ಸಾರಾಂಶ
ವಾರ್ಡ್‌ನಲ್ಲಿ ಸರಿಯಾದ ರಸ್ತೆಯಿಲ್ಲ. ಇರುವ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು ರಸ್ತೆ ತೆರವುಗೊಳಿಸಬೇಕೆಂದು ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹಾ ಯಾವುದೇ ಪ್ರಯೋಜನವಾಗಿಲ್ಲ.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಈ ಏರಿಯಾದಲ್ಲಿ ಸರಿಯಾಗಿ ನೀರು ಬರೊಲ್ಲ, ಚರಂಡಿ, ಇಲ್ಲ, ರಸ್ತೆ ಇಲ್ಲ, ರಾತ್ರಿ ವೇಳೆ ಸರಿಯಾಗಿ ಬೀದಿ ದೀಪಗಳ ಸೌಲಭ್ಯವಿಲ್ಲ. ಜೊತೆಗೆ ಸಂಜೆ ಆದರೂ ಸಾಕು ಸೊಳ್ಳೆಗಳ ಮುತ್ತಿಗೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಇಲ್ಲಿಯ ಪಟ್ಟಣ ಪಂಚಾಯಿತಿಗೆ ಸಕಾಲದಲ್ಲಿ ಕಂದಾಯ ಕಟ್ಟುತ್ತಲೇ ಇದ್ದೇವೆ. ಆದರೂ ಸಹ ನಮಗೆ ಸರಿಯಾಗಿ ಮೂಲ ಸೌಕರ್ಯಗಳನ್ನು ನೀಡಲು ಪಟ್ಟಣ ಪಂಚಾಯಿತಿಯ ಸದಸ್ಯರಾಗಲೀ, ಅಧಿಕಾರಿಗಳಾಗಲೀ ಇದುವರೆಗೂ ಮನಸ್ಸು ಮಾಡಿಲ್ಲ ಎಂದು ಪಟ್ಟಣದ ೮ ನೇ ವಾರ್ಡಿನ ಮುತ್ತುರಾಯ ನಗರದ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ವಾರ್ಡ್‌ನಲ್ಲಿ ಸರಿಯಾದ ರಸ್ತೆಯಿಲ್ಲ. ಇರುವ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು ರಸ್ತೆ ತೆರವುಗೊಳಿಸಬೇಕೆಂದು ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹಾ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿ ಅಪೂರ್ಣಗೊಂಡಿರುವುದರಿಂದ ಮಳೆ ಬಂದ ಸಂದರ್ಭದಲ್ಲಿ ಚರಂಡಿ ನೀರು ಮುಂದೆ ಚರಂಡಿಯಿಲ್ಲದೆ ನೀರು ಹೊರ ಹೋಗದೆ ರಸ್ತೆ ತುಂಬಾ ನೀರು ನಿಂತು ಕೆಸರು ಗದ್ದೆಯಂತಾಗುತ್ತದೆ. ಮೇಲಿನಿಂದ ಹರಿದು ಬಂದ ನೀರು ರಸ್ತೆಯಲ್ಲೇ ನಿಲ್ಲುವುದಲ್ಲದೆ ಚರಂಡಿ ನೀರು ನಮ್ಮ ಮನೆಯ ಸಂಪಿನೊಳಗೆ ನುಗ್ಗುತ್ತಿದೆ. ಇದು ಅನಾರೋಗ್ಯಕ್ಕೆ ಕಾರಣವಾಗಿದೆ. ಸ್ಥಳೀಯ ಪಟ್ಟಣ ಪಂಚಾಯಿತಿ ಸದಸ್ಯ ಮಧು ಮಾತನಾಡಿ, ಮಳೆ ಬಂದ ಸಂದರ್ಭದಲ್ಲಿ ಇಂತಹ ಅವಾಂತರ ಸೃಷ್ಟಿಯಾಗುತ್ತಿದೆ. ಇಲ್ಲಿಯ ರಸ್ತೆಯೇ ಒಂದು ಸಮಸ್ಯೆಯಾಗಿದೆ. ಈ ಹಿಂದೆಯೇ ರಸ್ತೆ ಒತ್ತುವರಿಯಾಗಿದೆ. ಹಲವರು ಕಟ್ಟಡ ಕಟ್ಟಿದ್ದಾರೆ. ಪಂಚಾಯಿತಿಯ ಅಧಿಕಾರಿಗಳು ನಕಾಶೆ ಅನ್ವಯ ಜಾಗ ಗುರುತಿಸಿದರೆ ತೆರವುಗೊಳಿಸಲು ಸಾಧ್ಯವಾಗಲಿದೆ. ಆಗ ರಸ್ತೆ ಗುರ್ತಿಸಲು ಸಾಧ್ಯವಾಗಲಿದೆ. ಅಲ್ಲದೇ ಇಲ್ಲಿಯ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಸಾಧ್ಯವಾಗಲಿದೆ.