ಸಾರಾಂಶ
ಚಿತ್ರದುರ್ಗ ತಾಲೂಕಿನ ಹೊಚಿ ಬೋರಯ್ಯ ಬಡಾವಣೆಯಲ್ಲಿ ಕೀಟನಾಶಕ ಸಿಂಪಡಣೆ ಮಾಡುವ ಕಾರ್ಯಕ್ಕೆ ಡಾ.ಕಾಶಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೀಟನಾಶಕ ಸಿಂಪಡಣೆ ಮಾಡುವ ಮೂಲಕ ಸೊಳ್ಳೆಗಳನ್ನು ನಿಯಂತ್ರಣ ಮಾಡಬಹುದು. ಈ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಎನ್ ವಿಬಿಡಿಸಿಪಿ ಅಧಿಕಾರಿ ಡಾ.ಕಾಶಿ ಹೇಳಿದರು.ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕೀಟಜನ್ಯ ರೋಗಗಳ ಸಮಸ್ಯಾತ್ಮಕ ಪ್ರದೇಶ ಎಂದು ಗುರುತಿಸಿರುವ ಹೋಚಿ ಬೋರಯ್ಯ ಬಡವಾಣೆಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ಹಾಗೂ ಬೆಳಗಟ್ಟ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಸೊಳ್ಳೆಗಳ ತಾಣ ನಾಶಕ್ಕಾಗಿ ಕೀಟನಾಶಕ ಸಿಂಪಡಣೆ ಕಾರ್ಯ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರದ ಮಾರ್ಗಸೂಚಿಯಂತೆ ಗ್ರಾಮದಲ್ಲಿ ಕೀಟನಾಶಕ ಸಿಂಪಡಣೆ ಕಾರ್ಯ ನಡೆಯುತ್ತಿದೆ. ಈ ಕುರಿತು ಸಾರ್ವಜನಿಕರಿಗೆ ಟಾಂ ಟಾಂ ಮಾಡುವ ಮೂಲಕ ಮಾಹಿತಿ ನೀಡಲಾಗಿದೆ. ಇಂದು ಕೀಟನಾಶಕ ಸಿಂಪಡಿಸಲು ತಂಡ ರಚಿಸಿ 3 ಪಂಪು ಮೂಲಕ 60 ಮನೆಗಳ ಒಳಗೆ ಹಾಗೂ ಹೊರಗೆ ಸಿಂಪಡಣೆ ಮಾಡಲಾಗಿದೆ ಎಂದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಕೀಟನಾಶಕ ಸಿಂಪಡಣೆಗೆ ನಿರಾಕರಿಸಿದ ಗ್ರಾಮಸ್ಥರಿಗೆ ಸೊಳ್ಳೆಗಳ ಕಚ್ಚುವಿಕೆಯಿಂದ ಮಲೇರಿಯಾ, ಡೆಂಘೀ, ಜೀಕಾ, ಚಿಕೂನ್ ಗುನಿಯಾ ಬರುತ್ತವೆ. ರೋಗವಾಹಕ ಸೊಳ್ಳೆಗಳ ತಾಣ ನಾಶ ಮಾಡುವುದರಿಂದ ಇಂತಹ ಕಾಯಿಲೆ ಹರಡುವುದನ್ನು ತಪ್ಪಿಸಬಹುದು ಎಂದರು.
ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿಕಡಿ ಸಿಂಪಡಣೆ ಮಾಡುವ ನೌಕರರಿಗೆ ಯಾವ ಪ್ರಮಾಣದಲ್ಲಿ ರಸಾಯನಿಕ ಎಷ್ಟು ಲೀಟರ್ ನೀರಿಗೆ ದ್ರಾವಣ ಮಾಡಿಕೊಳ್ಳ ಬೇಕು, ಸಿಂಪಡಣೆ ಮಾಡುವ ವಿಧಾನವನ್ನು ತೋರಿಸಿಕೊಟ್ಟರು. ಗ್ರಾಪಂ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ರುದ್ರಮುನಿ ಮಲ್ಲಿಕಾರ್ಜುನ, ಮಹೇಶ್, ನಾಗೇಶ್ ಆಶಾ ಕಾರ್ಯಕರ್ತೆಯರಾದ ಕವಿತಾ ಹೇಮಲತಾ ಇತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))