ, ವಲಯ ಸೇನಾನಿ ಪ್ರಕಾಶ್ ಕುಮಾರ್, ನಿಕಟಪೂರ್ವ ಸಹಾಯಕ ರಾಜ್ಯಪಾಲ ಎಂ.ಡಿ. ಲಿಖಿತ್, ಪಿ.ಕೆ. ರವಿ ಮತ್ತಿತರರು ಇದ್ದರು.

ಶವ ಶೈತ್ಯಾಗಾರದ ಪೆಟ್ಟಿಗೆಯನ್ನು ಕ್ಲಬ್ ರಸ್ತೆಯ ಸಂಘದ ಕಚೇರಿಯಲ್ಲಿ ಇರಿಸಲಾಗುವುದು. ಯಾರಿಗಾದರೂ ಅವಶ್ಯಕತೆ ಇದ್ದಲ್ಲಿ ೯೮೪೪೪೬೧೧೩೪, ೯೭೪೦೫೦೮೧೮೧ ಮತ್ತು ೯೪೪೮೩೨೫೯೭೫ ನಂಬರನ್ನು ಸಂಪರ್ಕಿಸಿ, ನಿರ್ವಹಣಾ ಶುಲ್ಕ ಭರಿಸಿ ಪಡೆಯಬಹುದು ಎಂದು ಮೋಟಾರು ಮಾಲೀಕರು ಮತ್ತು ಚಾಲಕರ ಸಂಘದ ಕೆ.ಜಿ. ಸುರೇಶ್ ತಿಳಿಸಿದರು.