ಕಂದಾಯ ಪ್ರತಿ ವರ್ಷ ಸಂದಾಯ ಮಾಡುತ್ತಾ ಬಂದಿದ್ದರೂ ಸಹಾ ಇಲ್ಲಿ ಸಿಸಿ ರಸ್ತೆಯಾಗಲೀ, ಚರಂಡಿಯಾಗಲೀ, ಒಳ ಚರಂಡಿಯಾಗಲೀ ಇಲ್ಲ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಸದಸ್ಯರುಗಳಿಗೆ ಹಾಗೂ ವಾರ್ಡ್ ಸದಸ್ಯರಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂದ ಸಂದರ್ಭದಲ್ಲಿ ಕೆಸರಿನಲ್ಲಿ ಓಡಾಡುವಂತಹ ಪರಿಸ್ಥಿತಿ ಬಂದಿದೆ. ಕೂಡಲೇ ಮುಖ್ಯಾಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ರಸ್ತೆ ಹಾಗೂ ಚರಂಡಿ ಅನುಕೂಲ ಕಲ್ಪಿಸಿಕೊಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಬಾಕ್ಸ್,....ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಧರಣಿ ಎಚ್ಚರಿಕೆ
ನಾವು ಕಳೆದ ಮೂವತ್ತು ವರ್ಷಗಳಿಂದಲೂ ಈ ಬಡಾವಣೆಯಲ್ಲಿ ವಾಸವಿದ್ದೇವೆ. ಪಟ್ಟಣ ಪಂಚಾಯಿತಿಯಿಂದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಸರಿಯಾದ ರಸ್ತೆ ಇಲ್ಲ, ಚರಂಡಿ ಇಲ್ಲ. ಹಲವಾರು ಮನೆಗಳಿಂದ ಹೊರಬರುವ ನೀರು ರಸ್ತೆ ಮೇಲೆ ಹರಿಯುತ್ತಿದೆ. ಜೋರಾಗಿ ಮಳೆ ಬಂದರಂತೂ ಚರಂಡಿ ನೀರೆಲ್ಲಾ ಮನೆಗಳ ಸಂಪ್ ಗಳಲ್ಲಿ ಸೇರುತ್ತವೆ. ಕೊಚ್ಚೆ ನೀರಿನ ಆವಾಸ್ಥಾನವಾಗರುವುದರಿಂದ ಸೊಳ್ಳೆಗಳ ಹಾವಳಿ ಜಾಸ್ತಿಯಾಗಿದೆ. ನಿವಾಸಿಗಳು ಹಲವು ರೋಗಗಳಿಂದ ನರಳುವಂತಾಗಿದೆ. ಇಂತಹ ದುರವಸ್ಥೆಯಲ್ಲಿ ನಾವು ಹೇಗೆ ಬದುಕಬೇಕೆಂಬುದೇ ತಿಳಿಯುತ್ತಿಲ್ಲ ಕೂಡಲೇ ಸಂಬಂಧಪಟ್ಟವರು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಸ್ಥಳೀಯರಾದ ನಿವೃತ್ತ ಶಿಕ್ಷಕ ಬೋರಪ್ಪ , ನಾಗರಾಜು, ಜಫ್ರುಲ್ಲಾ, ಜಾಫರ್, ಅನ್ಮತ್ ಅಹಮದ್, ಹನುಮಂತೇಗೌಡ, ರುದ್ರೇಶ್, ಟಿ.ಕೆ.ನವಾಜ್ ಆಕ್ರೋಶ ವ್ಯಕ್ತಪಡಿಸಿದರು.